- ರಾಘು ಶಿವಮೊಗ್ಗ "ದ ಟಾಸ್ಕ್' ಮೂಲಕ ಒಂದೊಳ್ಳೆ ಆ್ಯಕ್ಷನ್ ಥ್ರಿಲ್ಲರ್ ಡ್ರಾಮಾ ನಿರೂಪಿಸಿದ್ದಾರೆ.
- ಜಯಸೂರ್ಯ ಮತ್ತು ಸಾಗರ್ ಆ್ಯಕ್ಷನ್ನಲ್ಲಿ ಮಿಂಚಿದ್ದಾರೆ
- ಜೂಡಾ ಸ್ಯಾಂಡಿ ಸಂಗೀತದ ಹಾಡುಗಳು ಮತ್ತು ಹಿನ್ನೆಲೆ ಸಂಗೀತ ಚಿತ್ರವನ್ನು ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವಾಗಿಸುತ್ತದೆ.
- ಈ ವಾರದ ರೊಮ್ಯಾಂಟಿಕ್ ಕಾಮಿಡಿಗಳ ಅಬ್ಬರದ ನಡುವೆ ಆ್ಯಕ್ಷನ್ ಪ್ರಿಯರಿಗೆ "ದ ಟಾಸ್ಕ್' ಉತ್ತಮ ಆಯ್ಕೆ.
The Task ; ಚಿತ್ರ: ದ ಟಾಸ್ಕ್
ತಾರಾಗಣ: ಜಯಸೂರ್ಯ ಆಜಾದ್, ಸಾಗರ್ ರಾಮ್, ರಾಘು, ಶ್ರೀಲಕ್ಷ್ಮೀ, ಅಚ್ಯುತ್, ಸಂಗೀತಾ, ಅರವಿಂದ್ ಮತ್ತಿತರರು
ಬೆಂಗಳೂರಿಗೆ ಓದಲು ಬಂದ ಸೋದರ ಸಂಬಂಧಿಗಳಾದ ವಿಷ್ಣು (ಸಾಗರ್) ಮತ್ತು ಕಂಠಿ (ಜಯಸೂರ್ಯ) ಹಾಸ್ಟೆಲ್ ವಾರ್ಡನನ್ನೇ ಕೊಂದು ಬಾಲಾಪರಾಧಿ ಕೇಂದ್ರ ಸೇರುತ್ತಾರೆ. ಸಮಾಜಕ್ಕೆ ಬೇಡವಾದ ಹುಡುಗರಿಗೆ ಅಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ರಾಜೇಶ್ (ಅಚ್ಯುತ್) ಆಸರೆಯಾಗುತ್ತಾರೆ. ಒಳ್ಳೆಯ ದಾರಿಯಲ್ಲಿ ನಡೆದು, ಮತ್ತೆ ಸಮಾಜದಲ್ಲಿ ತಲೆಯೆತ್ತಿ ಬದುಕುವ ಆಸೆ ಈ ಯುವಕರದು. ಅದರ ನಡುವೆಯೇ ಮಡಿಕೇರಿಯಲ್ಲಿ ಸಿರಿ (ಶ್ರೀಲಕ್ಷ್ಮೀ) ಎಂಬ ಬಾಲಕಿಯ ಅಪಹರಣವಾಗುತ್ತದೆ. ಆಕೆಯನ್ನು ಆಕೆಯ ಕುಟುಂಬದವರು, ಸಂಬಂಧಿಕರು ಮಾತ್ರವಲ್ಲದೇ ಪೊಲೀಸರು, ಸ್ಥಳಿಯ ರೌಡಿ ಭರಮಣ್ಣ (ರಾಘು), ಸಂಜೀವಿನಿ ಆಸ್ಪತ್ರೆಯ ಮಾಲೀಕ ಸೂರ್ಯಪ್ರಕಾಶ್ (ಬಾಲಾಜಿ ಮನೋಹರ್) ಜತೆಗೆ ವಿಷ್ಣು ಮತ್ತು ಕಂಠಿ ಕೂಡ ಹುಡುಕತೊಡಗುತ್ತಾರೆ. ಆ ಹುಡುಕಾಟದಲ್ಲಿ ಹಲವು ಸತ್ಯಗಳ ಅನಾವರಣವಾಗುತ್ತದೆ. ಆಕೆಯ ಕಿಡ್ನ್ಯಾಪ್ಗೆ ಕಾರಣವೇನು? ಅದಕ್ಕೂ ಆಕೆಯನ್ನು ಹುಡುಕುತ್ತಿರುವ ಪೊಲೀಸರು, ರೌಡಿಗಳಿಗೂ ಏನು ಸಂಬಂಧ? ಈ ಎಲ್ಲ ಪ್ರಶ್ನೆಗಳ ಕುತೂಹಲಕಾರಿ ಪಯಣವೇ "ದ ಟಾಸ್ಕ್'.
ರಾಘು ಶಿವಮೊಗ್ಗ "ದ ಟಾಸ್ಕ್' ಮೂಲಕ ಒಂದೊಳ್ಳೆ ಆ್ಯಕ್ಷನ್ ಥ್ರಿಲ್ಲರ್ ಡ್ರಾಮಾ ನಿರೂಪಿಸಿದ್ದಾರೆ. 135 ನಿಮಿಷಗಳ ಕಥೆಯು ಪ್ರಾರಂಭದಲ್ಲಿ ನಿಧಾನವೆನಿಸಿದರೂ, ಸಾಗಿದಂತೆ ಮುಂದೇನು ಎಂಬ ಕುತೂಹಲದೊಂದಿಗೆ ಪ್ರೇಕ್ಷಕರನ್ನು ಸೀಟಂಚಲ್ಲಿ ಕೂರಿಸುತ್ತದೆ. ಗಂಭೀರವಾಗಿ ಸಾಗುವ ಕಥೆಯಲ್ಲಿ ನಿರೀಸದೇ ಬಂದು ಹೋಗುವ ಒನ್ಲೈನರ್ಗಳು ಅಲ್ಲಲ್ಲಿ ನಗಿಸುತ್ತವೆ. ನಾಯಕರಾಗಿ ಪದಾರ್ಪಣೆ ಮಾಡಿರುವ ಜಯಸೂರ್ಯ ಮತ್ತು ಸಾಗರ್ ಆ್ಯಕ್ಷನ್ನಲ್ಲಿ ಮಿಂಚಿದ್ದಾರೆ. ಬಾಡಿ ಲಾಂಗ್ವೇಜ್, ಡೈಲಾಗ್ ಡೆಲಿವರಿಯಲ್ಲೂ ಇಷ್ಟವಾಗುತ್ತಾರೆ. ನಟನೆಯಲ್ಲಿ ಇನ್ನಷ್ಟು ಪಕ್ವವಾದರೆ ಚಿತ್ರರಂಗದಲ್ಲಿ ಇಬ್ಬರಿಗೂ ಉತ್ತಮ ಭವಿಷ್ಯವಿದೆ. ಸಿರಿ ಪಾತ್ರದಲ್ಲಿ ಶ್ರೀಲಕ್ಷ್ಮೀ ಗಮನ ಸೆಳೆಯುತ್ತಾರೆ. ಭರಮಣ್ಣನಾಗಿ ಖುದ್ದು ರಾಘು ಅಬ್ಬರಿಸಿದ್ದಾರೆ. ಉಳಿದಂತೆ ಸಂಗೀತಾ ಭಟ್, ಅಚ್ಯುತ್ ಕುಮಾರ್, ಗೋಪಾಲಕೃಷ್ಣ ದೇಶಪಾಂಡೆ, ಭರತ್, ಬಾಲಾಜಿ ಮನೋಹರ್ ಸೇರಿ ಎಲ್ಲ ಪಾತ್ರಗಳೂ ಅಚ್ಚುಕಟ್ಟಾಗಿ ಮೂಡಿಬಂದಿವೆ. ಜೂಡಾ ಸ್ಯಾಂಡಿ ಸಂಗೀತದ ಹಾಡುಗಳು ಮತ್ತು ಹಿನ್ನೆಲೆ ಸಂಗೀತ ಚಿತ್ರವನ್ನು ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವಾಗಿಸುತ್ತದೆ. ಪ್ರದಿಪ್ ಪದ್ಮಕುಮಾರ್ ಛಾಯಾಗ್ರಹಣ ಕಥೆಗೆ ಪೂರಕವಾಗಿದೆ. ಒಟ್ಟಾರೆ ಈ ವಾರದ ರೊಮ್ಯಾಂಟಿಕ್ ಕಾಮಿಡಿಗಳ ಅಬ್ಬರದ ನಡುವೆ ಆ್ಯಕ್ಷನ್ ಪ್ರಿಯರಿಗೆ "ದ ಟಾಸ್ಕ್' ಉತ್ತಮ ಆಯ್ಕೆ.