radheya film poster 
ಸ್ಯಾಂಡಲ್‌ವುಡ್

radheya film review: ಸರಣಿ ಕೊಲೆಗಾರನ ನೂರಾರು ನೋವುಗಳು

ಪ್ರಮುಖ ಮುಖ್ಯಾಂಶಗಳು

  • ವೇದ ಗುರು ಮೊದಲ ಪ್ರಯತ್ನದಲ್ಲಿಯೇ ಹಿಡಿದಿಟ್ಟುಕೊಳ್ಳುವ ಸಸ್ಪೆನ್ಸ್, ಕ್ರೈಮ್ ಕಥೆ ಹೇಳಿದ್ದಾರೆ
  • ನಿರೂಪಣೆಯಲ್ಲಿ ಇನ್ನೊಂದಿಷ್ಟು ರೋಚಕತೆ ಬೇಕಿತ್ತು ಅನಿಸುತ್ತದೆ.
  • ಅಜೇಯ್​ ರಾವ್​ ಸೇರಿ ಕಲಾ ಬಳಗವೇ ಸಿನಿಮಾದ ಹೈಲೈಟ್.
ಚಿತ್ರ: ರಾಧೇಯ
ನಿರ್ದೇಶನ: ವೇದಗುರು
ತಾರಾಗಣ: ಅಜೇಯ್ ರಾವ್, ಸೋನಲ್ ಮೊಂಟೆರೋ, ಧನ್ಯಾ ಬಾಲಕೃಷ್ಣ, ಅರವಿಂದ ರಾವ್, ಗಿರೀಶ್ ಶಿವಣ್ಣ ಮತ್ತಿತರರು
ಶಿವ ಸ್ಥಾವರಮಠ
ಫಾರೆನ್ಸಿಕ್ ಅಧಿಕಾರಿ ರಾಧೇಯ (ಆಜೇಯ್) 36 ಕೊಲೆ ಮಾಡಿರುವ ಆರೋಪ ಸಾಬೀತಾಗಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದಾನೆ. ಇನ್ನೇನು ಕೆಲ ದಿನಗಳಲ್ಲಿ ಗಲ್ಲು ಶಿಕ್ಷೆಗೊಳಗಾಗಲಿರುವ ಆತ, ಕೊನೆಯ ಆಸೆ ಏನೆಂದು ಕೇಳುವ ವಕೀಲರ ಬಳಿ ತಾನು ಹೇಳುವ ಕಥೆಯನ್ನು ಪುಸ್ತಕ ರೂಪದಲ್ಲಿ ತರಬೇಕು. ತಾನು ಹೇಳುವ ಲೇಖಕರಿಂದಲೇ ತನ್ನ ಜೀವನದ ಹಾದಿಯನ್ನು ಬರೆಸಬೇಕು ಎಂದು ಬೇಡಿಕೆ ಇಡುತ್ತಾನೆ. ಅದಕ್ಕೆ ಒಪ್ಪುವ ಪೊಲೀಸ್ ಅಧಿಕಾರಿಗಳು ಆತ ಬಯಸಿದ ಲೇಖಕಿ ಅನುಪಮಾ ರಂಜನ್‌ಳನ್ನು ಕರೆತರುತ್ತಾರೆ. ರಾಧೇಯ ಆಕೆಯ ಬಳಿ ತಾನೇಕೆ ಸರಣಿ ಕೊಲೆ ಮಾಡಿದೆ? ತನ್ನ ಬದುಕಿನಲ್ಲಿ ಬೀಸಿದ ಬಿರುಗಾಳಿಯಾದರೂ ಏನು? ಎಂಬುದನ್ನು ತುಂಬಾ ಕೋಪ, ಆವೇಶದಲ್ಲಿಯೇ ಒಂದೊಂದಾಗಿ ಬಿಚ್ಚಿಡುತ್ತಾನೆ. ಹಾಗಾದರೆ, ಫಾರೆನ್ಸಿಕ್ ಅಧಿಕಾರಿ ರಾಧೇಯ, ಸೀರಿಯಲ್ ಕಿಲ್ಲರ್ ಯಾಕಾದ? ಎನ್ನುವುದೇ ‘ರಾಧೇಯ’ ಚಿತ್ರದ ಮುಖ್ಯಕಥೆ.
ನಿರ್ದೇಶಕ ವೇದ ಗುರು ಮೊದಲ ಪ್ರಯತ್ನದಲ್ಲಿಯೇ ಹಿಡಿದಿಟ್ಟುಕೊಳ್ಳುವ ಸಸ್ಪೆನ್ಸ್, ಕ್ರೈಮ್ ಕಥೆ ಹೇಳಿ ನೈಪುಣ್ಯತೆ ಮೆರೆದಿದ್ದಾರೆ. ಕ್ರೈಮ್ ಕಥೆಯಲ್ಲೊಂದು ಭಾವನಾತ್ಮಕ ಎಳೆಯ ಸ್ಪರ್ಶ ನೀಡಿ, ಬೇರೆಗೆ ಹಾದಿಗೆ ತೆಗೆದುಕೊಂಡು ಹೋಗಿದ್ದಾರೆ. ಆದರೆ, ನಿರೂಪಣೆಯಲ್ಲಿ ಇನ್ನೊಂದಿಷ್ಟು ರೋಚಕತೆ ಬೇಕಿತ್ತು ಅನಿಸುತ್ತದೆ. ಕೆಲ ದೃಶ್ಯಗಳು ಸಿದ್ಧ ಮಾದರಿ ಅನಿಸಿಬಿಡುತ್ತವೆ. ಇನ್ನು ಕಲಾ ಬಳಗವೇ ಸಿನಿಮಾದ ಹೈಲೈಟ್. ಅಜೇಯ್ ರಾವ್ ಈ ಹಿಂದಿನ ಎಲ್ಲ ಸಿನಿಮಾಗಳಿಗಿಂತ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಸೈಲೆಂಟ್ ಆಗಿದ್ದ ಅವರು ಇಲ್ಲಿ ವೈಲೆಂಟ್ ರೂಪ ತಾಳಿದ್ದಾರೆ. ಕೆಲವೆಡೆ ಭಯ ಬರಿಸುವ ರೀತಿಯಲ್ಲಿ ನಟಿಸಿದ್ದಾರೆ. ಇಡೀ ಕಥೆ ಅವರ ಸುತ್ತ ಆವರಿಸಿದ್ದು, ಫುಲ್ ಮಾರ್ಕ್ಸ್ ಗಳಿಸುತ್ತಾರೆ. ಸೋನಲ್ ಪಾತ್ರ ಚಿಕ್ಕದಾದರೂ, ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಗಿರೀಶ್ ಶಿವಣ್ಣ ಅಲ್ಪ ಸ್ವಲ್ಪ ನಗಿಸುವ ಪ್ರಯತ್ನ ಮಾಡಿದ್ದಾರೆ. ಸ್ಯಾಂಡಿ ಅದ್ನಕ್ಕಿ ಸಂಗೀತ ಮತ್ತು ಹಿನ್ನೆಲೆ ಸಂಗೀತ ಸಸ್ಪೆನ್ಸ್-ಕ್ರೈಮ್ ಥ್ರಿಲ್ಲರ್ ಕಥೆಗೆ ಪೂರಕವಾಗಿದೆ.
ರೇಟಿಂಗ್: 3