ಪ್ರಿಯಾಂಕಾ, ನಿಶ್ವಿಕಾ ನಾಯ್ಡು
- ಸ್ಯಾಂಡಲ್‌ವುಡ್‌ನಲ್ಲಿಯೂ ಓಟಿಟಿ ಪರ್ವ ಆರಂಭ
- ಕಾರ್ಪೋರೆಟ್ ಬಾಸ್ ಆದ ಪ್ರಿಯಾಂಕಾ, ಆಪರೇಷನ್ ಬಂಗಾರಿಯಾದ ನಿಶ್ವಿಕಾ
- ಹೊಸ ವೇದಿಕೆ ಪದಾರ್ಪಣೆ ಮಾಡಿದ ನಟಿಯರು
ಬೆಂಗಳೂರು: ಪರಭಾಷಾಗಳಂತೆ ಸ್ಯಾಂಡಲ್‌ವುಡ್‌ನಲ್ಲಿಯೂ ಓಟಿಟಿ ಪರ್ವ ಆರಂಭವಾಗಿದೆ. ಈಗಾಗಲೇ ಹಲವು ಕಲಾವಿದರು ಸಿನಿಮಾಗಳ ಜತೆ ಜತೆಗೆ ಒಟಿಟಿ ಸರಣಿಗಳಲ್ಲಿ ಅಭಿನಯಿಸಿದ್ದಾರೆ. ನಟಿಯರಾದ ಸಂಜನಾ ಆನಂದ್ (ಹನಿಮೂನ್), ಖುಷಿ ರವಿ (ಅಯ್ಯನಮನೆ) ಸೇರಿ ಹಲವರು ವೆಬ್ ಸರಣಿಗಳಲ್ಲಿ ನಟಿಸಿ, ಮಿಂಚಿದ್ದಾರೆ. ಇದೀಗ ಈ ಸಾಲಿಗೆ ಇನ್ನಿಬ್ಬರು ನಟಿಯರು ಸೇರ್ಪಡೆಯಾಗುತ್ತಿದ್ದಾರೆ. ಅವರೇ ನಟಿಯರಾದ ಪ್ರಿಯಾಂಕಾ ಉಪೇಂದ್ರ ಮತ್ತು ನಿಶ್ವಿಕಾ ನಾಯ್ಡು. ಇಬ್ಬರು ಪ್ರತ್ಯೇಕ ವೆಬ್ ಸರಣಿಗಳಲ್ಲಿ ನಟಿಸುತ್ತಿದ್ದಾರೆ.
ಕಾರ್ಪೋರೆಟ್ ಲವ್‌ಸ್ಟೋರಿಯ ಬಾಸ್
ನಟಿ ಪ್ರಿಯಾಂಕಾ ಉಪೇಂದ್ರ ಸ್ಯಾಂಡಲ್‌ವುಡ್‌ನಲ್ಲಿ ಅರ್ಧ ಶತಕ ಬಾರಿಸಿದ್ದಾರೆ. ಅವರ ಅಭಿನಯದ 50ನೇ ಚಿತ್ರ ‘ಡಿಟೆಕ್ಟಿವ್ ತೀಕ್ಷ್ಣ’ ಇತ್ತೀಚೆಗಷ್ಟೇ ರಿಲೀಸ್ ಆಗಿ, ಉತ್ತಮ ಪ್ರತಿಕ್ರಿಯೆ ಗಳಿಸಿದೆ. ಇದೇ ಸಂಭ್ರಮದಲ್ಲಿರುವ ಪ್ರಿಯಾಂಕಾ ಇದೀಗ ‘ಕಾರ್ಪೋರೆಟ್ ಲವ್‌ಸ್ಟೋರಿ’ ಎಂಬ ವೆಬ್ ಸರಣಿ ಮೂಲಕ ಒಟಿಟಿಗೆ ಡೆಬ್ಯೂ ಮಾಡುತ್ತಿದ್ದಾರೆ. ಈ ವಿಚಾರವನ್ನು ಸ್ವತಃ ಪ್ರಿಯಾಂಕಾ ಉಪೇಂದ್ರ ಖಚಿತಪಡಿಸಿದ್ದು, ನೇಪಾಳದ ಪ್ರವಾಸದ ಮಧ್ಯೆಯೇ ಪ್ರಾಜೆಕ್ಟ್ ಬಗ್ಗೆ ಮಾಹಿತಿ ಹಂಚಿಕೊಂಡರು. ‘ಸ್ಯಾಂಡಲ್‌ವುಡ್‌ನಲ್ಲಿ 50 ಸಿನಿಮಾಗಳಲ್ಲಿ ನಟಿಸಿರುವ ನಾನು ಇದೀಗ ಹೊಸ ಚಾಲೆಂಜ್ ಸ್ವೀಕರಿಸುತ್ತಿದ್ದೇನೆ. ‘ಕಾರ್ಪೋರೆಟ್ ಲವ್‌ಸ್ಟೋರಿ’ ವೆಬ್ ಸರಣಿ ಮೂಲಕ ಒಟಿಟಿಗೆ ಡೆಬ್ಯೂ ಮಾಡುತ್ತಿದ್ದೇನೆ. ಈಗಾಗಲೇ ಎರಡು ದಿನಗಳ ಕಾಲ ಶೂಟಿಂಗ್ ಪೂರ್ಣಗೊಳಿಸಿದ್ದೇನೆ. ಇಲ್ಲಿ ನಾನು ಮುಖ್ಯಭೂಮಿಕೆಯಲ್ಲಿದ್ದು, ಕಾರ್ಪೋರೆಟ್ ಸಂಸ್ಥೆಯೊಂದರ ಬಾಸ್ ಪಾತ್ರದಲ್ಲಿದ್ದೇನೆ. ಈ ವೆಬ್ ಸರಣಿಗೆ ಪನ್ನಗ ಭರಣ ನಿರ್ದೇಶನವಿದ್ದು, ಪ್ರಣವ್ ಹಾಗೂ ಸಂಜನಾ ದಾಸ್ ಕಲಾಬಳಗದಲ್ಲಿದ್ದಾರೆ. ಕಾರ್ಪೋರೆಟ್ ಸಂಸ್ಥೆಯೊಂದರಲ್ಲಿ ನಡೆಯುವ ಲವ್‌ಸ್ಟೋರಿ ಸುತ್ತ ಈ ಕಥೆ ಸುತ್ತಲಿದೆ. ಈಗಾಗಲೇ ಸಿನಿಮಾ, ಕಿರುತೆರೆಯಲ್ಲಿ ಕಾಣಿಸಿಕೊಂಡಿರುವ ನನಗೆ ವೆಬ್ ಸರಣಿ ಹೊಸ ಅನುಭವ. ಡಿಜಿಟಲ್ ಕ್ರಾಂತಿ ಬಳಿಕ ವೆಬ್ ಸರಣಿಗೆ ಹೆಚ್ಚು ಪ್ರಾಮುಖ್ಯತೆ ದೊರೆತಿದೆ. ಹಾಗಾಗಿ, ನಾನು ಕೂಡ ಇದೀಗ ವೆಬ್ ಸರಣಿಯತ್ತ ಮುಖಮಾಡಿದ್ದೇನೆ. ಇದು ನನ್ನ ಪಾಲಿಗೆ ಹೊಸ ಪ್ರಯತ್ನ’ ಎಂದು ಹೇಳಿಕೊಳ್ಳುತ್ತಾರೆ. ಇದರ ಜತೆಗೆ ಪ್ರಿಯಾಂಕಾ ಉಪೇಂದ್ರ ಕನ್ನಡದ ‘ವೈರಸ್’, ‘ಕ್ಯಾಪ್ಚರ್’ ಹಾಗೂ ‘ಲವ್ ಈಸ್ ಬ್ಯೂಟಿುಲ್’ ಚಿತ್ರಗಳಲ್ಲಿ ನಟಿಸಿದ್ದು, ಬಿಡುಗಡೆಗೆ ಎದುರು ನೋಡುತ್ತಿದ್ದಾರೆ.
‘ಆಪರೇಷನ್ ಬಂಗಾರಿ’ಯಾದ ಮಸ್ತ್ ಮಲೈಕಾ
ಕನ್ನಡದ ‘ಜೆಂಟಲ್‌ಮ್ಯಾನ್’, ‘ಗುರುಶಿಷ್ಯರು’, ‘ಕರಟಕ ದಮನಕ’ ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿರುವ ಖ್ಯಾತಿ ನಿಶ್ವಿಕಾ ನಾಯ್ಡುಗೆ ಸಲ್ಲುತ್ತದೆ. ಸುದೀಪ್ ಅಭಿನಯದ ‘ಮಾರ್ಕ್’ ಚಿತ್ರದ ‘ಮಸ್ತ್ ಮಲೈಕಾ’ ಹಾಡಿನಲ್ಲಿ ನಟಿ ಕುಣಿದು ಕುಪ್ಪಳಿಸಿದ್ದರು. ಆ ಬಳಿಕ ಅವರು ಯಾವುದೇ ಸಿನಿಮಾದ ಅಪ್‌ಡೇಟ್ ಸಿಕ್ಕಿರಲಿಲ್ಲ. ಇದೀಗ ನಿಶ್ವಿಕಾ ನಾಯ್ಡು ಸದ್ದಿಲ್ಲದೇ ವೆಬ್ ಸರಣಿಯೊಂದರಲ್ಲಿ ನಟಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಅದರ ಹೆಸರು ‘ಆಪರೇಷನ್ ಬಂಗಾರಿ’. ಅದೊಂದು ನೈಜ ಘಟನೆಯಾಧಾರಿತ ಸರಣಿಯಾಗಿದ್ದು, ಈಗಾಗಲೇ ಶೂಟಿಂಗ್ ನಡೆಸಲಾಗುತ್ತಿದೆ ಎಂದು ಮಾಹಿತಿ ತಿಳಿದುಬಂದಿದೆ.