ನವದೆಹಲಿ: ದೆಹಲಿ ಕರ್ನಾಟಕ ಸಂಘವು ಪ್ರತಿ ವರ್ಷ ರಂಗಭೂಮಿ ಕ್ಷೇತ್ರದಲ್ಲಿ ಮಹತ್ತರ ಸೇವೆ ಸಲ್ಲಿಸಿದ ಕಲಾವಿದರನ್ನು ಗುರುತಿಸಿ ನೀಡುವ ಪ್ರತಿಷ್ಠಿತ ‘ಕನ್ನಡ ಭಾರತೀ ರಂಗ ಪ್ರಶಸ್ತಿ’ಯನ್ನು 2026ನೇ ಸಾಲಿಗೆ ಖ್ಯಾತ ರಂಗಭೂಮಿ ಹಾಗೂ ಚಲನಚಿತ್ರ ನಟರಾದ ಶ್ರೀ ಹೆಚ್.ಜಿ. ದತ್ತಾತ್ರೇಯ (ದತ್ತಣ್ಣ) ಅವರಿಗೆ ನೀಡಲು ಸಂಘದ ಕಾರ್ಯಕಾರಿ ಸಮಿತಿಯು ತೀರ್ಮಾನಿಸಿದೆ.
ರಂಗಭೂಮಿ ಕ್ಷೇತ್ರದಲ್ಲಿ ಮಹತ್ತರವಾದ ಸೇವೆಯನ್ನು ಸಲ್ಲಿಸಿದವರನ್ನು ಗುರುತಿಸಿ ನೀಡುವ ವಾರ್ಷಿಕ ಪ್ರಶಸ್ತಿ ಇದಾಗಿದೆ. 2015ರಲ್ಲಿ ಮೊದಲ ಪ್ರಶಸ್ತಿಯನ್ನು ‘ಕನ್ನಡ ಭಾರತಿ’ಯ ಸಂಸ್ಥಾಪಕ ಸದಸ್ಯರಲ್ಲೊಬ್ಬರಾದ ರಂಗಕರ್ಮಿ ಎಂ.ವಿ. ನಾರಾಯಣರಾವ್, 2016ರಲ್ಲಿ ಶ್ರೀಮತಿ ಸರೋಜಿನಿ ಶೆಟ್ಟಿ, 2017ರಲ್ಲಿ ಶ್ರೀ ಸುರೇಶ್ ಆನಗಳ್ಳಿ, 2021ರಲ್ಲಿ ಡಾ. ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, 2022ರಲ್ಲಿ ಶ್ರೀ ಶ್ರೀನಿವಾಸ ಜಿ. ಕಪ್ಪಣ್ಣ, 2023 ರಲ್ಲಿ ಶ್ರೀ ಎಸ್. ದೊಡ್ಡಣ್ಣ, 2024ರಲ್ಲಿ ಡಾ. ಟಿ.ಎಸ್. ನಾಗಾಭರಣ, 2025ರಲ್ಲಿ ಶ್ರೀ ಚರಣ್ ರಾಜ್ ಅವರಿಗೆ ನೀಡಿ ಗೌರವಿಸಲಾಗಿರುತ್ತದೆ. ಪ್ರಸ್ತುತ 2026ನೇ ಸಾಲಿನ ಈ ಪ್ರಶಸ್ತಿಯನ್ನು ರಂಗ ಕಲಾವಿದ, ಚಿತ್ರ ನಟ ಶ್ರೀ ದತ್ತಣ್ಣ ಅವರಿಗೆ ಪ್ರದಾನ ಮಾಡಲಾಗುವುದು.
ಈ ಪ್ರಶಸ್ತಿಯು ತಲಾ ರೂ. 50,000 ನಗದು, ಸ್ಮರಣಿಕೆ ಮತ್ತು ದೆಹಲಿಗೆ ಬಂದು ಹೋಗುವ ವಿಮಾನಯಾನ ವೆಚ್ಚವನ್ನು ಒಳಗೊಂಡಿರುತ್ತದೆ. ನವೆಂಬರ್ ತಿಂಗಳ ಸಂಘದ ಕರ್ನಾಟಕ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ “ದತ್ತಣ್ಣ ಅವರೊಂದಿಗೆ ಸಂವಾದ” ಹಾಗೂ “ಮನದ ಕಡಲು” ಜನಪ್ರಿಯ ಕನ್ನಡ ಚಲನಚಿತ್ರ ಪ್ರದರ್ಶನದೊಂದಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಘದ ಅಧ್ಯಕ್ಷ ಶ್ರೀ ರೇಣುಕುಮಾರ್ ಆರ್. ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.