ಸ್ಯಾಂಡಲ್‌ವುಡ್

ಊರ ಹಬ್ಬ ಸಡಗರದಲ್ಲಿ ಪಾವನಾ ಗೌಡ: ಮೈಸೂರು ದಸರಾ ಆಚರಣೆಯಲ್ಲಿ ‘ಅಜ್ಞಾತವಾಸ’ ನಟಿ PAVAANA GOWDA

ಸಿನಿಮಾಗಳ ಶೂಟಿಂಗ್, ಪ್ರಚಾರದ ನಡುವೆಯೂ ಮೈಸೂರು ಭಾಗದ ನಟಿ ಪಾವನಾ ಗೌಡ ನವರಾತ್ರಿ ಸಂಭ್ರಮದಲ್ಲಿದ್ದು, ಅದ್ದೂರಿಯಾಗಿ ಆಚರಿಸುತ್ತಿದ್ದಾರೆ

ಬೆಂಗಳೂರು: ನಾಡಹಬ್ಬ ಮೈಸೂರು ದಸರಾಕ್ಕೆ ಭಾನುವಾರ ಅದ್ದೂರಿ ಚಾಲನೆ ದೊರೆತಿದೆ. ಈ ಐತಿಹಾಸಿಕ ಹಬ್ಬವನ್ನು ಕಣ್ತುಂಬಿಕೊಳ್ಳಲು ದೇಶ-ವಿದೇಶಗಳಿಂದ ಪ್ರವಾಸಿಗರು ಸಾಂಸ್ಕೃತಿಕ ನಗರಿಗೆ ಆಗಮಿಸುತ್ತಿದ್ದಾರೆ. ಇನ್ನು ಮೈಸೂರಿನವರಿಗೆ ದಸರಾ ಊರು ಹಬ್ಬ. ಅದನ್ನು ಕಣ್ತುಂಬಿಕೊಳ್ಳದೆ ಇರುತ್ತಾರೆಯೇ? ಎಲ್ಲೇ ಇರಲಿ, ಎಷ್ಟೇ ಕೆಲಸವಿರಲಿ ಬಿಡುವು ಪಡೆದು ಊರಿಗೆ ಆಗಮಿಸುತ್ತಾರೆ. ಇದೀಗ ಸಿನಿಮಾಗಳ ಶೂಟಿಂಗ್, ಪ್ರಚಾರದ ನಡುವೆಯೂ ಮೈಸೂರು ಭಾಗದ ನಟಿ ಪಾವನಾ ಗೌಡ ನವರಾತ್ರಿ ಸಂಭ್ರಮದಲ್ಲಿದ್ದು, ಅದ್ದೂರಿಯಾಗಿ ಆಚರಿಸುತ್ತಿದ್ದಾರೆ. ‘ದಸರಾ ಎಂದರೆ ಮನೆ, ಊರು ಹಬ್ಬವಿದ್ದಂತೆ. ಎಲ್ಲೇ ಇರಲಿ ಆ ವೇಳೆ ಊರಿಗೆ ಬರುತ್ತೇನೆ. ನಾನು ಓದಿದ್ದು ಮೈಸೂರಿನಲ್ಲಿ. ಹಾಗಾಗಿ, ಹಲವು ಬಾರಿ ಮೈಸೂರು ದಸರಾವನ್ನು ಕಣ್ತುಂಬಿಕೊಂಡಿದ್ದೇನೆ. ಆ ವೇಳೆ ಇಡೀ ಮೈಸೂರನ್ನು ಸುತ್ತು ಹಾಕುತ್ತೇವೆ. ಗೊಂಬೆಗಳನ್ನು ಕೂರಿಸಿರುವ ಮನೆಗೆ ತೆರಳಿ, ಆ ಗೊಂಬೆಗಳ ವಿಶೇಷತೆ, ಅದರ ಹಿನ್ನೆಲೆಯ ಕಥೆಗಳನ್ನು ಕೇಳಿ, ತಿಳಿದುಕೊಳ್ಳುತ್ತೇನೆ. ನಮ್ಮ ಮನೆಯಲ್ಲಿ ಒಂಬತ್ತು ದಿನಗಳ ಕಾಲ ಪೂಜೆ ಮಾಡುತ್ತೇವೆ. ಆದರೆ, ಆಯುಧ ಪೂಜೆಯಂದು ವಿಜೃಂಭಣೆ ಆಚರಣೆ. ಅಂದು ನಮ್ಮ ಫ್ಯಾಕ್ಟರಿಗೆ ಪೂಜೆ ಮಾಡಿ, ಸಿಬ್ಬಂದಿಗಳ ಜತೆ ಊಟ ಮಾಡಿ ಸಂಭ್ರಮಿಸುತ್ತೇವೆ. ಈ ಬಾರಿಯ ಹಬ್ಬಕ್ಕಾಗಿ ಬುಲೆಟ್ ತೆಗೆದುಕೊಂಡಿದ್ದೇನೆ. ಅದುವೇ ಹಬ್ಬದ ಖುಷಿ ಹೆಚ್ಚಿಸಿದೆ’ ಎಂದು ಪಾವನಾ ಗೌಡ ಹೇಳಿಕೊಂಡರು.

ನವದುರ್ಗೆಯ ಅವತಾರ

ಮುಂದಿನ ಸಿನಿಮಾಗಳಲ್ಲಿ ನವದುರ್ಗೆಯರ ಶಕ್ತಿಯನ್ನು ಪ್ರತಿನಿಧಿಸುವ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವುದರಿಂದ ಈ ಬಾರಿಯ ನವರಾತ್ರಿ ನನಗೆ ವಿಶೇಷ ಎನ್ನುವ ಪಾವನಾ ಗೌಡ, ‘ದೇವಿ ಹೇಗೆ ದುಷ್ಟರ ಸಂಹಾರ ಮಾಡುತ್ತಾಳೋ, ಹಾಗೆಯೇ ನಾನು ಕೂಡ ಮುಂದಿನ ಸಿನಿಮಾಗಳಲ್ಲಿ ಸಮಾಜಘಾತುಕರನ್ನು ಸದೆಬಡೆಯುವ ಪಾತ್ರಗಳಲ್ಲಿದ್ದೇನೆ. ‘ಡಿಯರ್ ಹಸ್ಬಂಡ್’ನಲ್ಲಿ ಖಡಕ್ ಪೊಲೀಸ್ ಅಧಿಕಾರಿ, ‘ಮ್ಯಾಡಿ’ಯಲ್ಲಿ ಗಟ್ಟಿ ಹಾಗೂ ‘ರುಧಿರ್ವನ’ದಲ್ಲಿ ದೈವೀಕ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಇಂತಹ ‘ಸ್ಟ್ರಾಂಗ್ ವುಮೆನ್’ ಪಾತ್ರಗಳನ್ನು ನಿರ್ವಹಿಸಬೇಕಾದರೆ ದೇವಿಯ ಆಶೀರ್ವಾದ ಮುಖ್ಯ’ ಎಂದು ಹೇಳಿಕೊಳ್ಳುತ್ತಾರೆ. ಸದ್ಯ ಮೂರು ಚಿತ್ರಗಳ ಶೂಟಿಂಗ್ ಮಗಿಸಿರುವ ಪಾವನಾ, ಎರಡು ಸಿನಿಮಾಗಳ ಚಿತ್ರೀಕರಣದಲ್ಲಿದ್ದಾರೆ.

ನ.27ಕ್ಕೆ ‘ರುಧಿರ್ವನ’ ತೆರೆಗೆ

ನಟಿ ಪಾವನಾ ಗೌಡ ಸೇರಿ ಬಹುತೇಕ ಮೈಸೂರು ಮೂಲದ ಕಲಾವಿದರೇ ಅಭಿನಯಿಸಿರುವ ಜಾನಪದ ಥ್ರಿಲ್ಲರ್‌ನ ‘ರುಧಿರ್ವನ’ ಚಿತ್ರದ ಬಿಡುಗಡೆ ದಿನಾಂಕವನ್ನು ಸಂಸದ, ಮೈಸೂರು ಮಹಾರಾಜರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಘೋಷಿಸಿದರು. ಅಂತೆಯೇ ಚಿತ್ರವು ನ.27ಕ್ಕೆ ತೆರೆಗೆ ಬರಲಿದೆ. ಅಗ್ನಿ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದಾರೆ.