ಯಶ್ ಜತೆ ಟಾಕ್ಸಿಕ್ ತಂಡ 
ಸ್ಯಾಂಡಲ್‌ವುಡ್

ಕನ್ನಡಿಗರು ತಲೆ ಎತ್ತಿ ನೋಡುವಂತಹ ಸಿನಿಮಾ ಮಾಡಿದ್ದೇನೆ ಎಂದ ಯಶ್​

ಪ್ರಮುಖ ಮುಖ್ಯಾಂಶಗಳು

  • ಐದು ಭಾಷೆಯಲ್ಲಿ ಟ್ರೇಲರ್ ರಿಲೀಸ್ ಮಾಡಿದ ಶಿವರಾಜಕುಮಾರ್
  • ಟ್ರೇಲರ್‌ನಲ್ಲಿ ಮೂರು ಅವತಾರಗಳಲ್ಲಿ ಕಾಣಿಸಿಕೊಂಡ ಯಶ್
  • ಮೊದಲ ದಿನವೇ ಐದು ಭಾಷೆ ಸೇರಿ 1ಕೋಟಿ ಗೂ ಅಧಿಕ ವೀಕ್ಷಣೆ

ಬೆಂಗಳೂರು: ನಟ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನಪ್ಸ್’ ಚಿತ್ರದ ಟ್ರೇಲರ್ ರಿಲೀಸ್ ಮಾಡಲಾಗಿದೆ. ಬೆಂಗಳೂರಿನ ಗಾಂಧಿನಗರದ ಮಲ್ಟಿಪ್ಲೆಕ್ಸ್‌ನಲ್ಲಿ ಚಿತ್ರತಂಡ ಶನಿವಾರ ಸಂಜೆ ಆಯೋಜಿಸಿದ್ದ ರಾಷ್ಟ್ರೀಯ ಪ್ರಚಾರ ಕಾರ್ಯಕ್ರಮದಲ್ಲಿ ಕನ್ನಡ ಸೇರಿ ಐದು ಭಾಷೆಯಲ್ಲಿ ಟ್ರೇಲರ್ ರಿಲೀಸ್ ಮಾಡಲಾಯಿತು. ನಟ ಶಿವರಾಜಕುಮಾರ್ ಟ್ರೇಲರ್ ಅನಾವರಣಗೊಳಿಸಿ, ಚಿತ್ರತಂಡಕ್ಕೆ ಶುಭಕೋರಿದರು. 4.38 ನಿಮಿಷದ ದೀರ್ಘಾವಧಿ ಟ್ರೇಲರ್‌ನಲ್ಲಿ ಯಶ್ ಮೂರು ಅವತಾರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರೀತಿ, ದ್ವೇಷ, ಪ್ರತೀಕಾರ, ಅಧಿಕಾರದ ಹಸಿವು ಸೇರಿ ಹೈ-ಆ್ಯಕ್ಷನ್ ಜತೆಗೆ ವಿವಿಧ ಭಾವನೆಗಳು ಟ್ರೇಲರ್‌ನಲ್ಲಿ ವ್ಯಕ್ತವಾಗಿವೆ. ಬಾಲಕನ ಅಳುವಿನೊಂದಿಗೆ ಆರಂಭವಾಗುವ ಟ್ರೇಲರ್ ಬಳಿಕ ಯಶ್ ಗುಂಡು ಹಾರಿಸಿ, ಅಬ್ಬರಿಸುತ್ತಾರೆ. ಆ ಮಧ್ಯೆ ‘ಮುಖವಾಡದಿಂದ ಮುಖದ ಮೇಲಿನ ದುಃಖ ಬೇಕಾದ್ರೂ ಮುಚ್ಚಿಡಬಹುದು, ಹಣೆ ಮೇಲೆ ಬರೆದಿರುವ ದುರಂತನ್ನಲ್ಲ.’- ನಾಡಿಯಾ ಪಾತ್ರದ ಕಿಯಾರಾ ಡೈಲಾಗ್ ಗಮನಸೆಳೆಯುತ್ತದೆ. ಬಹುತೇಕ ರಾಯಲ್ ಸರ್ಕಸ್ ಕ್ಯಾಂಪ್ ಸುತ್ತವೇ ಹಲವು ದೃಶ್ಯಗಳಿದ್ದು, ಇಲ್ಲಿ ಸರ್ಕಸ್ ಕ್ಯಾಂಪ್ ಕೇಂದ್ರಬಿಂದುವಾಗಿದೆ. ಯಶ್ ಜತೆಗೆ ಮಹಿಳಾ ಪಾತ್ರಗಳು ಗಮನಾರ್ಹವಾಗಿ ಮೂಡಿಬಂದಿವೆ. ಈ ಹಿಂದೆ ಕೇವಲ ಗ್ಲಾಮರ್ ರೂಪದಲ್ಲಿ ಕಂಡಿದ್ದ ಮಹಿಳಾ ಪಾತ್ರಧಾರಿಗಳು ಟ್ರೇಲರ್‌ನಲ್ಲಿ ವಿಭಿನ್ನ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ. ಯಶ್ ಜತೆಗೆ ಕಿಯಾರಾ ಅಡ್ವಾಣಿ ಟ್ರೇರ್‌ನಲ್ಲಿ ಹೈಲೈಟ್ ಆಗಿದ್ದಾರೆ. ನಯನತಾರಾ, ರುಕ್ಮಿಣಿ ವಸಂತ್, ತಾರಾ ಸುತಾರಿಯಾ, ಹುಮಾ ಖುರೇಷಿ ಪಾತ್ರಗಳು ಪ್ರತೀಕಾರ ಹಠದಲ್ಲಿದ್ದಾರೆ. ತಾಂತ್ರಿಕವಾಗಿ ಶ್ರೀಮಂತಿಕೆಯಿಂದ ಟ್ರೇಲರ್ ಮೂಡಿಬಂದಿದೆ. ನಿರ್ದೇಶಕಿ ಗೀತು ಮೋಹನ್ ದಾಸ್ ನಿರ್ದೇಶನದ ‘ಟಾಕ್ಸಿಕ್’ ಇದೇ ಆಗಸ್ಟ್ 26ಕ್ಕೆ ತೆರೆ ಮೇಲೆ ಬರಲಿದೆ. 

‘ತ್ರಿಬಲ್’ ಶೇಡ್‌ನಲ್ಲಿ ರಾಕಿಂಗ್

ನಟ ಯಶ್ ಇಡೀ ‘ಟಾಕ್ಸಿಕ್’ ಟ್ರೇಲರ್ ಆವರಿಸಿದ್ದಾರೆ. ಇಲ್ಲಿ ಅವರು ಮೂರು ಅವತಾರದಲ್ಲಿದ್ದು, ಆ್ಯಕ್ಷನ್ ರೂಪದಲ್ಲಿ ರಕ್ತಸಿಕ್ತವಾಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಸ್ವತಃ ಯಶ್ ಹೇಳಿರುವಂತೆ ಇದೊಂದು ತಂದೆ-ಮಗನ ರಿವೇಂಜ್ ಸ್ಟೋರಿ ಆಗಿದ್ದು, ಇದೇ ವಿಚಾರಗಳನ್ನು ಟ್ರೇಲರ್‌ನಲ್ಲಿ ಹೈಲೈಟ್ ಮಾಡಲಾಗಿದೆ. ಹಾಗಾಗಿ, ‘ರಾಯ’ ಮತ್ತು ‘ಟಿಕೆಟ್’ ನಡುವಿನ ಯುದ್ಧಕ್ಕೆ ‘ಟಾಕ್ಸಿಕ್’ ಟ್ರೇಲರ್ ಸಾಕ್ಷಿಯಾಗಿದೆ. ಇನ್ನು ಯಶ್ ಇಡೀ ಚಿತ್ರಕ್ಕೆ ನೀಡಿದ ಬೆಂಬಲಕ್ಕೆ ನಿರ್ದೇಶಕಿ ಗೀತು ಮೋಹನ್‌ದಾಸ್ ನೆನೆದು ಭಾವುಕರಾದರು. 

ಹಳೆಯ ಗೆಲುವಿನ ಪ್ರತೀಕವೇ ‘ಟಾಕ್ಸಿಕ್’

ಕರ್ನಾಟಕಕ್ಕೆ ಸ್ವಾಗತ, ಸುಸ್ವಾಗತ ಎಂದು ಕನ್ನಡದಲ್ಲಿ ಮಾತು ಆರಂಭಿಸಿದ ಯಶ್, ‘ಈ ವೇದಿಕೆ ಮೇಲೆ ಇರಲು ಕರ್ನಾಟಕದ ಜನತೆಯೇ ಕಾರಣ. ಅವರು ಕೊಟ್ಟ ಶಕ್ತಿ, ಜವಾಬ್ದಾರಿ, ಗೆಲುವೇ ನಾನು ದೊಡ್ಡ ಕೆಲಸ ಮಾಡಲು ಸ್ಪೂರ್ತಿಯಾಯಿತು. ಹಳೆಯ ಗೆಲುವಿನ ಪ್ರತೀಕವೇ ಈ ‘ಟಾಕ್ಸಿಕ್’. ಈ ಮೂಲಕ ನಾನು ದೊಡ್ಡ ಹೆಜ್ಜೆ ಇಡುತ್ತಿದ್ದೇನೆ. ದಾರಿ ಯಾವುದಾದರೂ ಆಗಬಹುದು, ಗುರಿ ಮುಟ್ಟಬೇಕು. ದಾರಿಯಲ್ಲಿ ಕೆಲವು ಹೋರಾಟಗಳು ಇರುತ್ತವೆ. ಹಾಗಾಗಿ, ಹೋರಾಟ ಮಾಡಿಕೊಂಡೆ ಗುರಿ ಮುಟ್ಟಬೇಕು. ಕಾಲಕ್ಕೆ ತಕ್ಕಂತೆ ನಡೆಯಬೇಕು. ತಾಳಕ್ಕೆ ತಕ್ಕಂತೆ ಕುಣಿಯಬೇಕು. ಇಂದಿನ ಜಮಾನದ ಗೊಂದಲಗಳನ್ನು ಈ ಸಿನಿಮಾ ಪ್ರತಿನಿಧಿಸುತ್ತದೆ. ಕನ್ನಡಿಗರು ಹೆಮ್ಮೆಪಡುವ ಸಿನಿಮಾ ಇದಾಗಲಿದ್ದು, ತಲೆ ಎತ್ತಿ ಹೆಮ್ಮೆಯಿಂದ ಈ ಸಿನಿಮಾ ನೋಡಬಹುದು. ಕಳೆದ ಎರಡು ವರ್ಷಗಳ ಹಿಂದೆ ಇದೇ ಆ.8ರಂದು ಸಿನಿಮಾಕ್ಕೆ ಮುಹೂರ್ತ ನೆರವೇರಿಸಿದ್ದೆವು. ಅದೇ ದಿನ ಟ್ರೇಲರ್ ರಿಲೀಸ್ ಮಾಡುತ್ತಿದ್ದೇವೆ. 200 ದಿನಗಳ ಕಾಲ ಕನ್ನಡ ಮತ್ತು ಇಂಗ್ಲೀಷ್‌ನಲ್ಲಿ ಏಕಕಾಲದಲ್ಲಿ ಸಿನಿಮಾ ಮಾಡಿದ್ದೇವೆ’ ಎಂದು ಯಶ್ ಹೇಳಿಕೊಂಡರು.