ಯಶ್​ ಅಭಿನಯದ ಟಾಕ್ಸಿಕ್​ ಸಿನಿಮಾ  
ಸ್ಯಾಂಡಲ್‌ವುಡ್

9 ಗಂಟೆ ಶೋಗೆ ಜೀರೋ ಆಡಿಯನ್ಸ್​! 'ಟಾಕ್ಸಿಕ್'​ ನೋಡಲು ಪ್ರೇಕ್ಷಕರಿಲ್ಲದೆ ಪರದಾಡಿದ ನೋಯ್ಡಾ ಥಿಯೇಟರ್ | Toxic​

ಪ್ರಮುಖ ಮುಖ್ಯಾಂಶಗಳು

  • ನಟ ಯಶ್ ಅಭಿನಯದ ಹಾಗೂ ಗೀತು ಮೋಹನ್ ದಾಸ್ ನಿರ್ದೇಶನದ ಬಹುನಿರೀಕ್ಷಿತ 'ಟಾಕ್ಸಿಕ್' ಸಿನಿಮಾ
  • 600 ಕೋಟಿ ಮೊತ್ತದಲ್ಲಿ ತಯಾರಾದ ಈ ಪ್ಯಾನ್​ ವರ್ಲ್ಡ್​ ಚಿತ್ರವು ಏಕಕಾಲಕ್ಕೆ ಬಹುತೇಕ ಚಿತ್ರಮಂದಿರಗಳಲ್ಲಿ ತೆರೆ
  • ಬೆಳಗ್ಗೆ 9 ಗಂಟೆಗೆ ಶೋಗೆ ಪ್ರೇಕ್ಷಕರು ಟಿಕೆಟ್​ ಖರೀದಿಸದೆ ಬಿಕೋ ಎಂದ ಥಿಯೇಟರ್​
Toxic: ಕನ್ನಡದ ರಾಕಿಂಗ್ ಸ್ಟಾರ್, ನಟ ಯಶ್ ಅಭಿನಯದ ಹಾಗೂ ಗೀತು ಮೋಹನ್ ದಾಸ್ ನಿರ್ದೇಶನದ ಬಹುನಿರೀಕ್ಷಿತ 'ಟಾಕ್ಸಿಕ್' ಸಿನಿಮಾ ಬಿಡುಗಡೆಯಾದ ಮೊದಲ ದಿನದಿಂದಲೂ ಭಾರಿ ಪರ-ವಿರೋಧ ಚರ್ಚೆಗೆ ಗುರಿಯಾಗಿದೆ. 600 ಕೋಟಿ ಮೊತ್ತದಲ್ಲಿ ತಯಾರಾದ ಈ ಪ್ಯಾನ್​ ವರ್ಲ್ಡ್​ ಚಿತ್ರವು, ಏಕಕಾಲಕ್ಕೆ ಬಹುತೇಕ ಚಿತ್ರಮಂದಿರಗಳಲ್ಲಿ ತೆರೆಕಂಡು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ, ಮಿಶ್ರ ಪ್ರತಿಕ್ರಿಯೆಗಳನ್ನು ಸ್ವೀಕರಿಸುತ್ತಿದೆ.
ಮೂರನೇ ದಿನಕ್ಕೆ ಕಾಲಿಟ್ಟಿರುವ ಟಾಕ್ಸಿಕ್​ ಚಿತ್ರವು ಅಂದುಕೊಂಡಂತೆ ಬಾಕ್ಸ್ ಆಫೀಸ್​ನಲ್ಲಿ ಗಳಿಕೆಯನ್ನು ಕಾಣುತ್ತಿಲ್ಲ. ಮತ್ತೊಂದೆಡೆ, ಭಾರತ ಮಾತ್ರವಲ್ಲದೇ, ಅಮೆರಿಕದಂತಹ ವಿದೇಶಿ ನೆಲಗಳಲ್ಲಿಯೂ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆಗಳು ಹರಿದುಬಂದಿವೆ. ಈ ಮಧ್ಯೆ, ಹೆಚ್ಚಿನ ಪ್ರೇಕ್ಷಕರು ಸೇರುವ ನೋಯ್ಡಾದ ಜನಪ್ರಿಯ ಚಿತ್ರಮಂದಿರವೊಂದರಲ್ಲಿ ಬೆಳಗ್ಗೆ 9 ಗಂಟೆಯ ಶೋ ಜನರಿಲ್ಲದೆ ಬಿಕೋ ಎನ್ನುತ್ತಿದ್ದ ಬಗ್ಗೆ ಎನ್​​ಡಿಟಿವಿ ವರದಿ ಮಾಡಿದೆ.
ಬೆಳಗ್ಗೆ 9 ಗಂಟೆಗೆ ಎಂದಿನಂತೆ ಶೋ ಆರಂಭಿಸಿದ ಚಿತ್ರಮಂದಿರಕ್ಕೆ ಪ್ರೇಕ್ಷಕರು ಟಿಕೆಟ್​ ಖರೀದಿಸಲು ಅಥವಾ ಮುಂಗಡ ಬುಕ್ಕಿಂಗ್ ಬಂದಿಲ್ಲ. ಇದರಿಂದ 9 ಗಂಟೆಯ ಶೋ ಒಬ್ಬ ಪ್ರೇಕ್ಷಕನೂ ಇಲ್ಲದೆ ಬಿಕೋ ಎಂದಿದೆ. ಅಲ್ಲಿಗೆ, ಅದು ಜೀರೋ ಆಡಿಯನ್ಸ್ ವರ್ಗಕ್ಕೆ ಸೇರಿದೆ. ಇದಾದ ಬಳಿಕ ಸುಮಾರು 300 ಮಂದಿ ಕೂರುವ ಆಸನ ವ್ಯವಸ್ಥೆಯನ್ನು ಹೊಂದಿರುವ 10:30ರ ಶೋಗೆ ಕೇವಲ 5 ಜನ ಮಾತ್ರ ಹಾಜರಿದ್ದರು ಎನ್ನಲಾಗಿದೆ.

'ಟಾಕ್ಸಿಕ್' ಕಲೆಕ್ಷನ್

ಗೀತು ಮೋಹನ್‌ದಾಸ್ ನಿರ್ದೇಶನದ ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್ ರಿಲೀಸ್​ ಆದ ಎರಡನೇ ದಿನದಲ್ಲಿ ಬಾಕ್ಸ್ ಆಫೀಸ್ ಓಟದಲ್ಲಿ ಹಿನ್ನಡೆ ಅನುಭವಿಸಿದೆ. ಸ್ಯಾಕ್ನಿಲ್ಕ್ ವರದಿ ಪ್ರಕಾರ, ಚಿತ್ರವು ಭಾರತದಲ್ಲಿ ಮೊದಲ ದಿನವೇ 100 ಕೋಟಿ ರೂ. ಗಡಿದಾಟಿದರೆ, ಗುರುವಾರ 36.40 ಕೋಟಿ ರೂ. ಕಲೆಕ್ಷನ್​ ಕಂಡಿದೆ. ಆ.27ರಂದು 19,413 ಪ್ರದರ್ಶನಗಳಲ್ಲಿ ಟಾಕ್ಸಿಕ್​ ಶೇ.26.6ರಷ್ಟು ಆಕ್ಯುಪೆನ್ಸಿಯನ್ನು ದಾಖಲಿಸಿದ್ದಾಗಿ ತಿಳಿಸಿದೆ.
ಮೊದಲ ದಿನದ 101 ಕೋಟಿ ರೂ. ಗಳಿಕೆಗೆ ಹೋಲಿಸಿ ನೋಡಿದರೆ, ಎರಡನೇ ದಿನದ ಕಲೆಕ್ಷನ್​ನಲ್ಲಿ ಶೇ.64ರಷ್ಟು ಕುಸಿತ ಕಂಡಿದೆ. ಇಲ್ಲಿಯವರೆಗೆ, ಟಾಕ್ಸಿಕ್ ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ ಎರಡು ದಿನಗಳ ಅವಧಿಯಲ್ಲಿ 137.50 ಕೋಟಿ ರೂ. ಅನ್ನು ಗಳಿಸಿದೆ. ಕನ್ನಡಕ್ಕೆ ಹೋಲಿಸಿದರೆ ಹಿಂದಿಯಲ್ಲಿ ಚಿತ್ರವು ಉತ್ತಮ ಪ್ರದರ್ಶನ ಕಾಣುತ್ತಿದ್ದು, ತೆಲುಗು ವರ್ಷನ್ ಕೂಡ ಒಟ್ಟು ಗಳಿಕೆಗೆ ಕೊಡುಗೆ ನೀಡಿದೆ. ಉಳಿದಂತೆ ತಮಿಳು ಹಾಗೂ ಮಲಯಾಳಂ ಆವೃತ್ತಿಗಳು ನಿರೀಕ್ಷಿತ ಪ್ರಮಾಣದಲ್ಲಿ ಸಾಥ್ ನೀಡುವಲ್ಲಿ ವಿಫಲವಾಗಿದ್ದು, ಸಾಧಾರಣ ಪ್ರದರ್ಶನ ಕಾಣುತ್ತಿದೆ ಎಂದು ವರದಿಯಾಗಿದೆ,(ಏಜೆನ್ಸೀಸ್).