Hamsalekha on Nenapirali Prem
- ನಾದಬ್ರಹ್ಮನಿಗೆ ದೇಶದ ಪ್ರತಿಷ್ಠಿತ ಪದ್ಮ ಪ್ರಶಸ್ತಿ ಅಥವಾ ಜ್ಞಾನಪೀಠ ಪ್ರಶಸ್ತಿ ನೀಡಬೇಕು ಎಂದು ನೆನಪಿರಲಿ ಪ್ರೇಮ್ ಅಭಿಯಾನ
- ಇದು ಫ್ಲಾಪ್ ಸಾಂಗ್ ದಯವಿಟ್ಟು ನಿಲ್ಲಿಸಿ ಎಂದ ನಾದಬ್ರಹ್ಮ ಹಂಸಲೇಖ.
- ಕನ್ನಡ ನಮ್ಮ ಹಕ್ಕಿನ ಭಾಷೆ ಎನ್ನುವುದನ್ನು ಸಾಬೀತು ಪಡಿಸಬೇಕಾದ ಸಮಯದಲ್ಲಿದ್ದೇವೆ ಎಂದು ಪೋಸ್ಟ್.
Hamsalekha on Nenapirali Prem: ಕನ್ನಡ ಸಿನಿಮಾ ರಂಗ ಅದ್ಭುತ ಸಂಗೀತ ಸಂಯೋಜಕ ಮತ್ತು ಗೀತ ರಚನೆಕಾರ ಹಂಸಲೇಖ ಅವರು ಕನ್ನಡ ಸಿನಿಮಾ ರಂಗಕ್ಕೆ ಮುನ್ನೂರಕ್ಕೂ ಹೆಚ್ಚು ಸಂಗೀತ ಸಂಯೋಜಿಸಿದ್ದಾರೆ. ಸಾಹಿತ್ಯ ಬರೆದಿದ್ದಾರೆ. ಬಾ ನಲ್ಲೆ ಮಧು ಚಂದ್ರಕ್ಕೆ, ಪ್ರೇಮಲೋಕದಿಂದ, ಪ್ರೀತ್ಸೆ ಪ್ರೇತ್ಸೆ, ಲಾಲಿ ಲಾಲಿ, ಚಂದಕ್ಕಿಂತ ಚಂದ, ಹೇ ನವಿಲೇ ಹೆಣ್ ನವಿಲೇ ಹಾಡುಗಳು ಇಂದಿಗೂ ಗುನುಗುವಂತೆ ಮಾಡುತ್ತವೆ. ಸ್ಯಾಂಡಲ್ವುಡ್ಗೆ ಇಷ್ಟೆಲ್ಲ ಕೊಡುಗೆ ಕೊಟ್ಟಿರುವ ನಾದಬ್ರಹ್ಮನಿಗೆ ದೇಶದ ಪ್ರತಿಷ್ಠಿತ ಪದ್ಮ ಪ್ರಶಸ್ತಿ ಅಥವಾ ಜ್ಞಾನಪೀಠ ಪ್ರಶಸ್ತಿ ನೀಡಬೇಕು ಎಂದು ಒತ್ತಾಯಿಸಿ ನಟ ನೆನಪಿರಲಿ ಪ್ರೇಮ್ ಅಭಿಯಾನ ಆರಂಭಿಸಿದ್ದರು. ಸದ್ಯ ಈ ಬಗ್ಗೆ ಇನ್ಸ್ಟಾಗ್ರಾಮ್ನಲ್ಲಿ ಹಂಸಲೇಖ ಅವರೇ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದಾರೆ.
ಹಂಸಲೇಖ ಅವರಿಗೆ ಪದ್ಮ ಪುರಸ್ಕಾರ ಅಥವಾ ಜ್ಞಾನಪೀಠ ಪ್ರಶಸ್ತಿ ಸಲ್ಲಬೇಕು ಎನ್ನುವ ಅಭಿಯಾನಕ್ಕೆ ಹಂಸಲೇಖ ಅವರೇ ಬ್ರೇಕ್ ಹಾಕಿದ್ದು, ಇದಕ್ಕೆ ನನಗೆ ಒಪ್ಪಿಗೆ ಇಲ್ಲ. ಇದೊಂದು ಅನಗತ್ಯದ ಅಭಿಮಾನದ ಮಾತು. ಕನ್ನಡ ನಮ್ಮ ಹಕ್ಕಿನ ಭಾಷೆ ಇದನ್ನು ಸಾಬೀತು ಪಡಿಸುವ ಮಟ್ಟದಲ್ಲಿದ್ದೇವೆ ಎಂದು ಹೇಳಿದ್ದಾರೆ.
ಹಂಸಲೇಖರ ಇನ್ಸ್ಟಾಗ್ರಾಮ್ ಪೋಸ್ಟ್ ಪ್ರೇಮ್ ಹೀಗೆಂದು ಬರೆದುಕೊಂಡಿದ್ದರು
ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಉಲ್ಲೇಖಿಸಿದ್ದ ನೆನಪಿರಲಿ ಪ್ರೇಮ್ ಭಾವನಾತ್ಮಕವಾಗಿ ಹೀಗೆಂದು ಬರೆದುಕೊಂಡಿದ್ದರು, ನಾದ ಬ್ರಹ್ಮ ಹಂಸಲೇಖಾರವರಿಗೆ ಪದ್ಮ ಪುರಸ್ಕಾರ ಅಥವಾ ಜ್ಞಾನಪೀಠ ಪ್ರಶಸ್ತಿ ಸಲ್ಲಬೇಕು ಎಂಬುದರ ಕುರಿತಾಗಿ ಅಭಿಯಾನ ಶುರು ಮಾಡಲಿದ್ದೇನೆ . ಹಾಗಾಗಿ ಕನ್ನಡ ಚಿತ್ರರಂಗ, ಸಾಹಿತಿಗಳು, ಕನ್ನಡ ಚಿತ್ರ ಪ್ರೇಮಿಗಳು, ಮಾಧ್ಯಮದವರಿಗೂ ಹಾಗೂ ಕರ್ನಾಟಕ ರಾಜ್ಯ ಸರ್ಕಾರ ಹಾಗೂ ಭಾರತ ಕೇಂದ್ರ ಸರಕಾರಕ್ಕೆ ಮನವಿ.
300 ಕ್ಕೂ ಹೆಚ್ಚು ಸಿನಿಮಾಗಳಿಗೆ ಸಾಹಿತ್ಯ ಹಾಗೂ ಸಂಗೀತ ಕೊಟ್ಟಂತಹ ಏಕೈಕ ಕನ್ನಡಿಗ ನಮ್ಮ ಕನ್ನಡ ಸಿನಿಮಾ ಹಾಗೂ ಸಾಹಿತ್ಯ ಲೋಕದ ಹೆಮ್ಮೆಗೆ ಸಲ್ಲಲೇ ಬೇಕಾದ ಗೌರವ. ಈ ಅಭಿಯಾನಕ್ಕೆ ನಿಮ್ಮ ಎಲ್ಲರ ಸಹಕಾರವಿರಲಿ. ನಿಮ್ಮ ನೆನಪಿರಲಿ ಪ್ರೇಮ್ ಎಂದು ಪೋಸ್ಟ್ ಹಂಚಿಕೊಂಡಿದ್ದರು.
ಹಂಸಲೇಖ ಅವರು ಹೇಳಿದ್ದೇನು?
ಕನ್ನಡದಾಣೆ...ಇದಕ್ಕೆ ನನ್ನ ಒಪ್ಪಿಗೆಯಿಲ್ಲ. ಇದೊಂದು ಅನಗತ್ಯವಾದ ಅಭಿಮಾನದ ದುಡುಕು ; ಮತ್ತು ಪ್ರೀತಿಯ ತೊಂದರೆ... ಸೀನ್ ಗೂ ; ಟ್ಯೂನ್‌ಗೂ : ಲಿರಿಕ್ಸ್ ಗೂ... ಹೊಂದಾಣಿಕೆಯೇ ಇಲ್ಲದ ಫ್ಲಾಪ್ ಸಾಂಗಿದು. ದಯವಿಟ್ಟು ನಿಲ್ಲಿಸಿ ನೆನಪಿರಲಿ, ಪ್ರೀತಿಯ ಪ್ರೇಮ್. ಕನ್ನಡ ನಮ್ಮ ಹಕ್ಕಿನ ಭಾಷೆ. ಈ ಸತ್ಯವನ್ನು ಪ್ರತಿದಿನವೂ ಸಾಬೀತು ಪಡಿಸಬೇಕಾದ ಸಮಯದಲ್ಲಿದ್ದೇವೆ. ಅದಕ್ಕೆ ಬೇಕಾಗಿರುವುದು ಅಭಿಮಾನದ ಅಭಿಯಾನಗಳು ಎಂದು ಸಲಹೆ ನೀಡಿದ್ದಾರೆ.