ರಜನಿ ಭಾರದ್ವಾಜ್​ 
ಸ್ಯಾಂಡಲ್‌ವುಡ್

ಜಿಎಸ್‌ಟಿ ಕಟ್ಟಿದ ರಜನಿ : ಹಾರರ್ ಹ್ಯಾಟ್ರಿಕ್ ಖುಷಿಯಲ್ಲಿ ಮೈಸೂರು ಮೂಲದ ನಟಿ

ಪ್ರಮುಖ ಮುಖ್ಯಾಂಶಗಳು

  • ಸೃಜನ್ ಲೋಕೇಶ್ ನಟಿಸಿ, ನಿರ್ದೇಶಿಸಿರುವ ‘ಜಿಎಸ್‌ಟಿಯಲ್ಲಿ ರಜನಿ
  • ನಿಧಿ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ನಟಿ
  • ಈ ವರ್ಷದ ಮೂರನೇ ಸಿನಿಮಾದಲ್ಲಿ ಕಾಣಿಸಿಕೊಂಡ ನಟಿ
rajani bharadwaj: ಬೆಂಗಳೂರು: ‘ಪಾಚಿ: ಪಾಪಿ ಚಿರಾಯು’, ‘ಮಟಾಶ್’ ಸಿನಿಮಾಗಳ ಮೂಲಕ ಗಮನಸೆಳೆದಿದ್ದ ಮೈಸೂರು ಮೂಲದ ನಟಿ ರಜನಿ ಭಾರದ್ವಾಜ್‌ಗೆ ಈ ವರ್ಷ ತ್ರಿಬಲ್ ಧಮಾಕಾ. ಅಂದರೆ, ಅವರು ನಟಿಸಿರುವ ಮೂರನೇ ಸಿನಿಮಾ ಇದೀಗ ಬಿಡುಗಡೆಗೆ ಸಿದ್ಧವಾಗಿದೆ. ಜನವರಿಯಲ್ಲಿ ರಿಲೀಸ್ ಆಗಿದ್ದ ‘ಛೂ ಮಂತರ್’ 100 ದಿನ ಪೂರೈಸಿತ್ತು. ಬಳಿಕ ತೆರೆಗೆ ಬಂದ ‘ಕಮಾರೊ2’ ಕೂಡ ಒಳ್ಳೆಯ ಪ್ರತಿಕ್ರಿಯೆ ಪಡೆದಿತ್ತು. ಇದೀಗ ಸೃಜನ್ ಲೋಕೇಶ್ ನಟಿಸಿ, ಮೊದಲ ಬಾರಿಗೆ ನಿರ್ದೇಶಿಸಿರುವ ಹಾರರ್ ಕಾಮಿಡಿ ‘ಜಿಎಸ್‌ಟಿ’ (ಘೋಸ್ಟ್ಸ ಇನ್ ಟ್ರಬಲ್) ಚಿತ್ರದಲ್ಲೂ ರಜನಿ ಅಭಿನಯಿಸಿದ್ದಾರೆ. ಇದೇ ಶುಕ್ರವಾರ (ನ. 28) ಸಿನಿಮಾ ರಿಲೀಸ್ ಆಗುತ್ತಿದೆ. ಹ್ಯಾಟ್ರಿಕ್ ಸಂಭ್ರಮದಲ್ಲಿ ನಟಿ ರಜನಿ, ‘‘ಈ ವರ್ಷದ ನನ್ನ ಮೂರನೇ ಸಿನಿಮಾ ರಿಲೀಸ್ ಆಗುತ್ತಿರುವ ಖುಷಿ ಇದೆ. ‘ಜಿಎಸ್‌ಟಿ’ ಬಗ್ಗೆ ಭರವಸೆಯಿದೆ. ಎಂಟು ವರ್ಷಗಳ ಹಿಂದೆ ಒಮ್ಮೆ ವಿಮಾನದಲ್ಲಿ ಪ್ರಯಾಣಿಸುವಾಗ ಸೃಜನ್ ಲೋಕೇಶ್ ಪರಿಚಯವಾದರು. ಈ ಮಧ್ಯೆ, ನನ್ನ ಕೆಲ ಸಿನಿಮಾಗಳನ್ನು ನೋಡಿ, ಮತ್ತೆ ನನ್ನನ್ನು ಸಂಪರ್ಕಿಸಿ, ಈ ಚಿತ್ರಕ್ಕೆ ಆಯ್ಕೆ ಮಾಡಿಕೊಂಡರು. ಕಥೆಯನ್ನೂ ಕೇಳದೆ ಈ ಪ್ರಾಜೆಕ್ಟ್ ಒಪ್ಪಿಕೊಂಡೆ. ನನ್ನದು ನಿಧಿ ಎಂಬ ಪಾತ್ರ. ಸೃಜನ್ ಗರ್ಲ್‌ಫ್ರೆಂಡ್. ಕಷ್ಟ-ನಷ್ಟ ಏನೇ ಆದರೂ, ಪ್ರೀತಿಸಿದ ಹುಡುಗನ ಬೆಂಬಲಕ್ಕೆ ನಿಲ್ಲುವ ಹುಡುಗಿ. ಇಡೀ ಕಥೆಯಲ್ಲಿ ಸೃಜನ್ ಜತೆ ಟ್ರಾವೆಲ್ ಮಾಡುತ್ತೇನೆ. ದ್ವಿತೀಯಾರ್ಧದಲ್ಲಿ ನಿಧಿ ಪಾತ್ರಕ್ಕೆ ಬೇರೆಯದ್ದೇ ಶೇಡ್ ನೀಡಲಾಗಿದೆ. ಅದನ್ನು ನೀವು ಸಿನಿಮಾದಲ್ಲಿಯೇ ನೋಡಬೇಕು. ನಗಿಸುವುದು ತುಂಬಾ ಕಷ್ಟದ ಕೆಲಸ. ಸೃಜನ್ ಜತೆ ಇದ್ದರೆ ನಾವು ಕೂಡ ನಗಿಸುವುದನ್ನು ಕಲಿಯುತ್ತೇವೆ. ಒಂದು ರೊಮ್ಯಾಂಟಿಕ್ ಸಾಂಗ್ ಕೂಡ ಇದೆ. ಸಿನಿಮಾದ ಜರ್ನಿಯಲ್ಲಿ ತುಂಬಾ ಕಲಿತಿದ್ದೇನೆ’ ಎಂದು ಮಾಹಿತಿ ನೀಡುತ್ತಾರೆ.
ಹಾರರ್‌ಗೆ ಸೀಮಿತವಲ್ಲ: ರಜನಿ ಭಾರದ್ವಾಜ್ ಹಾರರ್ ಹಾಗೂ ಕಾಮಿಡಿ ಚಿತ್ರಗಳಿಗೆ ಸೀಮಿತರಾದರೆ ಎಂಬುದಕ್ಕೆ, ‘ನಾನು ನಟಿಸಿರುವ ಬಹುತೇಕ ಸಿನಿಮಾಗಳು ಹಾರರ್ ಅಥವಾ ಕಾಮಿಡಿ ಜಾನರ್ ಆದರೂ, ಪಾತ್ರಗಳು ಹಾಗಿರಲಿಲ್ಲ. ಸ್ವಲ್ಪ ಭಿನ್ನವಾಗಿರುತ್ತವೆ. ಪ್ರತಿ ಕಲಾವಿದರಿಗೂ ಭಿನ್ನತೆ ಮುಖ್ಯ. ಮುಂದಿನ ಸಿನಿಮಾಗಳು ಬೇರೆಯದ್ದೇ ರೀತಿಯಲ್ಲಿವೆ. ಸದ್ಯ ಎರಡು ಸಿನಿಮಾಗಳ ಶೂಟಿಂಗ್ ಮುಗಿಸಿದ್ದೇನೆ. ಅದರ ಬಗ್ಗೆ ಸದ್ಯದಲ್ಲೇ ಅಪ್‌ಡೇಟ್ ಸಿಗಲಿದೆ. ಆ್ಯಕ್ಟಿಂಗ್ ಜತೆಗೆ ನಾನು ಯೋಗ ಶಿಕ್ಷಕಿ ಕೂಡ ಹೌದು’ಎಂದು ಹೇಳಿಕೊಳ್ಳುತ್ತಾರೆ ರಜನಿ.