ಮುಳ್ಳಿನ ಗುಲಾಬಿ ಚಿತ್ರತಂಡ 
ಸ್ಯಾಂಡಲ್‌ವುಡ್

ಹೆಣ್ಣಿನ ಕಷ್ಟಗಳ ಸುತ್ತ ‘ಮುಳ್ಳಿನ ಗುಲಾಬಿ’: ತಾವೇ ರಚಿಸಿದ ಕಾದಂಬರಿ ಆಧಾರಿತ ಚಿತ್ರಕ್ಕೆ ನಾಯಕಿಯಾದ ಆಶಾ

ಶಿವಮಲ್ಲಯ್ಯ ಸ್ಥಾವರಮಠ

ಪ್ರಮುಖ ಮುಖ್ಯಾಂಶಗಳು

  • ಸಿನಿಮಾವಾದ ಲೇಖಕಿ ಆಶಾ ಗುರುಲಿಂಗಯ್ಯ ರಚಿಸಿರುವ ‘ಮುಳ್ಳಿನ ಗುಲಾಬಿ’ ಕಾದಂಬರಿ
  • ತಾವೇ ಬರೆದ ಕೃತಿಯಾಧಾರಿತ ಸಿನಿಮಾಕ್ಕೆ ತಾವೇ ನಾಯಕಿಯಾದ ಆಶಾ
  • ಮಹಿಳಾ ಪ್ರಧಾನ ಚಿತ್ರಕ್ಕೆ ಸ್ಟೈಲ್ ಶಿವು ನಿರ್ದೇಶನ
ಬೆಂಗಳೂರು: ಲೇಖಕಿ ಆಶಾ ಗುರುಲಿಂಗಯ್ಯ ರಚಿಸಿರುವ ‘ಮುಳ್ಳಿನ ಗುಲಾಬಿ’ ಕಾದಂಬರಿ ಇದೀಗ ಸಿನಿಮಾವಾಗುತ್ತಿದೆ. ತಾವೇ ರಚಿಸಿದ ಈ ಕಾದಂಬರಿ ಆಧಾರಿತ ಚಿತ್ರದಲ್ಲಿ ಅವರೇ ಮಖ್ಯಭೂಮಿಕೆಯಲ್ಲಿ ನಟಿಸುತ್ತಿರುವುದು ವಿಶೇಷ. ಹೆಣ್ಣಿನ ಕಷ್ಟ-ಸಂಕೋಲೆಗಳ ಮೇಲೆ ಈ ಸಿನಿಮಾ ಬೆಳಕು ಚೆಲ್ಲಲಿದೆ. ಸ್ಟೈಲ್ ಶಿವು ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಆಶಾ, ‘ಪದವಿ ಓದುತ್ತಿರುವಾಗಲೇ ಸಾಹಿತ್ಯದ ಬಗ್ಗೆ ಒಲವಿತ್ತು. ಕಷ್ಟಪಡುತ್ತಿದ್ದ ಹೆಣ್ಣು ಮಗಳನ್ನು ನೋಡಿ ಈ ಕಥೆ ಬರೆದೆ. ಆಕೆ ಓದಲು ಎಷ್ಟು ಕಷ್ಟಪಡುತ್ತಾಳೆ, ಮದುವೆಯಾದ ಮೇಲೆ ಗಂಡನ ಮನೆಯಲ್ಲಿ ಏನೆಲ್ಲ ತೊಂದರೆ ಅನುಭವಿಸುತ್ತಾಳೆ ಎಂದು ಅದರಲ್ಲಿ ಹೇಳಿದ್ದೆ. ಆ ಕಾದಂಬರಿಗೆ ಬಿ.ಟಿ. ಲಲಿತಾನಾಯಕ್ ಮುನ್ನುಡಿ ಬರೆದರೆ, ಮೈಸೂರು ರಮಾನಂದ ಹಿನ್ನುಡಿ ಬರೆದಿದ್ದಾರೆ. ತುಂಬಾ ಜನ ಕಾದಂಬರಿ ಓದಿ ಒಳ್ಳೆಯ ಅಭಿಪ್ರಾಯ ತಿಳಿಸಿದಾಗ ಸಿನಿಮಾ ಮಾಡಬೇಕು ಅನಿಸಿತು. ಶಿವುಗೆ ಈ ಬಗ್ಗೆ ಹೇಳಿದಾಗ ಅದಕ್ಕೆ ಅವರು ಒಪ್ಪಿದರು. ಈಗ ಚಿತ್ರ ಸಿದ್ಧವಾಗುತ್ತಿದೆ’ ಎಂದರು. ನಿರ್ದೇಶಕ ಸ್ಮೈಲ್ ಶಿವು, ‘ನನ್ನ ಎರಡನೇ ಚಿತ್ರ ಇದು. ಸ್ನೇಹಿತರೇ ಸೇರಿ ಈ ಸಿನಿಮಾ ಮಾಡುತ್ತಿದ್ದೇವೆ. ಎಲ್ಲ ಕಾಲದಲ್ಲೂ ಹೆಣ್ಣಿನ ಕಷ್ಟ ಇದ್ದದ್ದೇ. 80ರಷ್ಟು ಮೂಲಕಥೆ ಇಟ್ಟುಕೊಂಡು ಸ್ಕ್ರಿಪ್ಟ್ ಮಾಡಿದ್ದು, 25 ದಿನಗಳ ಕಾಲ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸುವ ಯೋಜನೆಯಿದೆ’ ಎಂದು ಮಾಹಿತಿ ನೀಡಿದರು. ಆಶಾ ಜತೆಗೆ ಅಜಯ್ ಗೌಡ, ಗಿರಿಜಾ ಲೋಕೇಶ್, ರೇಖಾದಾಸ್ ತಾರಾಗಣದಲ್ಲಿದ್ದಾರೆ.