ಪ್ರಮುಖ ಮುಖ್ಯಾಂಶಗಳು
ಬೆಂಗಳೂರು: ‘ತ್ರಿವಿಕ್ರಮ್’ ಮೂಲಕ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದ್ದ ನಟ ರವಿಚಂದ್ರನ್ ಪುತ್ರ ವಿಕ್ರಮ್ ‘ಮುಧೋಳ್’ ಚಿತ್ರದ ಮೂಲಕ ಮತ್ತೆ ಬೆಳ್ಳಿತೆರೆ ಮೇಲೆ ಕಾಣಿಸಿಕೊಳ್ಳಲು ಸಿದ್ಧರಾಗುತ್ತಿದ್ದಾರೆ. ಕಾರ್ತಿಕ್ ರಂಜನ್ ನಿರ್ದೇಶನದ ಈ ಚಿತ್ರವು ಕೆಲ ವರ್ಷಗಳ ಹಿಂದೆಯೇ ಸೆಟ್ಟೇರಿತ್ತಾದರೂ ಹಲವು ಅಡೆ-ತಡೆಗಳನ್ನು ಎದುರಿಸಿತ್ತು. ಆ ಮಧ್ಯೆಯೇ ಶೂಟಿಂಗ್ ಪೂರ್ಣಗೊಳಿಸಿರುವ ಚಿತ್ರತಂಡ ಇದೀಗ ತೆರೆಗೆ ಬರಲು ಸಿದ್ಧವಾಗಿದೆ. ಇತ್ತೀಚೆಗೆ ನಟ ವಿಕ್ರಮ್ ಜನ್ಮದಿನದ ಅಂಗವಾಗಿ ‘ಮುಧೋಳ್’ ಚಿತ್ರದ ಮೊದಲ ಹಾಡು ರಿಲೀಸ್ ಮಾಡಲಾಯಿತು. ‘ಗುಚ್ಚಿ ಗರ್ಲ್’ ಎಂಬ ಶೀರ್ಷಿಕೆಯ ಹಾಡಿಗೆ ಕಾರ್ತಿಕ್ ರಂಜನ್ ಸಾಹಿತ್ಯ ಒದಗಿಸಿದ್ದು, ಯುವನ್ ಚಂದ್ರನ್ ಸಂಗೀತ ನೀಡಿದ್ದಾರೆ. ಸಿಂಧೂಜಾ ಶ್ರೀನಿವಾಸನ್, ಅನಿರುದ್ಧ ಶಾಸಿ ಧ್ವನಿಯಾಗಿರುವ ಈ ವಿಶೇಷ ಸಾಂಗ್‌ನಲ್ಲಿ ಇಷಿತಾ ರಾಜ್ ಜತೆ ವಿಕ್ರಮ್ ರವಿಚಂದ್ರನ್, ಸಂಜನಾ ಆನಂದ್ ಕುಣಿದು ಕುಪ್ಪಳಿಸಿದ್ದಾರೆ. ಚಿತ್ರದ ಬಗ್ಗೆ ವಿಕ್ರಮ್ ರವಿಚಂದ್ರನ್, ‘‘ಮುಧೋಳ್’ ಪಕ್ಕಾ ಕಮರ್ಷಿಯಲ್ ಹಾಗೂ ಸಸ್ಪೆನ್ಸ್ ಸಿನಿಮಾ. ನಿರ್ಮಾಪಕರಿಗೆ ಸಂಬಂಧಿಸಿದ ಕೆಲವು ಸಮಸ್ಯೆಗಳು ಉದ್ಭವಿಸಿದ ಕಾರಣ ಹಾಗೂ ಚಿತ್ರದ ಗುಣಮಟ್ಟವನ್ನು ಹೆಚ್ಚಿಸುವ ಜತೆಗೆ ಚಿತ್ರಕಥೆಯಲ್ಲಿ ಕೆಲ ಬದಲಾವಣೆ ಮಾಡಿದ್ದರಿಂದಾಗಿ ಸಿನಿಮಾ ತಡವಾಯಿತು. ‘ಮುಧೋಳ್’ ಟೈಟಲ್ ಆಯ್ಕೆ ಮಾಡಿದ್ದು ನಮ್ಮ ತಂದೆ ರವಿಚಂದ್ರನ್ ಅವರು. ಸದ್ಯದಲ್ಲೇ ಚಿತ್ರದ ಮುಂದಿನ ಅಪ್‌ಡೇಟ್‌ಗಳ ಜತೆಗೆ ರಿಲೀಸ್ ಡೇಟ್ ಕೂಡ ಅನೌನ್ಸ್ ಮಾಡಲಿದ್ದೇವೆ’ ಎಂದು ತಿಳಿಸಿದರು.