ಹಿರಿಯ ನಿರ್ದೇಶಕ ಸಿಂಗೀತಂ ಶ್ರೀನಿವಾಸ ರಾವ್ 
ಸ್ಯಾಂಡಲ್‌ವುಡ್

ಸಿನಿ ಮಾಂತ್ರಿಕ, ಅಪೂರ್ವ ನಿರ್ದೇಶಕ ಸಿಂಗೀತಂ ಶ್ರೀನಿವಾಸ ರಾವ್: ಕನ್ನಡ ಸೇರಿ ವಿವಿಧ ಭಾಷೆಗಳಲ್ಲಿ 61 ಚಿತ್ರಗಳ ನಿರ್ದೇಶನ! Singeetham Srinivasa Rao

ಹಿರಿಯ ನಿರ್ದೇಶಕ ಶ್ರೀನಿವಾಸ ರಾವ್ ನಿಧನಕ್ಕೆ ಭಾರತೀಯ ಚಿತ್ರರಂಗದ ತಾರೆಯರಾದ ಕಮಲ್ ಹಾಸನ್, ಚಿರಂಜೀವಿ, ಪವನ್ ಕಲ್ಯಾಣ್, ಶಿವರಾಜಕುಮಾರ್ ಸೇರಿ ಹಲವರು ಸಂತಾಪ ಸೂಚಿಸಿದ್ದಾರೆ. ಐದೂವರೆ ದಶಕಗಳ ವೃತ್ತಿಜೀವನದಲ್ಲಿ ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಸೇರಿ 61 ಚಿತ್ರಗಳನ್ನು ನಿರ್ದೇಶಿಸಿದ ಖ್ಯಾತಿ ಸಿಂಗೀತಂ ಶ್ರೀನಿವಾಸ ರಾವ್ ಅವರದ್ದು.

Singeetham Srinivasa Rao : ಭಾರತೀಯ ಚಿತ್ರರಂಗದ ಪ್ರಯೋಗಶೀಲ ಹಿರಿಯ ನಿರ್ದೇಶಕ ಸಿಂಗೀತಂ ಶ್ರೀನಿವಾಸ ರಾವ್ (95) ವಯೋಸಹಜ ಅನಾರೋಗ್ಯದಿಂದ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ರಾತ್ರಿ ನಿಧನರಾದರು. ಭಾನುವಾರ ಸಂಜೆ ಚೆನ್ನೈನಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

ಹಿರಿಯ ನಿರ್ದೇಶಕ ಶ್ರೀನಿವಾಸ ರಾವ್ ನಿಧನಕ್ಕೆ ಭಾರತೀಯ ಚಿತ್ರರಂಗದ ತಾರೆಯರಾದ ಕಮಲ್ ಹಾಸನ್, ಚಿರಂಜೀವಿ, ಪವನ್ ಕಲ್ಯಾಣ್, ಶಿವರಾಜಕುಮಾರ್ ಸೇರಿ ಹಲವರು ಸಂತಾಪ ಸೂಚಿಸಿದ್ದಾರೆ. ಐದೂವರೆ ದಶಕಗಳ ವೃತ್ತಿಜೀವನದಲ್ಲಿ ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಸೇರಿ 61 ಚಿತ್ರಗಳನ್ನು ನಿರ್ದೇಶಿಸಿದ ಖ್ಯಾತಿ ಸಿಂಗೀತಂ ಶ್ರೀನಿವಾಸ ರಾವ್ ಅವರದ್ದು. ತೆಲುಗಿನ ‘ನೀತಿ ನಿಜಯತಿ’ ಮೂಲಕ ಮೊದಲ ಬಾರಿಗೆ ಡೈರೆಕ್ಟರ್ ಕ್ಯಾಪ್ ಧರಿಸಿದ್ದ ಅವರು ಬಳಿಕ ತೆಲುಗಿನ ‘ಅಮೆರಿಕಾ ಅಮ್ಮಾಯಿ’, ‘ರಾಜು ರಾಣಿ ಜಾಕಿ’, ‘ಆದಿತ್ಯ 369’, ‘ತ್ರಿಲೋಕ ಸುಂದರಿ’, ‘ಬೃಂದಾವನಂ’, ತಮಿಳಿನ ‘ಅಪೂರ್ವ ಸಹೋದರರ್​ಗಳ್’, ‘ಮೈಕಲ್ ಮದನ ಕಾಮ ರಾಜನ್’ ಸೇರಿ ಹಿಂದಿಯ ‘ಫೂಲ್’, ‘ಲಿಟಲ್ ಜಾನ್’, ‘ಮುಂಬೈ ಎಕ್ಸ್​ಪ್ರೆಸ್’ ಹೀಗೆ ಹಲವು ಚಿತ್ರಗಳನ್ನು ನಿರ್ದೇಶಿಸಿದ್ದರು.

ಸಂಗೀತಕ್ಕೆ ರಾಜ್ ಪ್ರೇರಣೆ

ಸಿಂಗೀತಂ ಶ್ರೀನಿವಾಸರಾವ್ ನಿರ್ದೇಶನದ ಜತೆಗೆ ಸಂಗೀತ ಸಂಯೋಜನೆಯಲ್ಲೂ ಕಮಾಲ್ ಮಾಡಿದ್ದಾರೆ. ಕನ್ನಡದ ‘ಭಾಗ್ಯದ ಲಕ್ಷ್ಮೀ ಬಾರಮ್ಮ’, ‘ಸಂಯುಕ್ತ’ ಹಾಗೂ ಹಿಂದಿಯ ‘ಘಟೋತ್ಕಜ’ ಚಿತ್ರಗಳಿಗೆ ಸಂಗೀತ ನಿರ್ದೇಶಿಸಿದ್ದಾರೆ. ನಿರ್ದೇಶಕನಾಗಿಯೇ ಮುಂದುವರಿದಿದ್ದ ಸಿಂಗೀತಂ ಶ್ರೀನಿವಾಸರಾವ್ ಅವರ ಸಂಗೀತ ಆಸಕ್ತಿ ಮತ್ತು ಜ್ಞಾನ ಕಂಡ ವರನಟ ರಾಜಕುಮಾರ್ ಸಂಗೀತ ಸಂಯೋಜಿಸುವಂತೆ ಸಲಹೆ ನೀಡಿದರು. ಅವರ ಪ್ರೇರಣೆಯಿಂದ ಸಿಂಗೀತಂ ಸಂಗೀತ ಕ್ಷೇತ್ರಕ್ಕೂ ಕಾಲಿಟ್ಟರು. ‘ರಾಜಕುಮಾರ್ ಅವರ ಪ್ರೇರಣೆಯಿಂದಲೇ ನಾನು ಸಂಗೀತ ನಿರ್ದೇಶಕನಾದೆ’ ಎಂದು ಕೆಲ ತಿಂಗಳ ಹಿಂದೆ ಎ.ಆರ್.ರೆಹಮಾನ್ ಜತೆಗಿನ ಸಂವಾದದಲ್ಲಿ ಶ್ರೀನಿವಾಸರಾವ್ ಹೇಳಿಕೊಂಡಿದ್ದರು.

ನನ್ನ ನಲ್ವತ್ತು ವರ್ಷಗಳ ಸಿನಿಮಾ ಪ್ರಯಾಣ ಆರಂಭವಾಗಿದ್ದು, ಸಿಂಗೀತಂ ಶ್ರೀನಿವಾಸರಾವ್ ನಿರ್ದೇಶನದ ‘ಆನಂದ್’ ಚಿತ್ರದ ಮೂಲಕ. 94ನೇ ವಯಸ್ಸಿನಲ್ಲೂ ನಿರ್ದೇಶಿಸುವ ಮೂಲಕ ವಯಸ್ಸು ಕೇವಲ ನಂಬರ್ ಅಷ್ಟೇ ಎಂಬುದನ್ನು ಸಾಬೀತುಪಡಿಸಿದ್ದರು. ಅವರು ಕೇವಲ ಕಲೆಯ ಭಾಗವಾಗಿರಲಿಲ್ಲ, ಬದಲಾಗಿ ಅವರೇ ಒಂದು ಕಲೆಯಾಗಿದ್ದರು. ‘ಸರ್ವೆವರ್’ ಡಾಕ್ಯುಮೆಂಟರಿ ಕುರಿತು ಅವರ ಹೇಳಿದ ಕೊನೆಯ ಮಾತುಗಳೇ, ನಾವಿಬ್ಬರೂ ನಡೆಸಿದ ಅತ್ಯುತ್ತಮ ಸಂಭಾಷಣೆ.
ಶಿವರಾಜಕುಮಾರ್ ನಟ

ದೊಡ್ಮನೆಯ ನಂಟು

ಹಿರಿಯ ನಿರ್ದೇಶಕ ಸಿಂಗೀತಂ ಶ್ರೀನಿವಾಸರಾವ್ ಕನ್ನಡದಲ್ಲಿ 13 ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಅದರಲ್ಲಿ ಬಹುತೇಕ ಚಿತ್ರಗಳು ‘ದೊಡ್ಮನೆ’ ಕುಟುಂಬದ ಕಲಾವಿದರಿಗೆ ಎಂಬುದು ವಿಶೇಷ. ‘ದೊಡ್ಮನೆ’ ಕುಟುಂಬದ ಡಾ.ರಾಜಕುಮಾರ್, ಶಿವರಾಜಕುಮಾರ್, ರಾಘವೇಂದ್ರ ರಾಜಕುಮಾರ್ ಹಾಗೂ ಪುನೀತ್ ರಾಜಕುಮಾರ್ ಈ ನಾಲ್ವರಿಗೆ ಸಿಂಗೀತಂ ಆಕ್ಷನ್-ಕಟ್ ಹೇಳಿದ್ದಾರೆ. ರಾಜಕುಮಾರ್ ಅಭಿನಯದ ‘ಹಾಲು ಜೇನು’ ಮೂಲಕ ಅವರು ಸ್ಯಾಂಡಲ್​ವುಡ್​ಗೆ ಪದಾರ್ಪಣೆ ಮಾಡಿದ್ದರು. ಬಳಿಕ ಅಣ್ಣಾವ್ರ ‘ಚಲಿಸುವ ಮೋಡಗಳು’, ‘ಎರಡು ನಕ್ಷತ್ರಗಳು’, ‘ಶ್ರಾವಣ ಬಂತು’, ‘ಜ್ವಾಲಾಮುಖಿ’, ‘ಭಾಗ್ಯದ ಲಕ್ಷ್ಮೀ ಬಾರಮ್ಮ’, ‘ಶ್ರುತಿ ಸೇರಿದಾಗ’, ‘ದೇವತಾ ಮನುಷ್ಯ’ ನಿರ್ದೇಶಿಸಿದ್ದರು. ‘ಆನಂದ್’ (1986) ಚಿತ್ರದ ಮೂಲಕ ಶಿವರಾಜಕುಮಾರ್ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದರು. ಅಲ್ಲದೆ, ರಾಘವೇಂದ್ರ ರಾಜಕುಮಾರ್​ರ ‘ಚಿರಂಜೀವಿ ಸುಧಾಕರ’, ‘ಬೆಳ್ಳಿಯಪ್ಪ ಬಂಗಾರಪ್ಪ’, ‘ಟುವ್ವಿ ಟುವ್ವಿ ಟುವ್ವಿ’, ಪುನೀತ್ ರಾಜಕುಮಾರ್ ಬಾಲನಟನಾಗಿ ಕಾಣಿಸಿಕೊಂಡಿದ್ದ ‘ಚಲಿಸುವ ಮೋಡಗಳು’, ‘ಎರಡು ನಕ್ಷತ್ರಗಳು’ ಚಿತ್ರಗಳಿಗೆ ಆಕ್ಷನ್-ಕಟ್ ಹೇಳುವ ಮೂಲಕ ‘ದೊಡ್ಮನೆ’ ಕುಟುಂಬದ ಫೇವರಿಟ್ ನಿರ್ದೇಶಕರಾಗಿದ್ದರು. ಜಗ್ಗೇಶ್ ಅಭಿನಯದ ‘ಮೇಕಪ್’ (2008) ಅವರ ನಿರ್ದೇಶನದ ಕೊನೆಯ ಕನ್ನಡ ಚಿತ್ರ.

ಪ್ರಮುಖ ಮೈಲಿಗಲ್ಲುಗಳು

* ಎರಡು ಬಾರಿ ರಾಷ್ಟ್ರಪ್ರಶಸ್ತಿ, ತಮಿಳಿನ ‘ದಿಕ್ಕತ್ರ ಪಾರ್ವತಿ’ (1973), ಸಂಭಾಷಣೆ ರಹಿತ ‘ಪುಷ್ಪಕ ವಿಮಾನ’ (1988) ಚಿತ್ರಗಳ ನಿರ್ದೇಶನಕ್ಕೆ.

* ‘ಹಾಲು ಜೇನು’ (1982) ಚಿತ್ರದ ನಿರ್ದೇಶನ, ‘ಭಾಗ್ಯದ ಲಕ್ಷ್ಮೀ ಬಾರಮ್ಮ’, (1985) ಚಿತ್ರಕಥೆಗಾಗಿ ಹಾಗೂ ‘ಆನಂದ್’ (1986) ಚಿತ್ರಕ್ಕೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ.

* ಐದು ಬಾರಿ ತೆಲುಗಿನ ಪ್ರತಿಷ್ಠಿತ ನಂದಿ ಅವಾರ್ಡ್ ಪಡೆದ ಹೆಗ್ಗಳಿಕೆ.

ಇಳಿವಯಸ್ಸಿನಲ್ಲೂ ನಿರ್ದೇಶನ

ಶ್ರೀನಿವಾಸರಾವ್ 94ರ ಇಳಿವಯಸ್ಸಿನಲ್ಲಿಯೂ ತೆಲುಗಿನ ‘ಸಿಂಗ್ ಗೀತಂ’ ಚಿತ್ರಕ್ಕೆ ಆಕ್ಷನ್-ಕಟ್ ಹೇಳುವ ಮೂಲಕ ದಾಖಲೆ ಬರೆದಿದ್ದರು. ಸೆಪ್ಟೆಂಬರ್ 21ಕ್ಕೆ 95ನೇ ವರ್ಷಕ್ಕೆ ಕಾಲಿಟ್ಟಿದ್ದ ಅವರು ಮತ್ತೊಂದು ಹೊಸ ಚಿತ್ರವನ್ನು ನಿರ್ದೇಶಿಸುವ ಸಿದ್ಧತೆಯಲ್ಲಿದ್ದರು ಎಂದು ‘ಕಲ್ಕಿ 2898 ಎಡಿ’ ನಿರ್ದೇಶಕ ನಾಗ್ ಅಶ್ವಿನ್ ಹೇಳಿದ್ದಾರೆ. ಇನ್ನು ಸಿಂಗೀತಂ, ‘ನಾನು ಸಿನಿಮಾದಿಂದ ನಿವೃತ್ತಿ ತೆಗೆದುಕೊಳ್ಳುವುದಿಲ್ಲ, ಜೀವಂತವಾಗಿರುವವರೆಗೂ ಚಿತ್ರಗಳನ್ನು ಮಾಡುತ್ತಿರುತ್ತೇನೆ’ ಎಂದಿದ್ದರು. ಈ ವಿಡಿಯೋ ಗಳು ಅವರ ಮರಣದ ಬಳಿಕ ವೈರಲ್ ಆಗಿವೆ.

ಪ್ರಯೋಗಶೀಲ ನಿರ್ದೇಶಕ

ಸಿಂಗೀತಂ ಶ್ರೀನಿವಾಸ ರಾವ್ ಭಾರತೀಯ ಚಿತ್ರರಂಗ ಕಂಡ ಪ್ರಯೋಗಶೀಲ ನಿರ್ದೇಶಕ. ಅವರ ನಿರ್ದೇಶನದ ಪ್ರತಿ ಸಿನಿಮಾಗಳಲ್ಲಿ ಹೊಸ ಪ್ರಯೋಗ ಆಕರ್ಷಣೆಯಾಗಿರುತ್ತಿತ್ತು. ಕಮಲ್ ಹಾಸನ್ ಅಭಿನಯದ ‘ಪುಷ್ಪಕ ವಿಮಾನ’ (1987) ಚಿತ್ರವು ಸಿಂಗೀತಂ ನಿರ್ದೇಶನದ ಸಂಭಾಷಣೆ ರಹಿತ ಚಿತ್ರ. ಅಬ್ಬರದ ಡೈಲಾಗ್ ಇರುವ ಚಿತ್ರಗಳ ಮಧ್ಯೆಯೇ ಅವರು ಸಂಭಾಷಣೆ ರಹಿತ ಸಿನಿಮಾ ನಿರ್ದೇಶಿಸಿ, ಗೆದ್ದಿದ್ದರು. ಅಲ್ಲದೆ ಈ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಸಂದಿತ್ತು. ‘ಪುಷ್ಪಕ ವಿಮಾನ’ ಚಿತ್ರದ ಬಹುತೇಕ ಶೂಟಿಂಗ್ ಬೆಂಗಳೂರಿನಲ್ಲಿಯೇ ನಡೆದಿತ್ತು. ಟೈಮ್ ಟ್ರಾವೆಲ್ಲರ್ ಕುರಿತ ಸೈನ್ಸ್ ಫಿಕ್ಷನ್ ಚಿತ್ರ ತೆಲುಗಿನ ‘ಆದಿತ್ಯ 369’ (1991) ಇಂದಿಗೂ ಪ್ರಯೋಗಾತ್ಮಕ ಸಿನಿಮಾಗಳ ಪಟ್ಟಿಯಲ್ಲಿದೆ. ‘ಮೈಕಲ್ ಮದನ ಕಾಮ ರಾಜನ್’ ಸಿನಿಮಾದಲ್ಲಿ ಕಮಲ್ ಹಾಸನ್ ಒಟ್ಟು ನಾಲ್ಕು ಪಾತ್ರಗಳನ್ನು ನಿರ್ವಹಿಸಿದ್ದರು. ಹಾಗೆಯೇ, ‘ಅಪೂರ್ವ ಸಹೋದರರ್​ಗಳ್’ ಚಿತ್ರದಲ್ಲಿ ಕಮಲ್ ಯಾವುದೇ ವಿಎಫ್​ಎಕ್ಸ್, ತಂತ್ರಜ್ಞಾನದ ನೆರವಿಲ್ಲದೆ ‘ಕುಬ್ಜ’ನಾಗಿ ಕಾಣಿಸಿಕೊಂಡಿದ್ದರು. ಕನ್ನಡದ ‘ಮೇಕಪ್’ ಚಿತ್ರದಲ್ಲಿ ನಟ ಜಗ್ಗೇಶ್​ಗೆ ಅಜ್ಜಿಯ ಮೇಕಪ್ ತೊಡಿಸಿದ್ದರು. ಬಣ್ಣದ ಲೋಕದಲ್ಲಿ ಇದು ಕೂಡ ವಿಶಿಷ್ಟ ಪ್ರಯೋಗ. ಇನ್ನು ಅವರ ನಿರ್ದೇಶನದ ಕೊನೆಯ ‘ಸಿಂಗ್ ಗೀತಂ’ ಚಿತ್ರದ ಇಡೀ ಸಂಭಾಷಣೆಗಳು ಹಾಡಿನ ರೂಪದಲ್ಲಿದ್ದವು. ಗಣಿಯೊಂದರಲ್ಲಿ ನಡೆಯುವ ಕಥೆ ಇದಾಗಿದ್ದು, ದೇವರ ಶಾಪದಿಂದಾಗಿ ಇಡೀ ಊರಿನ ಜನರು ಹಾಡಿನ ಮೂಲಕವೇ ಮಾತನಾಡುವಂತಾಗುತ್ತದೆ. ಹೀಗೆ ಕೊನೆಯ ಸಿನಿಮಾದವರೆಗೂ ಪ್ರಯೋಗಕ್ಕೆ ತಮ್ಮನ್ನು ತಾವು ಒಡ್ಡಿಕೊಂಡಿದ್ದರು.