ಲಾಕ್ ಡೌನ್ ಡೇಸ್​ 21 ಚಿತ್ರತಂಡ 
ಸ್ಯಾಂಡಲ್‌ವುಡ್

ಲಾಕ್‌ಡೌನ್ 21 ಡೇಸ್ : ಐದು ವರ್ಷಗಳ ಬಳಿಕ ಕರೊನಾ ವೈರಸ್ ಬೆನ್ನುಬಿದ್ದ ಹೊಸ ಚಿತ್ರತಂಡ

ಪ್ರಮುಖ ಮುಖ್ಯಾಂಶಗಳು

  • ಲಾಕ್ ಡೌನ್ ಘಟನೆಗಳು ತೆರೆ ಮೇಲೆ
  • ಬಂಡಿ ಮಹಾಂಕಾಳಿ ದೇವಸ್ಥಾನದಲ್ಲಿ ಸೆಟ್ಟೇರಿದ ಚಿತ್ರ
  • ಮಧುಮೋಹನ್ ಮತ್ತು ಮಾಚಯ್ಯ ಜಂಟಿಯಾಗಿ ಚಿತ್ರಕ್ಕೆ ಆ್ಯಕ್ಷನ್ -ಕಟ್​

ಬೆಂಗಳೂರು: ದೇಶಾದ್ಯಂತ ಕರೊನಾ ವೈರಸ್ ವ್ಯಾಪಿಸಿದ್ದಾಗ ಮುನ್ನಚ್ಚರಿಕೆ ಕ್ರಮವಾಗಿ ಲಾಕ್‌ಡೌನ್ ಘೋಷಿಸಲಾಗಿತ್ತು. ಅದರಿಂದಾಗಿ ಜನಸಾಮಾನ್ಯರು ಬಹಳಷ್ಟು ತೊಂದರೆ ಅನುಭವಿಸಿದ್ದರು. ಜತೆಗೆ ಬದುಕಿಗೂ ಹೊಡೆತ ಬಿದ್ದಿತ್ತು. ಇದೀಗ ಅದೇ ಘಟನೆಗಳನ್ನೇ ಆಧಾರವಾಗಿಟ್ಟುಕೊಂಡು ಕನ್ನಡದಲ್ಲಿ ‘ಲಾಕ್‌ಡೌನ್ 21 ಡೇಸ್’ ಎಂಬ ಸಿನಿಮಾ ಸೆಟ್ಟೇರಿದೆ. ಈ ಹಿಂದೆ ಕೆಲ ಕಿರುಚಿತ್ರಗಳನ್ನು ನಿರ್ದೇಶಿಸಿದ್ದ ಮಧುಮೋಹನ್ ಹಾಗೂ ಮಾಚಯ್ಯ ಜಂಟಿಯಾಗಿ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಇತ್ತೀಚೆಗಷ್ಟೇ ಬಂಡಿ ಮಹಾಂಕಾಳಿ ದೇವಸ್ಥಾನದಲ್ಲಿ ಚಿತ್ರಕ್ಕೆ ಮುಹೂರ್ತ ನೆರವೇರಿಸಲಾಯಿತು. ‘ನಮ್ ಗಣಿ ಬಿಕಾಂ. ಪಾಸ್’ ನಿರ್ದೇಶಕ ಅಭಿಷೇಕ್ ಶೆಟ್ಟಿ ಶೂಟಿಂಗ್‌ಗೆ ಚಾಲನೆ ನೀಡಿದರು. ಹೊಸ ಪ್ರತಿಭೆಗಳಾದ ಅನಿಲ್ ಸಿ.ಕೆ., ಅರುಣ್ ಯಾದವ್, ಪ್ರಿಯಾಂಕಾ ರಾಜ್, ಮಂಜು ನಂಜನಗೂಡು ಹಾಗೂ ಹಿರಿಯ ನಟ ಎಂ.ಕೆ. ಮಠ ತಾರಾಗಣದಲ್ಲಿದ್ದಾರೆ. ನಿರ್ದೇಶಕ ಮಧುಮೋಹನ್, ‘ಶಾರ್ಟ್‌ಫಿಲಂಗಳನ್ನು ನಿರ್ದೇಶಿಸಿದ ನಂತರ ದೊಡ್ಡಮಟ್ಟದ ಸಿನಿಮಾ ಮಾಡಬೇಕೆಂಬುದು ನನ್ನ ಕನಸಾಗಿತ್ತು. ಆ ಕನಸು ಇದೀಗ ‘ಲಾಕ್‌ಡೌನ್ 21 ಡೇಸ್’ ಮೂಲಕ ನೆರವೇರುತ್ತಿದೆ. ಬೆಂಗಳೂರು ಮತ್ತು ಚಿಕ್ಕಮಗಳೂರಿನಲ್ಲಿ ಶೂಟಿಂಗ್ ಮಾಡಲಿದ್ದೇವೆ’ ಎಂದು ಹೇಳಿದರು. ಸಾಮಾಜಿಕ ಗಂಭೀರತೆಯ ಜತೆಗೆ ಹೃದಯಸ್ಪರ್ಶಿ ಪ್ರೇಮಕಥೆ ಹೊಂದಿರುವ ಈ ಸಿನಿಮಾದ ಚಿತ್ರೀಕರಣ ಸೆಪ್ಟೆಂಬರ್‌ನಲ್ಲಿ ಶುರುವಾಗಲಿದೆ.