ಲೈಫ್ ಟುಡೇ ಚಿತ್ರದ ಪೋಸ್ಟರ್
- ಮಲೆನಾಡಿನ ಸೌಂದರ್ಯದ ಮಧ್ಯೆ ಗುನುಗುವ ಹಾಡುಗಳ ಜತೆಗೆ ರೊಮ್ಯಾಂಟಿಕ್ ಲವ್ ಕಹಾನಿ
- ಲವ್‌ಸ್ಟೋರಿ ಜತೆಗೆ ತಂದೆ-ಮಗಳ ಭಾವನಾತ್ಮಕ ಸಂಬಂಧಧ ನಿರೂಪಣೆ
- ಸಿದ್ಧ ಮಾದರಿ ಕಥೆ ಹೇಳಿರುವ ನಿರ್ದೇಶಕ ಕಾಂತಾ ಕನ್ನಲ್ಲಿ
ತಾರಾಗಣ: ಕಿರಣ್ ಅದಿತ್ಯ, ಲೇಖಾ ಚಂದ್ರ, ತಬಲಾ ನಾಣಿ, ಜಗ್ಗಪ್ಪ, ರಥರ್ವ್ ಮತ್ತಿತರರು
ಕಷ್ಟದಲ್ಲಿರುವ ನಾಯಕಿಯನ್ನು, ನಾಯಕ ರಕ್ಷಿಸುವುದು. ಬಳಿಕ ಇಬ್ಬರ ನಡುವೆ ಪ್ರೀತಿ ಚಿಗುರೊಡೆಯುವುದು. ಕೊನೆಗೆ ಕುಟುಂಬದ ಒತ್ತಡಕ್ಕೆ ಮಣಿದು ನಾಯಕಿ, ನಾಯಕನಿಂದ ದೂರವಾಗುವುದು... ಈ ರೀತಿಯ ಸಿದ್ಧ ಮಾದರಿಯ ಕಥೆಗಳು ಕನ್ನಡದಲ್ಲಿ ಸಾಕಷ್ಟು ಬಂದಿವೆ. ಇದೇ ಸಾಲಿಗೆ ಇದೀಗ ಕಾಂತಾ ಕನ್ನಲ್ಲಿ ನಿರ್ದೇಶನದ ‘ಲೈಫ್ ಟುಡೇ’ ಕೂಡ ಸೇರುತ್ತದೆ. ಆದರೂ, ಮಲೆನಾಡಿನ ಸೌಂದರ್ಯದ ಮಧ್ಯೆ ಗುನುಗುವ ಹಾಡುಗಳ ಜತೆಗೆ ರೊಮ್ಯಾಂಟಿಕ್ ಲವ್ ಕಹಾನಿಯ ನಿರೂಪಣೆ ಈ ಚಿತ್ರವನ್ನು ನೋಡಿಸಿಕೊಳ್ಳುತ್ತದೆ.
ತಂದೆಯ ಮುದ್ದಿನ ಮಗಳಾದ ಅಮೃತಾಗೆ (ಲೇಖಾ) ಗ್ಯಾರೇಜ್‌ನಲ್ಲಿ ಕೆಲಸ ಮಾಡುವ ಹುಡುಗ ಶಿವು (ಕಿರಣ್) ಮೇಲೆ ಲವ್ ಆಗುತ್ತದೆ. ಇಬ್ಬರ ಪ್ರೀತಿಯ ವಿಷಯ ಹುಡುಗಿ ತಂದೆಗೆ ತಿಳಿಯುತ್ತದೆ. ಗಿಣಿಯಂತೆ ಸಾಕಿದ ಮಗಳನ್ನು ಕಬ್ಬಿಣದ ಮನಸ್ಸಿನವನಿಗೆ ಹೇಗೆ ಕೊಡಲಿ ಎಂಬ ಕೀಳರಿಮೆ ಉಂಟಾಗಿ ಅಮೃತಾಳನ್ನು ಆತನಿಂದ ದೂರ ಮಾಡಿ, ಬೆಂಗಳೂರಿನ ಉದ್ಯಮಿಗೆ ಕೊಟ್ಟು ಮದುವೆ ಮಾಡುತ್ತಾರೆ. ಅತ್ತ ಬೆಂಗಳೂರು ಸೇರಿದ ಅಮೃತಾ, ಇತ್ತ ಅವಳು ಬಿಟ್ಟು ಹೋದ ಕೊರಗಿನಲ್ಲಿ ಶಿವು. ಈ ನಡುವೆ ಇಬ್ಬರ ಬದುಕಿನಲ್ಲಿ ಬೀಸುವ ಬಿರುಗಾಳಿ. ಗಂಡನ ವಂಚನೆ, ತಂದೆಯ ಸಾವು.. ಅಮೃತಾಳನ್ನು ಮತ್ತಷ್ಟು ನೋವಿಗೆ ತಳ್ಳುತ್ತವೆ. ಆ ಮಧ್ಯೆ ಆಕೆ ಹೇಗೆ ಗೆದ್ದು ಬಂದು ಸ್ವಾಭಿಮಾನಿಯಾಗಿ ನಿಲ್ಲುತ್ತಾಳೆ ಎನ್ನುವುದೇ ‘ಲೈಫ್ ಟುಡೇ’ ಚಿತ್ರದ ಪ್ರಮುಖ ಕಥಾ ಹಂದರ. ನಿರ್ದೇಶಕ ಕಾಂತಾ ಕನ್ನಲ್ಲಿ ‘ಲೈಫ್ ಟುಡೇ’ ಮೂಲಕ ಲವ್‌ಸ್ಟೋರಿ ಜತೆಗೆ ತಂದೆ-ಮಗಳ ಭಾವನಾತ್ಮಕ ಸಂಬಂಧವನ್ನು ನಿರೂಪಿಸಿದ್ದಾರೆ. ತಂದೆಯ ಜವಾಬ್ದಾರಿ, ಹೊಣೆಗಾರಿಕೆಗಳನ್ನು ಈ ಸಿನಿಮಾ ಮತ್ತೊಮ್ಮೆ ನೆನಪಿಸುತ್ತದೆ. ಕಥೆಯ ನಡುವಿನ ಕೆಲ ತಿರುವುಗಳು ಇಷ್ಟವಾಗುತ್ತವೆ. ‘ಬದುಕು ನೋಡಲು ಕಣ್ಣುಗಳಲ್ಲ, ಅನುಭವ ಬೇಕು’... ಹೀಗೆ ಕೆಲ ಸಂಭಾಷಣೆಗಳು ಪ್ರೇಕ್ಷಕರನ್ನು ಎಚ್ಚರಿಸುತ್ತವೆ. ಅಂತಿಮವಾಗಿ ಮಹಿಳೆಯೊಬ್ಬಳ ಸ್ವಾವಲಂಬಿ ಜೀವನದ ಬಗ್ಗೆ ಒತ್ತಿ ಹೇಳುತ್ತದೆ. ಹಾಗಾಗಿ, ಲೇಖಾ ಚಂದ್ರ ಪಾತ್ರ ಮತ್ತವರ ಅಭಿನಯ ಈ ಚಿತ್ರದ ಹೈಲೈಟ್. ಮಲೆನಾಡಿನ ಸೌಂದರ್ಯದ ಕಥೆಗೆ ಶ್ರೀಧರ್ ಸಂಭ್ರಮ್ ಸಂಗೀತ ಪೂರಕವಾಗಿದೆ. ‘ನೀನೆ ನೀನೆ ನೋಡಲ್ಲಿ’ ಹಾಡು ಮತ್ತೆ ಮತ್ತೆ ಗುನುಗುವಂತೆ ಮಾಡುತ್ತದೆ.