- ಗುರು ಶಿಷ್ಯರು' ಖ್ಯಾತಿಯ ಜಡೇಶ್ ಕೆ. ಹಂಪಿ ನಿರ್ದೇಶನದ ಲ್ಯಾಂಡ್ಲಾರ್ಡ್
- ದುನಿಯಾ ವಿಜಯ್, ರಚಿತಾ ರಾಮ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ಸಿನಿಮಾ
- ರಾಜ್ ಬಿ.ಶೆಟ್ಟಿ ಅವರ ಪಾತ್ರ ಪರಿಚಯಿಸುವ ದ ರೂಲರ್ ಟೀಸರ್ ಬಿಡುಗಡೆ
- ಈಗ ನಾನೇ ಸರ್ವೈವರ್, ರಾಜ್ ಬಿ ಶೆಟ್ಟಿಯೇ ರೂಲರ್ ಎಂದ ದುನಿಯಾ ವಿಜಯ್
Landlord - "ಗುರು ಶಿಷ್ಯರು' ಖ್ಯಾತಿಯ ಜಡೇಶ್ ಕೆ. ಹಂಪಿ ನಿರ್ದೇಶನದ, ದುನಿಯಾ ವಿಜಯ್, ರಚಿತಾ ರಾಮ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ಸಿನಿಮಾ "ಲ್ಯಾಂಡ್ಲಾರ್ಡ್'. ಇತ್ತೀಚೆಗಷ್ಟೆ ಚಿತ್ರದ ದ ರೂಲರ್ ಟೀಸರ್ ಬಿಡುಗಡೆ ಮಾಡಲಾಗಿದೆ. ಆ ಮೂಲಕ ನಟ ರಾಜ್ ಬಿ. ಶೆಟ್ಟಿ ಪಾತ್ರ ಪರಿಚಯಿಸಲಾಗಿದೆ.
ಪಾತ್ರದ ಬಗ್ಗೆ ರಾಜ್, "ನಾನು ಈ ಚಿತ್ರ ಒಪ್ಪಿಕೊಳ್ಳಲು ಮೊದಲ ಕಾರಣ ಜಡೇಶ್. ನನಗೆ ಡೇಟ್ಸ್ ಇಲ್ಲದಿದ್ದರೂ, ಹಿಂದೆ ಬಿದ್ದು ಕಾಡಿ, ಎಮೋಷನಲ್ ಹಾದಿ ಹಿಡಿದು ಒಪ್ಪಿಸಿದರು. ನಾನಿಲ್ಲಿ ಶೋಷಕ ವರ್ಗದಲ್ಲಿರುವ, ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡುವಂತಹ ವ್ಯಕ್ತಿ. ಕೋಲಾರ ಕನ್ನಡದಲ್ಲಿ ನನ್ನ ಸಂಭಾಷಣೆ ಇದೆ. ಹೀಗಾಗಿ ನಾನು ಮೊದಲೇ ಡೈಲಾಗ್ಸ್ ತರಿಸಿಕೊಂಡು, ಸಿದ್ಧತೆ ನಡೆಸುತ್ತಿದ್ದೆ. ದುನಿಯಾ ವಿಜಯ್ ಅವರ ಜತೆ ಮೊದಲ ಬಾರಿ ನಟಿಸಿದ ಖುಷಿಯಿದೆ' ಎಂದರು.
ನಿರ್ದೇಶಕ ಜಡೇಶ್, ""ಲ್ಯಾಂಡ್ಲಾರ್ಡ್' ನನ್ನ ಕನಸು. ಈ ಚಿತ್ರಕ್ಕೆ ಒಳ್ಳೆಯದಾಗಲಿ ಅಥವಾ ಕೆಟ್ಟದಾಗಲಿ ಅದಕ್ಕೆ ನಾನೊಬ್ಬನೇ ಮಾತ್ರ ಹೊಣೆ' ಎಂದು ಆತ್ಮವಿಶ್ವಾಸದಿಂದ ಹೇಳಿಕೊಂಡರು. 2026 ಜ. 23ರಂದು ಸಿನಿಮಾ ರಾಜ್ಯಾದ್ಯಂತ ತೆರೆಗೆ ಬರಲಿದೆ. ಅದಕ್ಕೂ ಮುನ್ನ ಮೂರು ಹಾಡುಗಳು ಮತ್ತು ಟ್ರೇಲರ್ ಬಿಡುಗಡೆಯಾಗಲಿವೆ. ದುನಿಯಾ ವಿಜಯ್, ರಚಿತಾ ರಾಮ್, ರಾಜ್ ಬಿ. ಶೆಟ್ಟಿ, ಭಾವನಾ ರಾವ್, ರಿತನ್ಯಾ ಜತೆ ರಾಕೇಶ್ ಅಡಿಗ, ಶಿಶಿರ್ ಬೈಕಾಡಿ, ಅಭಿಷೇಕ್ ದಾಸ್, ಮಹಾಂತೇಶ್ ಪ್ರಮುಖ ತಾರಾಗಣದಲ್ಲಿದ್ದಾರೆ. ಮಾಸ್ತಿ, ಶ್ರೀಕಾಂತ್ ಮತ್ತು ಮಂಜುನಾಥ್ ಸಂಭಾಷಣೆ ಬರೆದಿದ್ದು, ಅಜನೀಶ್ ಲೋಕನಾಥ್ ಸಂಗೀತ, ಸ್ವಾಮಿ ಜೆ. ಗೌಡ ಛಾಯಾಗ್ರಹಣ ಮತ್ತು ಕೆ.ಎಂ. ಪ್ರಕಾಶ್ ಸಂಕಲನದಲ್ಲಿ "ಲ್ಯಾಂಡ್ಲಾರ್ಡ್' ಮೂಡಿಬರಲಿದೆ.
ನಾನೇ ಸರ್ವೈವರ್, ಅವರೇ ರೂಲರ್
"ದುನಿಯಾ' ಚಿತ್ರದ ಮೂಲಕ ತಾವು ನಾಯಕನಾದಾಗ ಹಾಗೂ "ಒಂದು ಮೊಟ್ಟೆಯ ಕಥೆ' ಮೂಲಕ ರಾಜ್ ಬಿ. ಶೆಟ್ಟಿ ನಾಯಕನಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಸಂದರ್ಭದಲ್ಲಿ ಎದುರಿಸಿದ ಅವಮಾನಗಳ ಬಗ್ಗೆ ನಟ ದುನಿಯಾ ವಿಜಯ್, "20 ವರ್ಷಗಳ ಹಿಂದೆ ನಾನು ಇರೋದು ಎರಡೇ ಟೊಮ್ಯಾಟೋ, 15 ರೂಪಾಯಿ ಕಾಣಣ್ಣ ಅಂತ ಬಂದೆ. ರಾಜ್ "ಒಂದು ಮೊಟ್ಟೆ..'ಯ ಜತೆ ಬಂದರು. ಆಗ ನಮ್ಮನ್ನು ಎಷ್ಟು ಜನ ಹೇಗೆಲ್ಲಾ ಆಡಿಕೊಂಡಿದ್ದಾರೆ. ನನ್ನ ಬಣ್ಣದ ಬಗ್ಗೆ ಮತ್ತು ಅವರ ತಲೆಯಲ್ಲಿ ಕೂದಲಿಲ್ಲ ಅಂತ ಆಡಿಕೊಂಡಿದ್ದರು. ಈಗ ನಾನೇ ಸರ್ವೈವರ್, ಅವರೇ ರೂಲರ್ ಆಗಿದ್ದೇವೆ. ಆಡಿಕೊಂಡವರಿಗೆಲ್ಲ ತುಂಬ ಹೃದಯದ ಧನ್ಯವಾದ' ಎಂದರು.