ಕೊರಗಜ್ಜ ಚಿತ್ರತಂಡದ ಜತೆ ಶ್ರೇಯಾ ಘೋಷಾಲ್
- ಹಾಡು ರಿಲೀಸ್ ಗೆ ಮುನ್ನ ಸಾಹಿತ್ಯ ಬಿಡುಗಡೆ
- ನಿರ್ದೇಶಕ ಸುಧೀರ್ ಅತ್ತಾವರ ವಿಭಿನ್ನ ಹಾದಿ
- ಗಾಳಿ ಗಂಧ ಹಾಡಿಗೆ ಧ್ವನಿಯಾದ ಶ್ರೇಯಾ ಘೋಷಾಲ್, ಆರ್ಮಾನ್ ಮಲಿಕ್
ಬೆಂಗಳೂರು : ಸಾಮಾನ್ಯವಾಗಿ ಚಿತ್ರತಂಡಗಳು ಹಾಡು ರಿಲೀಸ್‌ಗೆ ಮುನ್ನ ಪೋಸ್ಟರ್ ಅಥವಾ ಪ್ರೋಮೊ ಬಿಡುಗಡೆ ಮಾಡುವುದು ವಾಡಿಕೆ. ಆದರೆ, ಸುಧೀರ್ ಅತ್ತಾವರ ನಿರ್ದೇಶನದ ‘ಕೊರಗಜ್ಜ’ ಚಿತ್ರವು ವಿಭಿನ್ನ ಹಾದಿ ತುಳಿದಿದೆ. ಪ್ರೇಕ್ಷಕರಿಗೆ ಹಾಡಿನ ಸಾಹಿತ್ಯ ಮೊದಲು ಗೊತ್ತಾಗಬೇಕು ಅಂತ ಚಿತ್ರದ ಎರಡನೇ ಹಾಡಿನ ಸಾಹಿತ್ಯವನ್ನು ಮೊದಲು ರಿಲೀಸ್ ಮಾಡಿದೆ. ‘ಗಾಳಿ ಗಂಧ... ತೀಡಿ ತಂದಾ... ಶಬ್ದವಿರದ ಮಾತು...!’ ಎಂದು ಸಾಗುವ ಹಾಡಿಗೆ ಖುದ್ದು ನಿರ್ದೇಶಕ ಸುಧೀರ್ ಸಾಹಿತ್ಯ ರಚಿಸಿದ್ದು, ಗೋಪಿ ಸುಂದರ್ ಸಂಗೀತ ಸಂಯೋಜಿಸಿದ್ದಾರೆ. ಸುಂದರ ಸಾಹಿತ್ಯ, ಸುಮಧುರ ಸಂಗೀತಕ್ಕೆ ಬಾಲಿವುಡ್‌ನ ಖ್ಯಾತ ಗಾಯಕರಾದ ಶ್ರೇಯಾ ೋಷಾಲ್ ಮತ್ತು ಅರ್ಮಾನ್ ಮಲಿಕ್ ಧ್ವನಿಯಾಗಿದ್ದಾರೆ. ಶೀಘ್ರದಲ್ಲೇ ಈ ಹಾಡು ರಿಲೀಸ್ ಆಗಲಿದೆ. ಆರು ಭಾಷೆಗಳಲ್ಲಿ ಮೂಡಿಬರುತ್ತಿರುವ ‘ಕೊರಗಜ್ಜ’ ಸದ್ಯ ರಿಲೀಸ್ ಸಿದ್ಧವಾಗಿದೆ. 3ಡಿ ಪೋಸ್ಟರ್, ‘ಗುಳಿಗಾ ಗುಳಿಗಾ’ ಹಾಡಿನ ಮೂಲಕ ಈಗಾಗಲೇ ಸಿನಿಮಾ ಸದ್ದು ಮಾಡಿದೆ. ಚಿತ್ರದಲ್ಲಿ ಬಾಲಿವುಡ್ ನಟರಾದ ಕಬೀರ್ ಬೇಡಿ, ಸಂದೀಪ್ ಸೋಪರ್ಕರ್, ಗಣೇಶ್ ಆಚಾರ್ಯ, ನಟಿಯರಾದ ಶ್ರುತಿ, ಭವ್ಯಾ ಕಲಾ ಬಳಗದಲ್ಲಿದ್ದಾರೆ. ತ್ರಿವಿಕ್ರಮ್ ಸಿನಿಮಾಸ್ ಹಾಗೂ ಸಕ್ಸಸ್ ಫಿಲಂಸ್ ಬ್ಯಾನರಡಿಯಲ್ಲಿ ತ್ರಿವಿಕ್ರಮ್ ಸಪಲ್ಯ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
ಸಾಹಿತ್ಯ ಗಟ್ಟಿಯಾಗಿ ಮನಸ್ಸಿನಲ್ಲಿ ಉಳಿಯಲಿ
‘ಈ ಹಿಂದೆ ಕವಿ ಪ್ರದೀಪ್, ಆನಂದ್ ಭಕ್ಷಿ ಅಂತಹ ಸಾಹಿತಿಗಳು ಮೊದಲು ಹಾಡು ರಚಿಸಿದ ಬಳಿಕ ಅದಕ್ಕೆ ಟ್ಯೂನ್ ಹಾಕಲಾಗುತ್ತಿತ್ತು. ಇದನ್ನೇ ನಾವೂ ಅನುರಿಸಿದ್ದೇವೆ. ಸಾಹಿತ್ಯ ಗಟ್ಟಿಯಾಗಿ ಪ್ರೇಕ್ಷಕರ ಮನದಲ್ಲಿ ಉಳಿಯಬೇಕು. ಸಂಗೀತದ ಅಬ್ಬರದಲ್ಲಿ ಸಾಹಿತ್ಯ ಕಳೆದುಹೋಗಬಾರದು. ಈ ಹಾಡನ್ನು ಬೆಳ್ತಂಗಡಿ ಸಮೀಪದ ಗಡಾಯಿಕಲ್ಲಿನಲ್ಲಿ ಶೂಟಿಂಗ್ ಮಾಡಿದ್ದೇವೆ. ಇದೊಂದು ಶೃಂಗಾರ ರಸವಿರುವ ಸಾಂಗ್ ಆಗಿದ್ದು, ಹೊಸ ಕಲಾವಿದರು ಹೆಜ್ಜೆ ಹಾಕಿದ್ದಾರೆ. ಗೋಪಿ ಸುಂದರ್ ವಿಭಿನ್ನವಾಗಿ ಹಾಡು ಸಂಯೋಜಿಸಿದ್ದಾರೆ. ತಂತಿವಾದ್ಯಗಳನ್ನು ಚೆನ್ನಾಗಿ ಬಳಸಿಕೊಂಡಿದ್ದಾರೆ. ಅರ್ಮಾನ್ ಮಲಿಕ್ ಈ ಹಾಡನ್ನು ಹಾಡಿರುವುದು ಜೀವನದ ಸೌಭಾಗ್ಯ ಎಂದಿದ್ದಾರೆ. ಶ್ರೇಯಾ ಘೋಷಾಲ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬರಹಗಾರರು ಒಳ್ಳೆಯ ಸಾಹಿತ್ಯ ರಚಿಸಿದರೆ ‘ಇಂಡಿಯನ್ ರ್ಪಾಮೆನ್ಸ್ ರೈಟ್ ಸೊಸೈಟಿ’ ಒಳ್ಳೆಯ ರಾಜಧನ ನೀಡಿ, ಅವರ ಸಾಹಿತ್ಯ ರಕ್ಷಿಸುತ್ತದೆ’ ಎಂದು ಹಾಡಿನ ಬಗ್ಗೆ ನಿರ್ದೇಶಕ ಸುಧೀರ್ ಅತ್ತಾವರ ಮಾಹಿತಿ ನೀಡಿದರು.
ಕೊರಗಜ್ಜ ಚಿತ್ರದ ಹಾಡಿನ ಸಾಹಿತ್ಯ:
ಗಾಳಿ ಗಂಧ.....ತೀಡಿ ತಂದಾ.....
ಶಬ್ದವಿರದ ಮಾತೂ.... ! ಕೇಳಿದಂತಾ....
ಜೋಡಿಯಿಂದಾ..... ಮುಗ್ಧ ವಿರಹ ಹಾಡೂ....!!
ಗಾಳಿ ಗಂಧ.....ತೀಡಿ ತಂದಾ..... ಶಬ್ದವಿರದ ಮಾತೂ.... !
ಮೂಗುದಾಣ ಹಾಕಲೇನು ಪ್ರೀತಿ..... ಸಾಕು ಗಿಣಿಯೇ..?
ಮೂರು ದಾರ ಕಟ್ಟಿ ನಾನು ಬಂಧಿ.... ಸಾಕು ಪ್ರಿಯನೇ.....!
ಕಾಡಿಬಂದ ನಿನ್ನ ನೆನಪು... ಕಾಡಿನಲ್ಲೆ ಸೆಳೆಯಿತೂ.....
ಹೇಳದಂತ ನನ್ನ ಮಾತು.... ಮಾಧುರ್ಯ ತುಂಬಿದಿಂಚರಾ.....!!
ದಾಟಿ ಬಂದ ಮೌನ ಕಲಹ.... ಧಾಟಿ ಯಾಯ್ತು ಕಾವ್ಯಕೇ.....!
ತಾಳದಂತ ನನ್ನ ಪುಳಕ.... ಮಾರ್ಧನಿಸಿ ನಿಶಾಚರಾ....!!
ಮೌನ ಬೇಲಿ ಹಾರಿಬಂದಾ ಮೋಹದಲ್ಲಿ ಸದ್ದೇ...!?
ಮೌನ ಬೇಲಿ ಹಾರಿಬಂದಾ ಮೋಹದಲ್ಲಿ ಸದ್ದೇ...!?
ತಾರೆ ತಂತೀಗ ತಂತೀ... ತಾಳ ಮೇಳಾ...ತಂಪೂ ನಾದಾ...
ಬಾರೆ ಬಂತೀಗ ಬಂತೀ... ಢಾಳ ಡೋಲೀ...
ಡೌಲು ಡೋಲೂ....ಸೇರೆ ಸೇವಂತಿ ಸೋನೇ...ಮಳೆಯಲ್ಲೀ...
ಲಜ್ಜೆ ಸದ್ದು ಕಾನನಕ್ಕೂ....ಮತ್ತು ತಂತು ತುಸುನಕ್ಕೂ......!
ಕತ್ತಲನ್ನು ಹೊದ್ದು ಮಲಗಿ....ಕಾಡು ಕೂಡ ಕನಲಿತೂ.....!!
ಹೆಜ್ಜೆ ಕದ್ದ ಕಾಜಣವೂ... ಗೆಜ್ಜೆ ಕಟ್ಟಿತು ಹಾಡುತಾ...!
ಮುಗ್ಧ ಪ್ರೀತಿ ಕಂಡು ಹೇಳಿತು.. ಕೆಂಪಾಗದಿರು ಕಾದಂಬಿನಿಯೇ....!!
ಮೈಯ ಬಿಸಿಗೆ.....ಒದ್ದೇ.....!
ಮೈಯ ಬಿಸಿಗೆ.....ಒದ್ದೇ.....!