ಬೆಂಗಳೂರು: ನಟ ರಾಜಕುಮಾರ್ ತ್ರಿಪಾತ್ರದಲ್ಲಿ ಕಾಣಿಸಿಕೊಂಡಿದ್ದ ‘ಶಂಕರ್‌ಗುರು’ (1978) ಚಿತ್ರದ ‘ಲವ್ ಮಿ ಆರ್ ಹೇಟ್ ಮಿ, ಕಿಸ್ ಮಿ ಆರ್ ಕಿಲ್ ಮಿ’ ಹಾಡು ಜನಪ್ರಿಯವಾಗಿತ್ತು. ಇದೀಗ ಇದೇ ಹಾಡಿನ ‘ಕಿಸ್ ಮಿ’ ಪದವನ್ನು ಟೈಟಲ್ ಆಗಿ ಬಳಸಿಕೊಂಡು ಕನ್ನಡದಲ್ಲಿ ಚಿತ್ರವೊಂದು ಮೂಡಿಬರುತ್ತಿದೆ. ಇತ್ತೀಚೆಗೆ ಉಡುಪಿಯ ಐತಿಹಾಸಿಕ ಶ್ರೀಶಂಭು ಶೈಲೇಶ್ವರ ದೇವಸ್ಥಾನದಲ್ಲಿ ಮುಹೂರ್ತ ನೆರವೇರಿಸಲಾಯಿತು. ಡಿಸಿಪಿ ಲೋಕೇಶ್ ಮೊದಲ ದೃಶ್ಯಕ್ಕೆ ಕ್ಲ್ಯಾಪ್ ಮಾಡಿದರೆ, ನಿವೃತ್ತ ಡಿಸಿಪಿ, ಅಂತಾರಾಷ್ಟ್ರೀಯ ಬಾಡಿಬಿಲ್ಡರ್ ವ್ಯಾಲೆಂಟೈನ್ ಡಿ’ಸೋಜಾ ಕ್ಯಾಮರಾಗೆ ಚಾಲನೆ ನೀಡಿದರು. ರವಿಬಾಸರ ಚಿತ್ರದ ಕಥೆ ಬರೆದು ನಿರ್ದೇಶಿಸುತ್ತಿದ್ದು, ‘‘ಕಿಸ್ ಮಿ’ ಎಂದರೆ ಇದೊಂದು ಲವ್‌ಸ್ಟೋರಿ ಅಂತನಿಸುವುದು ಸಹಜ. ಆದರೆ, ಇದು ಲವ್‌ಸ್ಟೋರಿಗೆ ಸೀಮಿತವಾಗದೆ ಹಲವು ಭಾವನೆಗಳನ್ನು ವ್ಯಕ್ತಪಡಿಸುತ್ತದೆ. ತಾಯಿ ಮಗನಿಗೆ ಕೊಡುವ ಮುತ್ತು, ಹುಡುಗ ಹುಡುಗಿಯನ್ನು ಅಪ್ಪಿಕೊಂಡು ಕೊಡುವ ಖುಷಿಯ ಕಿಸ್, ಅಜ್ಜಿ ಮೊಮ್ಮಗನಿಗೆ ಹರಸುತ್ತಾ ಕೊಡುವ ಅಭಿಮಾನದ ಮುತ್ತು. ಬದುಕಲ್ಲಿ ಯಾವ ಕಿಸ್ ಮಹತ್ವ ಎನ್ನುವುದನ್ನು ಹೇಳುವ ಪ್ರಯತ್ನ ಇದು’ ಎಂದು ಮಾಹಿತಿ ನೀಡುತ್ತಾಋಎ. ‘ಡೆಡ್ಲಿ ಕಿಲ್ಲರ್’ ಖ್ಯಾತಿಯ ಅಭಯ್ ವೀರ್ ನಾಯಕನಾಗಿದ್ದು, ಅವರಿಗೆ ವೈದ್ಯೆ ಡಾ. ರಾಧನಾ ಆನಂದ್ ಜೋಡಿಯಾಗಿದ್ದಾರೆ. ಉಳಿದಂತೆ ಸಂದೀಪ್ ಶೆಟ್ಟಿಗಾರ್, ಯು.ಕೆ. ಭಾಸ್ಕರ್ ತಾರಾಗಣದಲ್ಲಿದ್ದಾರೆ. ಕೌಶಿಕ್ ಕೃಷ್ಣ ಸಂಗೀತ, ಬಾಲ ಗಣೇಶನ್ ಛಾಯಾಗ್ರಹಣ, ಲಕ್ಕಿ ಸಂಕಲನ ಚಿತ್ರಕ್ಕಿರಲಿದೆ. ಉಡುಪಿ, ಮಡಿಕೇರಿ ಸೇರಿ ವಿವಿಧೆಡೆ ಒಂದೇ ಹಂತದಲ್ಲಿ ಚಿತ್ರೀಕರಣ ಪೂರ್ಣಗೊಳಿಸಲು ಚಿತ್ರತಂಡ ಸಿದ್ಧತೆ ನಡೆಸಿದೆ.