ಸಿಂಹ ಸುಮ್ಮನೆ ಕುಳಿತಿದೆ ಎಂದರೆ...ಹುಟ್ಟುಹಬ್ಬಕ್ಕೂ ಮುನ್ನ ಅಭಿಮಾನಿಗಳಿಗೆ ಭಾವುಕ ಸಂದೇಶ ರವಾನಿಸಿದ ಕಿಚ್ಚ ಸುದೀಪ್! Kichcha Sudeepa
- ಹುಟ್ಟುಹಬ್ಬವನ್ನು ಅಭಿಮಾನಿಗಳ ಜೊತೆ ಆಚರಿಸಿಕೊಳ್ಳದಿರಲು ನಟ ಕಿಚ್ಚ ಸುದೀಪ್ ನಿರ್ಧಾರ
- ಬಲವಾದ ಮತ್ತು ವೈಯಕ್ತಿಕ ಕಾರಣದಿಂದ ಜನ್ಮದಿನದ ಸಂಭ್ರಮಾಚರಣೆಯಿಂದ ದೂರ
- ಸೆಪ್ಟೆಂಬರ್ 2ರ ಹುಟ್ಟುಹಬ್ಬದ ದಿನದಂದು ಮನೆಯ ಬಳಿ ಲಭ್ಯವಿರುವುದಿಲ್ಲ ಎಂದ ಕಿಚ್ಚ
- ಉಡುಗೊರೆ ನೀಡುವ ಬದಲು ಆ ಹಣವನ್ನು ಸಮಾಜಕ್ಕೆ ಸದ್ವಿನಿಯೋಗ ಮಾಡಲು ಕಿಚ್ಚನ ಕರೆ
ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ( Kichcha Sudeepa ) ಅವರು ತಮ್ಮ ಮುಂಬರುವ ಸೆಪ್ಟೆಂಬರ್ 2ರ ಹುಟ್ಟುಹಬ್ಬವನ್ನು ಅಭಿಮಾನಿಗಳ ಜೊತೆ ಆಚರಿಸಿಕೊಳ್ಳದಿರಲು ತೀರ್ಮಾನಿಸಿದ್ದಾರೆ. ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಸುದೀರ್ಘವಾದ ಹಾಗೂ ಭಾವನಾತ್ಮಕ ಪತ್ರವನ್ನು ಹಂಚಿಕೊಂಡಿರುವ ಕಿಚ್ಚ, ಕೆಲವು ಬಲವಾದ ಮತ್ತು ವೈಯಕ್ತಿಕ ಕಾರಣಗಳಿಂದಾಗಿ ಈ ವರ್ಷ ಜನ್ಮದಿನದ ಸಂಭ್ರಮಾಚರಣೆಯಿಂದ ದೂರ ಉಳಿಯುತ್ತಿರುವುದಾಗಿ ಸ್ಪಷ್ಟಪಡಿಸಿದ್ದಾರೆ.
ಕನ್ನಡ ಚಿತ್ರರಂಗಕ್ಕೆ ಬರೋಬ್ಬರಿ 30 ವರ್ಷಗಳನ್ನು ಅರ್ಪಿಸಿರುವ ಕಿಚ್ಚ ಸುದೀಪ್, ಸಿನಿಮಾ ನನ್ನ ಪರಮ ಕಾಯಕ, ಆದರೆ ಕೆಲವೊಮ್ಮೆ ತಡವಾಗಬಹುದು ಅದಕ್ಕೂ ಕಾರಣಗಳಿರುತ್ತವೆ ಎಂದು ತಿಳಿಸಿದ್ದಾರೆ. "ಸಿಂಹ ಸುಮ್ಮನೆ ಕುಳಿತಿದೆ ಎಂದರೆ ಸುಸ್ತಾಗಿದೆ ಅಂತಲ್ಲ, ಮುಂದಿನ ಬೇಟೆಗೆ ರೆಡಿ ಆಗ್ತಿದೆ ಎಂದರ್ಥ" ಎಂಬ ತಮ್ಮದೇ ಚಿತ್ರದ ಖಡಕ್ ಡೈಲಾಗ್ ಮೂಲಕ ತಮ್ಮ ಮುಂದಿನ ಸಿನಿಮಾದ ಸೂಚನೆಯನ್ನು ನೀಡಿದ್ದಾರೆ. "ಕನ್ನಡ ನನ್ನ ಸತ್ಯ.. ಕನ್ನಡದಿಂದ ನಾನು ನಿತ್ಯ" ಎನ್ನುವ ಮೂಲಕ ತಮ್ಮ ಮಾತೃಭಾಷೆಯ ಮೇಲಿರುವ ಅಚಲವಾದ ಪ್ರೀತಿಯನ್ನು ಮತ್ತೊಮ್ಮೆ ವ್ಯಕ್ತಪಡಿಸಿದ್ದಾರೆ.
ಹುಟ್ಟುಹಬ್ಬದ ದಿನದಂದು ನಾನು ಮನೆಯ ಬಳಿ ಯಾರಿಗೂ ಲಭ್ಯವಿರುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಸುದೀಪ್, ಸತ್ಕಾರಗಳು ಗದ್ದಲವಾಗಬಾರದು ಎಂದು ಅಭಿಮಾನಿಗಳಲ್ಲಿ ಕಳಕಳಿಯ ವಿನಂತಿ ಮಾಡಿಕೊಂಡಿದ್ದಾರೆ. ಅಂದು ಉಡುಗೊರೆಗಳನ್ನು ನೀಡುವ ಬದಲು ಆ ಹಣವನ್ನು ಸಮಾಜಕ್ಕೆ ಸದ್ವಿನಿಯೋಗವಾಗುವಂತೆ ಮಾಡುವ ಮೂಲಕ ಸಹಾಯಹಸ್ತ ಚಾಚಲು ಕರೆ ನೀಡಿದ್ದಾರೆ. ಅಭಿಮಾನಿಗಳು ತಮಗಾಗಿ ತರುವ ಉಡುಗೊರೆಗಳಿಗಿಂತ ಸಮಾಜಮುಖಿ ಕೆಲಸಗಳೇ ತಮಗೆ ದೊಡ್ಡ ಶ್ರೀರಕ್ಷೆ ಎಂದು ಕಿಚ್ಚ ಅಭಿಪ್ರಾಯಪಟ್ಟಿದ್ದಾರೆ.
ಅಭಿಮಾನಿಗಳು ತಮ್ಮ ತಮ್ಮ ಊರು ಮತ್ತು ಭಾಗಗಳಲ್ಲಿ ನಡೆಸುವ ಸಮಾಜಪರ ಕಾರ್ಯಕ್ರಮಗಳೇ ತಮಗೆ ನಿಜವಾದ ಆಶೀರ್ವಾದ ಎಂದು ಕಿಚ್ಚ ಸುದೀಪ್ ತಿಳಿಸಿದ್ದಾರೆ. "ನಮ್ಮನ್ನು ಮತ್ತು ನಿಮ್ಮನ್ನು ಎಂದಾದರೂ ಬೇರ್ಪಡಿಸಲು ಸಾಧ್ಯವೇ?" ಎಂದು ಪ್ರಶ್ನಿಸಿರುವ ಅವರು, ಎಲ್ಲೇ ಹೋದರೂ ಕನ್ನಡಿಗರನ್ನು ರಂಜಿಸುವ ವಿಷಯದಲ್ಲಿ ಎಂದಿಗೂ ರಾಜಿಯಾಗುವುದಿಲ್ಲ ಎಂದು ಭಾವುಕರಾಗಿದ್ದಾರೆ. ತಮ್ಮ ಪ್ರತಿಯೊಂದು ಹೆಜ್ಜೆಯಲ್ಲಿಯೂ ಹೆಜ್ಜೆ ಗುರುತಾಗಿ ನಿಂತಿರುವ ಅಭಿಮಾನಿಗಳ ಪ್ರೀತಿಯೇ ತಮಗೆ ಮೈಲಿಗಲ್ಲು ಎಂದು ಕೃತಜ್ಞತೆ ಸಲ್ಲಿಸಿದ್ದಾರೆ.
ಕಳೆದ ಮೂವತ್ತು ವರ್ಷಗಳಿಂದ ಸಿಗುತ್ತಿರುವ ಪ್ರೀತಿ, ಹಾರೈಕೆ ಹಾಗೂ ಚಪ್ಪಾಳೆ-ಶಿಳ್ಳೆಗಳೇ ತಮಗೆ ಅತಿ ದೊಡ್ಡ ಬಲ ಎಂದು ಸುದೀಪ್ ಸ್ಮರಿಸಿಕೊಂಡಿದ್ದಾರೆ. ಯಾವುದೇ ವೇದಿಕೆ ಅಥವಾ ಕಾರ್ಯಕ್ರಮವಿರಲಿ, ಅಲ್ಲಿ ಕನ್ನಡಿಗರನ್ನು ಖುಷಿಪಡಿಸುವುದೇ ನನ್ನ ಗುರಿ ಎಂದು ಪುನರುಚ್ಚರಿಸಿದ್ದಾರೆ. ಅಂತಿಮವಾಗಿ "Luv u all always..." ಎಂದು ಬರೆಯುವ ಮೂಲಕ ತಮ್ಮ ಅಭಿಮಾನಿಗಳ ಮೇಲಿರುವ ಅಪಾರ ಪ್ರೀತಿಯನ್ನು ಕಿಚ್ಚ ಸಾರಿದ್ದಾರೆ.