ಪ್ರಮುಖ ಮುಖ್ಯಾಂಶಗಳು
ಬೆಂಗಳೂರು: ಚನ್ನಪಟ್ಟಣ ಶಾಸಕ, ನಟ ಸಿ.ಪಿ.ಯೋಗೇಶ್ವರ್ ಪುತ್ರ ಧ್ಯಾನ್ ಯೋಗೇಶ್ವರ್ ‘ಕರ್ಣಾಟ ಬಲಂ: ಅಜೇಯಂ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡುತ್ತಿರುವುದು ಗೊತ್ತೇ ಇದೆ. ಸದ್ಯ ಚಿತ್ರದ ಚಿತ್ರೀಕರಣ ಭರ್ಜರಿಯಾಗಿ ಸಾಗುತ್ತಿದ್ದು, ಇತ್ತೀಚೆಗೆ ಬಾದಾಮಿಯಲ್ಲಿ ಸಿನಿಮಾದ ಶೀರ್ಷಿಕೆ ಹಾಡಿನ ಶೂಟಿಂಗ್ ನಡೆಯಿತು. ಧ್ಯಾನ್ ಸಾವಿರಕ್ಕೂ ಹೆಚ್ಚು ನೃತ್ಯ ಕಲಾವಿದರ ಜತೆ ‘ಬಾದಾಮಿ ಸೀಮೆಯಿದು ಎಂತಾ ಸೊಬಗು’ ಎಂಬ ಗೀತೆಗೆ ಹೆಜ್ಜೆ ಹಾಕಿದರು. ಜಾನಪದ ಕಲೆಗಳಾದ ಯಕ್ಷಗಾನ, ನಂದಿಕೋಲು, ವೀರಗಾಸೆ ಕುಣಿತ ಸೇರಿ ವಿವಿಧ ಕಲಾ ತಂಡಗಳು ಭಾಗಿಯಾಗಿದ್ದವು. ತ್ರಿಲೋಕ್ ತ್ರಿವಿಕ್ರಮ್ ಸಾಹಿತ್ಯದ ಗೀತೆಗೆ ವಿ. ಹರಿಕೃಷ್ಣ ಸಂಗೀತ ನೀಡಿದ್ದು, ಮೋಹನ್ ಮಾಸ್ಟರ್ ನೃತ್ಯ ಸಂಯೋಜಿಸಿದ್ದಾರೆ. ಸಿ.ಪಿ.ಯೋಗೇಶ್ವರ್, ‘ಬಾದಾಮಿಯಿಂದ ಶುರುವಾಗುವ ಕಥೆ ರಾಜ್ಯದ ವಿವಿಧ ಭಾಗಗಳಿಗೆ ಸಾಗುತ್ತದೆ. ಚಿತ್ರೀಕರಣ ಆರಂಭಿಸಿ ತಿಂಗಳಾಗಿದ್ದು, ಇನ್ನೆರಡು ದಿನ ಶೂಟಿಂಗ್ ಮಾಡಿದರೆ ಬಾದಾಮಿ ಭಾಗದ ಶೆಡ್ಯೂಲ್ ಮುಗಿಯುತ್ತದೆ. ಅನಂತರ ಹೊಸಪೇಟೆ, ಬೆಂಗಳೂರಿನಲ್ಲಿ ಒಂದೆರೆಡು ದಿನ ಶೂಟಿಂಗ್ ಮಾಡಿಲಿದ್ದೇವೆ. ಅಲ್ಲಿಗೆ ಮೊದಲ ಹಂತದ ಚಿತ್ರೀಕರಣ ಮುಗಿಯಲಿದ್ದು, ಬಳಿಕ ಮೈಸೂರು ಭಾಗದ ಕಥೆ ಆರಂಭವಾಗಲಿದೆ. ಇಂದಿನ ರೈತರ ಸಮಸ್ಯೆಗಳ ಜತೆಗೆ ಚಾಲುಕ್ಯರ ಕಾಲದ ಕಥೆ, ಹೀಗೆ ಎರಡು ಕಾಲಘಟ್ಟಗಳಲ್ಲಿ ನಡೆಯುವ ಕಥೆಯಿದು’ ಎಂದು ಮಾಹಿತಿ ನೀಡಿದರು. ನಾಯಕ ಧ್ಯಾನ್, ‘ಕಳೆದ 20 ದಿನಗಳಿಂದ ಬಾದಾಮಿಯಲ್ಲಿ ಶೂಟಿಂಗ್ ನಡೆಸುತ್ತಿದ್ದೇವೆ. ಇಲ್ಲಿನ ಜನರು ನೀಡುತ್ತಿರುವ ಪ್ರೀತಿಗೆ ತುಂಬಾ ಖುಷಿಯಾಗಿದೆ. ಮುಂದಿನ ಸಂಕ್ರಾಂತಿಗೆ ಸಿನಿಮಾ ತೆರೆಮೇಲೆ ಬರಲಿದೆ’ ಎಂದರು. ನಾಗಣ್ಣ ನಿರ್ದೇಶನದ ಈ ಚಿತ್ರದಲ್ಲಿ ಧ್ಯಾನ್‌ಗೆ ಮಣಿಕಾ ವಿಶ್ವಕರ್ಮ ಜೋಡಿಯಾಗಿದ್ದಾರೆ. ಲಯ, ಸಂಪತ್ ಮೈತ್ರೇಯ, ಮಾನಸಿ ಸುಧೀರ್, ಬಲ ರಾಜವಾಡಿ ಕಲಾಬಳಗದಲ್ಲಿದ್ದಾರೆ.
ಧ್ಯಾನ್‌ಗೆ ಮಣಿಕಾ ಜೋಡಿ