ಸಿನಿಮಾ ಟೀಮ್ಗಳು ಮುಹೂರ್ತದಲ್ಲಿ ಶೀರ್ಷಿಕೆ, ನಂತರ ನಾಯಕ, ನಾಯಕಿಯ ಮೊದಲ ನೋಟ, ಕ್ರಮೇಣ ಟೀಸರ್, ಹಾಡುಗಳು ನಂತರ ರಿಲೀಸ್ಗೂ ಒಂದು ವಾರ ಮುನ್ನ ಟ್ರೇಲರ್ ಬಿಡುಗಡೆ ಮಾಡುವುದು ಸಾಮಾನ್ಯ. ಕೆಲ ಚಿತ್ರತಂಡಗಳು ಆ್ಯಕ್ಷನ್ ಟ್ರೇಲರ್, ವಿಶೇಷ ಪ್ರೋಮೊ ಅಥವಾ ಗ್ಲಿಂಪ್ಸ್ಗಳನ್ನೂ ರಿಲೀಸ್ ಮಾಡುತ್ತವೆ. ಹೀಗೆ ಸಿನಿಮಾಗಳ ಅತ್ಯುತ್ತಮ ಫೈಟ್, ಸಾಂಗ್ ಬಿಟ್ಸ್, ಡೈಲಾಗ್ಗಳನ್ನು ಸೇರಿಸಿ ಟ್ರೇಲರ್ ಕಟ್ ಮಾಡುತ್ತಾರೆ. ಹೀಗಾಗಿಯೇ ಟ್ರೇಲರ್ಗಳನ್ನು ಪ್ರೇಕ್ಷಕರಿಗೆ ಆಮಂತ್ರಣ ಪತ್ರಿಕೆ ಎಂದೂ ಕರೆಯಲಾಗುತ್ತದೆ. ಆದರೆ, ಇತ್ತೀಚೆಗೆ ಕೆಲ ಚಿತ್ರತಂಡಗಳು ಟ್ರೇಲರ್ ಸಹವಾಸವೇ ಬೇಡ, ನಾವು ಹಾಡುಗಳ ಮೂಲಕವೇ ಜನರನ್ನು ಥಿಯೇಟರ್ಗೆ ವೆಲ್ಕಮ್ ಮಾಡುತ್ತೇವೆ ಎನ್ನುತ್ತಿವೆ. ವಿಶೇಷ ಅಂದರೆ, ಟ್ರೇಲರ್ ಆಮಂತ್ರಣ ನೀಡದೇ, ಯಶಸ್ಸನ್ನೂ ಗಳಿಸಿವೆ. ಇದಕ್ಕೆ "ಕೃಷ್ಣಂ ಪ್ರಣಯ ಸಖಿ' ಮತ್ತು "ಅಯೋಗ್ಯ 2' ಚಿತ್ರಗಳು ಉತ್ತಮ ಉದಾಹರಣೆ. ಹೌದು, ಈ ಬಗ್ಗೆ ವಿಜಯವಾಣಿ ಜತೆ ಮಾತನಾಡುವ "ಅಯೋಗ್ಯ 2' ನಿರ್ದೇಶಕ ಮಹೇಶ್, ""ಏನಮ್ಮಿ ಏನಮ್ಮಿ' ಸೇರಿ "ಅಯೋಗ್ಯ' ಚಿತ್ರದ ಹಾಡುಗಳು ದೊಡ್ಡ ಮಟ್ಟದಲ್ಲಿ ಹಿಟ್ ಆಗಿದ್ದವು. ಹೀಗಾಗಿ "ಅಯೋಗ್ಯ 2' ಚಿತ್ರದಲ್ಲೂ ನಾವು ಹಾಡುಗಳ ಮೂಲಕವೇ ಪ್ರೇಕ್ಷಕರನ್ನು ಥಿಯೇಟರ್ಗೆ ಕರೆತರಬೇಕು, ಟ್ರೇಲರ್ ಬಿಡುಗಡೆ ಮಾಡುವುದು ಬೇಡ ಅಂತ ನಾಯಕ ಸತೀಶ್ ನೀನಾಸಂ, ನಿರ್ಮಾಪಕರಾದ ಮುನೇಗೌಡ ಸೇರಿ ಇಡೀ ತಂಡ ನಿರ್ಧರಿಸಿದೆವು. ಅದು ಸಕ್ಸಸ್ ಕೂಡ ಆಯಿತು. ಇದೀಗ 25 ದಿನಗಳನ್ನು ಪೂರೈಸಿರುವ "ಅಯೋಗ್ಯ 2' ನಾಲ್ಕನೇ ವಾರಕ್ಕೆ 40ಕ್ಕೂ ಅಧಿಕ ಸ್ಕ್ರೀನ್ಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಬಜೆಟ್ಗಿಂತ ಒಂದೂವರೆ ಪಟ್ಟು ಹೆಚ್ಚು ಕಲೆಕ್ಷನ್ ಆಗಿದೆ' ಎಂದು ಮಾಹಿತಿ ನೀಡುತ್ತಾರೆ.
ಗೋಲ್ಡನ್ ಐಡಿಯಾ
ನಟ ಗಣೇಶ್ ಮತ್ತು ನಿರ್ದೇಶಕ ಶ್ರೀನಿವಾಸರಾಜು ಕಾಂಬಿನೇಷನ್ನಲ್ಲಿ ರಿಲೀಸ್ ಆಗಿದ್ದ "ಕೃಷ್ಣಂ ಪ್ರಣಯ ಸಖಿ' (ಆ. 15, 2024) ಆ ವರ್ಷದ ಅತಿದೊಡ್ಡ ಹಿಟ್ ಸಿನಿಮಾಗಳಲ್ಲೊಂದು. "ದ್ವಾಪರ' ಹಾಡು ದೊಡ್ಡ ಮಟ್ಟದಲ್ಲಿ ಹಿಟ್ ಆಗಿದ್ದು, ಈಗಲೂ ಜಾಲತಾಣದಲ್ಲಿ ಟ್ರೆಂಡಿಂಗ್ನಲ್ಲಿದೆ. ಇದೀಗ ಗಣೇಶ್ ಮತ್ತು ಶ್ರೀನಿವಾಸ್ ಜೋಡಿ "ಬೃಂದಾ ವಿಹಾರಿ' ಚಿತ್ರದ ಮೂಲಕ ವಾಪಸ್ಸಾಗಿದ್ದು, ಅ. 16ರಂದು ರಿಲೀಸ್ ಆಗಲಿದೆ. ಈಗಾಗಲೇ ಚಿತ್ರದ "ರಾಧಾ ರಾಧಾ' ಹಾಡು ಹಿಟ್ ಲಿಸ್ಟ್ ಸೇರಿದ್ದು, "ಜೀವಾ ಜೀವಾ', "ರಾಮ ರಾಮ ದೇವ' ಸಾಂಗ್ಗಳೂ ಪ್ರೇಕ್ಷಕರನ್ನು ಸೆಳೆಯುವಲ್ಲಿ ಸಕ್ಸಸ್ ಆಗಿವೆ. ಹೀಗಾಗಿಯೇ "ಕೃಷ್ಣಂ ಪ್ರಣಯ ಸಖಿ'ಯಂತೆಯೇ "ಬೃಂದಾ ವಿಹಾರಿ' ಚಿತ್ರಕ್ಕೂ ಹಾಡುಗಳ ಮೂಲಕವೇ ಪ್ರೇಕ್ಷಕರನ್ನು ಥಿಯೇಟರ್ಗೆ ಕರೆತರುವ ಆಲೋಚನೆ ತಂಡದ್ದು. ಹೀಗಾಗಿಯೇ ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡದಿರಲು ಗಣೇಶ್ ಮತ್ತು ತಂಡ ನಿರ್ಧರಿಸಿದ್ದಾರೆ. ಈ ಬಗ್ಗೆ ನಿರ್ದೇಶಕ ಶ್ರೀನಿವಾಸರಾಜು, "ಒಂದು ಚಿತ್ರದ ಅದ್ಭುತ ಅನ್ನಿಸುವ ದೃಶ್ಯಗಳನ್ನು ಸೇರಿಸಿ ಟ್ರೇಲರ್ ಕಟ್ ಮಾಡಲಾಗುತ್ತದೆ. ಆದರೆ, ಟ್ರೇಲರ್ನಲ್ಲೇ ವಾವ್ ಕಂಟೆಂಟ್ ತೋರಿಸಿಬಿಟ್ಟರೆ, ಥಿಯೇಟರ್ನಲ್ಲಿ ಅದೇ ಸನ್ನಿವೇಶಗಳನ್ನು ನೋಡುವ ಪ್ರೇಕ್ಷಕರಿಗೆ ಅದು ವಾವ್ ಅನ್ನಿಸುವುದಿಲ್ಲ. ಹೀಗಾಗಿ ಸಿನಿಮಾದಲ್ಲಿ ಏನಿರಲಿದೆ ಎಂಬ ಕುತೂಹಲ ಬಿಟ್ಟುಕೊಡದೇ, ಹಾಡುಗಳನ್ನು ಮಾತ್ರ ಜನರಿಗೆ ತೋರಿಸಿದರೆ, ಜನ ಥಿಯೇಟರ್ಗೆ ಬಂದಾಗ ಪ್ರತಿ ಡೈಲಾಗ್, ೈಟ್, ಸನ್ನಿವೇಶವೂ ಹೊಸತನ್ನು ನೋಡುತ್ತಿರುವ ಅನುಭವ ನೀಡುತ್ತದೆ' ಎಂದು ಹೇಳಿಕೊಳ್ಳುತ್ತಾರೆ.
ಬೇರೆ ಚಿತ್ರರಂಗಗಳಲ್ಲೂ ಆಗಿದೆ ಪ್ರಯೋಗ
ಹಾಗಂತ "ಅಯೋಗ್ಯ 2', "ಕೃಷ್ಣಂ ಪ್ರಣಯ ಸಖಿ', "ಬೃಂದಾ ವಿಹಾರಿ' ತಂಡಗಳಷ್ಟೇ ಟ್ರೇಲರ್ ತೋರಿಸದೇ, ಸಿನಿಮಾ ರಿಲೀಸ್ ಮಾಡಿವೆ ಅಂತಲ್ಲ. ಈ ಹಿಂದೆಯೂ ಬೇರೆ ಬೇರೆ ಚಿತ್ರರಂಗಗಳಲ್ಲಿ ಈ ಪ್ರಯೋಗಗಳು ನಡೆದಿವೆ. ಹಾಲಿವುಡ್ನ "ದ ಬಾಯ್ ಆ್ಯಂಡ್ ದ ಹೆರೊನ್', ತೆಲುಗಿನ "ಗೀತ ಗೋವಿಂದಂ', "ಮಹಾನಟಿ', "ಡಿಸ್ಕೋ ರಾಜ' ಸೇರಿ ಕೆಲ ಚಿತ್ರಗಳು ಟ್ರೇಲರ್ ಇಲ್ಲದೇ ಥಿಯೇಟರ್ಗೆ ಎಂಟ್ರಿ ಕೊಟ್ಟು ಸದ್ದು ಮಾಡಿದ್ದವು.