- ಮೂರು ವರ್ಷಗಳ ಹಿಂದೆಯೇ ಬಾಲಿವುಡ್ ಸಿನಿಮಾ ಒಪ್ಪಂದವಾಗಿತ್ತು.
Mansore - "ಹರಿವು', "ನಾತಿಚರಾಮಿ' ಖ್ಯಾತಿಯ ರಾಷ್ಟ್ರಪ್ರಶಸ್ತಿ ವಿಜೇತ ಕನ್ನಡ ನಿರ್ದೇಶಕ ಮಂಸೋರೆ ಬಾಲಿವುಡ್ಗೆ ಪದಾರ್ಪಣೆ ಮಾಡಲು ಸಿದ್ಧತೆ ನಡೆಸಿದ್ದಾರೆ. "ಜೂಲಿಯೆಟ್' ಎಂಬ ಫೀಲ್ ಗುಡ್ ಮ್ಯೂಸಿಕಲ್ ಹಿಂದಿ ಸಿನಿಮಾಗೆ ಆ್ಯಕ್ಷನ್- ಕಟ್ ಹೇಳಲು ಅಣಿಯಾಗಿದ್ದಾರೆ.
ಇತ್ತೀಚೆಗಷ್ಟೆ ಚಿತ್ರದ ಘೋಷಣೆಯಾಗಿದ್ದು, "ನಿರ್ಮಾಪಕ ನೀರಜ್ ತಿವಾರಿ ನಾನು ನಿರ್ದೇಶಿಸಿದ್ದ "ಆ್ಯಕ್ಟ್ 1978' ಚಿತ್ರದ ಹಿಂದಿ ರಿಮೇಕ್ ಹಕ್ಕುಗಳನ್ನು ಖರೀದಿಸಿದ್ದರು. ಆ ಸಿನಿಮಾ ಅವರಿಗೆ ತುಂಬ ಇಷ್ಟವಾಗಿತ್ತು. ಹೀಗಾಗಿ ಅವರು ಪ್ರಾರಂಭಿಸುತ್ತಿರುವ ನಿರ್ಮಾಣ ಸಂಸ್ಥೆಯಲ್ಲಿ ಸಿನಿಮಾ ನಿರ್ದೇಶಿಸಲು ಅವಕಾಶ ನೀಡಿದರು. ಮೂರು ವರ್ಷಗಳ ಹಿಂದೆಯೇ ಒಪ್ಪಂದವಾಗಿತ್ತು. ಆದರೆ, ಅಲ್ಲಿ ತುಂಬ ಹಂತಗಳಲ್ಲಿ ಕಥೆ ಓಕೆ ಆಗಬೇಕು. ಆ ಎಲ್ಲ ಹಂತಗಳನ್ನು ದಾಟಿ ಇದೀಗ "ಜೂಲಿಯೆಟ್' ಘೋಷಣೆಯಾಗಿದೆ. ತಾರಾಗಣ ಮತ್ತು ತಂತ್ರಜ್ಞರ ಆಯ್ಕೆ ನಡೆಯುತ್ತಿದೆ. ಕನ್ನಡದಿಂದ ನನ್ನ ಹಳೆಯ ತಂಡವನ್ನು ಅಲ್ಲಿಯೂ ಮುಂದುವರಿಸಲು ಪ್ರಯತ್ನಿಸುತ್ತಿದ್ದೇನೆ. ಸದ್ಯ ಕ್ರಿಸ್ಮಸ್ ಮತ್ತು ಹೊಸ ವರ್ಷವಿರುವ ಕಾರಣ ಸಂಕ್ರಾಂತಿ ಹಬ್ಬದವರೆಗೆ ಬ್ರೇಕ್ ಇರಲಿದ್ದು, ಅಷ್ಟರಲ್ಲಿ ಎಲ್ಲದರ ಆಯ್ಕೆ ಪ್ರಕ್ರಿಯೆ ಮುಗಿದು ಸಿನಿಮಾ ಟೇಕಾಫ್ ಆಗಲಿದೆ' ಎಂದು ಮಾಹಿತಿ ನೀಡುತ್ತಾರೆ ಮಂಸೋರೆ. ಹಿಂದಿ ಚಿತ್ರವಾದರೂ "ಜೂಲಿಯೆಟ್' ಕನ್ನಡದಲ್ಲೂ ಬಿಡುಗಡೆಯಾಗಲಿದೆ. ಮುಂಬೈ ಮತ್ತು ಹೊರದೇಶಗಳಲ್ಲಿ ಚಿತ್ರೀಕರಣ ನಡೆಸಲು ನಿರ್ದೇಶಕ ಮಂಸೋರೆ ಪ್ಲಾನ್ ಮಾಡಿಕೊಂಡಿದ್ದಾರೆ. 2026ರ ಡಿಸೆಂಬರ್ನಲ್ಲಿ ಚಿತ್ರ ಬಿಡುಗಡೆ ಮಾಡುವ ಆಲೋಚನೆ ಚಿತ್ರತಂಡದ್ದು.
ಹಿಂದಿಯಲ್ಲಿ ಕನ್ನಡಿಗನ ಹ್ಯಾಟ್ರಿಕ್
"ಜೂಲಿಯೆಟ್' ಬಳಿಕ ಮಂಸೋರೆ ನಿರ್ಮಾಪಕ ನೀರಜ್ ತಿವಾರಿ ಬ್ಯಾನರ್ನಲ್ಲಿ ಇನ್ನೂ ಎರಡು ಸಿನಿಮಾ ನಿರ್ದೇಶಿಸಲಿದ್ದಾರಂತೆ. "ನೀರಜ್ ತಿವಾರಿ ನಾಲ್ಕೈದು ದಶಕಗಳ ಕಾಲ ಬಿಹಾರ ಮತ್ತು ಉತ್ತರ ಪ್ರದೇಶದಲ್ಲಿ ಭಾಗದಲ್ಲಿ ವಿತರಕರಾಗಿ ಗುರುತಿಸಿಕೊಂಡಿದ್ದಾರೆ. ಇದೀಗ ನಿರ್ಮಾಣ ಸಂಸ್ಥೆ ಆರಂಭಿಸಿದ್ದು, ನಟಿ ಸಾನ್ಯಾ ಮಲ್ಹೋತ್ರಾ ಜತೆ ಒಂದು ಸಿನಿಮಾ ಮಾಡುತ್ತಿದ್ದಾರೆ. ಅದರ ಬೆನ್ನಲ್ಲೇ "ಜೂಲಿಯೆಟ್' ಘೋಷಣೆಯಾಗಿದೆ. ಹಾಗೇ "ಆ್ಯಕ್ಟ್ 1978' ಚಿತ್ರದ ಹಿಂದಿ ರಿಮೇಕ್ಅನ್ನೂ ನಾನೇ ನಿರ್ದೇಶಿಸಲಿದ್ದೇನೆ. ಅದರ ಜತೆ ಜತೆಗೆ ಮತ್ತೊಂದು ಫ್ಯಾಂಟಸಿ ಥ್ರಿಲ್ಲರ್ ಕಥೆ ಕೂಡ ಓಕೆ ಆಗಿದ್ದು, ಅದನ್ನೂ ನಾನೇ ಮಾಡಲಿದ್ದೇನೆ. ಹೀಗೆ ಅವರು ಘೋಷಿಸಲಿರುವ ಐದು ಚಿತ್ರಗಳಲ್ಲಿ ನಾನೇ ಮೂರು ಚಿತ್ರಗಳನ್ನು ನಿರ್ದೇಶಿಸಲಿದ್ದೇನೆ' ಎನ್ನುತ್ತಾರೆ ಮಂಸೋರೆ.