nivishka, ಆದರ್ಶ, ಸುಶ್ಮಿತಾ
- ಸ್ವಾರ್ಥ ರತ್ನ ಚಿತ್ರದ ಬಳಿಕ ಆದರ್ಶ ಗುಂಡುರಾಜ್ ನಟನೆಯ ಎರಡನೇ ಸಿನಿಮಾ
- ಚಿತ್ರಕಥೆ ಬರೆದು, ನಿಮಾರ್ಣಕ್ಕೆ ಮುಂದಾದ ನಟ
- ಹೊಸ ವರ್ಷದ ಹಿನ್ನೆಲೆಯಲ್ಲಿ ಚಿತ್ರದ ಸಾಂಗ್ ರಿಲೀಸ್ ಮಾಡಿ ಪ್ರಚಾರ
ಬೆಂಗಳೂರು: ಹೊಸ ವರ್ಷಕ್ಕೆ ದಿನಗಣನೆ ಆರಂಭವಾಗಿದ್ದು, ಕೆಲ ದಿನಗಳಲ್ಲೇ ಮನೆಗೆ ಹೊಸ ಕ್ಯಾಲೆಂಡರ್ ಬರಲಿದೆ. ಹೀಗಿರುವಾಗಲೇ, ಹೊಸ ವರ್ಷದ ಶುಭ ಸಂದರ್ಭದಲ್ಲಿ ‘ಕ್ಯಾಲೆಂಡರ್’ ಎಂಬ ಹೊಸ ಸಿನಿಮಾ ಕೂಡ ಬರಲು ಸಿದ್ಧವಾಗಿದೆ. ರಂಗಭೂಮಿಯಲ್ಲಿ ನಿರತರಾಗಿದ್ದ ನವೀನ್ ಶಕ್ತಿ ನಿರ್ದೇಶನದ ಮೊದಲ ಚಿತ್ರ ಇದಾಗಿದ್ದು, ‘ಸ್ವಾರ್ಥರತ್ನ’ ಆದರ್ಶ್ ಗುಂಡುರಾಜ್ ಕಥೆ ಬರೆದು, ನಿರ್ಮಾಣ ಜತೆಗೆ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಅವರಿಗೆ ಸುಶ್ಮಿತಾ ಹಾಗೂ ನಿವಿಷ್ಕಾ ಪಾಟೀಲ್ ಜೋಡಿಯಾಗಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಸದ್ಯ ಪೋಸ್ಟ್-ಪ್ರೊಡಕ್ಷನ್ ಹಂತದಲ್ಲಿದೆ. ಅದರ ನಡುವೆಯೇ ಚಿತ್ರತಂಡ ಪ್ರಚಾರಕ್ಕೆ ಧುಮುಕಿದ್ದು, ‘ನಾನ್ಯಾರು’ ಶೀರ್ಷಿಕೆಯ ಮೊದಲ ಹಾಡು ಬಿಡುಗಡೆ ಮಾಡಲಾಗಿದೆ.
ಸಂಜಯ್ ವೈ.ಬಿ.ಎಚ್. ಮತ್ತು ನವೀನ್ ಶಕ್ತಿ ಈ ಹಾಡು ಬರೆದಿದ್ದು, ಅನುಷ್ಕಾ ಕಾಗಿನೆರೆ, ಹೃತಿಕಾ ಪೂಜಾರಿ, ಸಂಜಯ್ ಧ್ವನಿಯಾಗಿದ್ದಾರೆ. ಸುನಾದ್ ಗೌತಮ್ ಸಂಗೀತ ನೀಡಿದ್ದಾರೆ. ಆದರ್ಶ ಗುಂಡುರಾಜ್, ‘ಇದು ನಾನು ನಾಯಕನಾಗಿ ನಟಿಸುತ್ತಿರುವ ಮೂರನೇ ಸಿನಿಮಾ. ವರ್ಷಗಳು ಕಳೆಯುತ್ತಿರುತ್ತವೆ. ಆದರೆ, ದಿನವನ್ನು ಗುರುತಿಸಲು ನಮಗೆ ಕ್ಯಾಲೆಂಡರ್ ಬೇಕು. ಶೀರ್ಷಿಕೆಗೂ, ಚಿತ್ರಕ್ಕೂ ಸಂಬಂಧವಿದೆ. ಹೆಣ್ಣು ಮಕ್ಕಳಿಗಂತೂ ಈ ಕಥೆ ಬಹಳ ಹತ್ತಿರವಾಗುತ್ತದೆ’ ಎಂದು ಮಾಹಿತಿ ನೀಡಿದರು. ವಿಶೇಷ ಪಾತ್ರದಲ್ಲಿ ನಟಿ ಮಾಲಾಶ್ರೀ ಕಾಣಿಸಿಕೊಂಡಿದ್ದಾರೆ. ರಮೇಶ್ ಇಂದಿರಾ, ಪ್ರಮೋದ್ ಶೆಟ್ಟಿ, ಪ್ರಕಾಶ್ ತುಮ್ಮಿನಾಡು, ಸುಚೇಂದ್ರ ಪ್ರಸಾದ್ ತಾರಾಬಳಗದಲ್ಲಿದ್ದಾರೆ.