"ನಮ್ಮ ಹುಡುಗರು', "ರಾನಿ', "ದೇಸಾಯಿ' ಚಿತ್ರಗಳಲ್ಲಿ ನಟಿಸಿರುವ ಕನ್ನಡದ ಹುಡುಗಿ ರಾಧ್ಯ ಇದೀಗ ತೆಲುಗಿಗೆ ಪದಾರ್ಪಣೆ ಮಾಡಿದ್ದಾರೆ. ಹೆಸರು "ದ ರೆಡ್ ಬ್ಯಾಗ್'. ಇದೊಂದು ಮಹಿಳಾ ಪ್ರಧಾನ ಆ್ಯಕ್ಷನ್ ಥ್ರಿಲ್ಲರ್ "ಪಿಂಕಿ' ಖ್ಯಾತಿಯ ರವಿ ಕುಮಾರ್ ಸೀರಪು ನಿರ್ದೇಶಿಸಿದ್ದಾರೆ. ಸಿನಿಮಾ ಇದೇ 21ರಂದು ತೆರೆಗೆ ಬರಲಿದ್ದು, "ಸಂಭಾಷಣೆಕಾರ ಮಾಸ್ತಿ ಸರ್ ತೆಲುಗು ತಂಡಕ್ಕೆ ನನ್ನನ್ನು ಪರಿಚಯಿಸಿದರು. ಮಹಿಳಾ ಪ್ರಧಾನ ಚಿತ್ರ, ರಾ ಪಾತ್ರವಾದ ಕಾರಣ ನನಗೂ ಚಾಲೆಂಜಿಂಗ್ ಅಂತನ್ನಿಸಿ ಒಪ್ಪಿಕೊಂಡೆ. ಹೆಣ್ಣುಮಕ್ಕಳು ಯಾವ ಕ್ಷೇತ್ರದಲ್ಲಿ, ಯಾವುದೇ ಕೆಲಸಕ್ಕೆ ಹೋಗಲಿ, ಜಡ್ಜ್ ಮಾಡುತ್ತಾರೆ. ಆದರೆ, ಎಲ್ಲರದೂ ಒಂದೊಂದು ಕಥೆಯಿರುತ್ತದೆ ಅಂತ ಯೋಚಿಸುವುದಿಲ್ಲ. ಈಗಿನ ಸಂದರ್ಭದಲ್ಲಿ ಕೆಲ ಹೆಣ್ಣುಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳ ಸುತ್ತ ಸಾಗುವ ಕಥೆಯಿದು. ನನಗೆ ಪಾರ್ಮೆನ್ಸ್ಗೆ ತುಂಬ ಪ್ರಾಮುಖ್ಯವಿದೆ' ಎಂದು ಮಾಹಿತಿ ನೀಡುತ್ತಾರೆ ರಾಧ್ಯ.
ಆ್ಯಕ್ಟಿಂಗ್ ಜತೆ ಆ್ಯಕ್ಷನ್ ಅಬ್ಬರ
ರಾಧ್ಯ ಈ ಚಿತ್ರದಲ್ಲಿ ಫೈಟ್ ಕೂಡ ಮಾಡಿದ್ದಾರಂತೆ. "ಚಿತ್ರದಲ್ಲಿ ಮೂರು ಫೈಟ್ಗಳಿವೆ. "ಪುಷ್ಪ' ಸರಣಿ ಸೇರಿ ಹಲವು ಸಿನಿಮಾಗಳ ಸಾಹಸ ನಿರ್ದೇಶಕ ಡ್ರ್ಯಾಗನ್ ಪ್ರಕಾಶ್ ಬಳಿ ಕೆಲ ದಿನಗಳ ಕಾಲ ಸ್ಟಂಟ್ ತರಬೇತಿ ಪಡೆದೆ. ಬೈಕ್ ಓಡಿಸುವುದನ್ನು ಕಲಿತೆ. ಕರ್ನೂಲ್ ಮತ್ತು ರಾಮೋಜಿ ಫಿಲಂ ಸಿಟಿಯ ಬಿಸಿಲಿನಲ್ಲಿ ಫೈಟ್ಸ್ ಶೂಟ್ ಮಾಡುವುದು ತುಂಬ ಕಷ್ಟವಿತ್ತು. ಹಾಗೇ ಮಳೆಯಲ್ಲಿ ಉಲ್ಟಾ ನೇತಾಡಬೇಕಿತ್ತು. ಹಾಗೆ ನಟಿಸುವುದು ಸ್ವಲ್ಪ ಸವಾಲಾಗಿತ್ತು. ಈ ಚಿತ್ರಕ್ಕೆ ಆಯ್ಕೆಯಾದ ಬಳಿಕ ತೆಲುಗು ಕಲಿತಿದ್ದೇನೆ. ಆದರೆ, ಸದ್ಯಕ್ಕೆ ಡಬ್ ಮಾಡಿಲ್ಲವಷ್ಟೇ. ಮುಂದಿನ ದಿನಗಳಲ್ಲಿ ನಾನೇ ಡಬ್ ಮಾಡಬೇಕು ಅಂತ ಅಂದುಕೊಂಡಿದ್ದೇನೆ' ಎಂದು ಹೇಳಿಕೊಳ್ಳುತ್ತಾರೆ ರಾಧ್ಯ.
ಖುಷಿ ಮತ್ತು ಬೇಸರ
ತೆಲುಗು ಜತೆಗೆ ಕನ್ನಡದಲ್ಲೂ ನಟಿಸುತ್ತಿರುವ ರಾಧ್ಯ, ಸದ್ಯ ಇನ್ನೂ ಹೆಸರಿಡದ "ಕಾಂಗರೂ' ಖ್ಯಾತಿಯ ಕಿಶೋರ್ ನಿರ್ದೇಶಿಸುತ್ತಿರುವ, ರೂಪೇಶ್ ಶೆಟ್ಟಿ ನಾಯಕನಾಗಿರುವ ಚಿತ್ರದಲ್ಲಿ ನಟಿಸುತ್ತಿದ್ದಾರಂತೆ. "ಇನ್ನೊಂದು ಸಿನಿಮಾ ಇದೇ ತಿಂಗಳು ಘೋಷಣೆಯಾಗಲಿದೆ. ತೆಲುಗಿನಲ್ಲೂ ಮತ್ತೊಂದು ಸಿನಿಮಾ ಒಪ್ಪಿದ್ದೇನೆ, ಅದರ ಅನೌನ್ಸ್ಮೆಂಟ್ ಕೂಡ ಆಗಬೇಕಿದೆ. ಹಾಗೇ ಮಲಯಾಳಂನಲ್ಲೂ ಒಂದು ಚಿತ್ರದ ಮಾತುಕತೆ ನಡೆಯುತ್ತಿದೆ. ವೆಬ್ಸರಣಿಗಳಲ್ಲೂ ಅವಕಾಶ ಬಂದಿದೆ. ಆದರೆ, ನಾನು ಸದ್ಯ ಸಿನಿಮಾ ಮೇಲಷ್ಟೇ ಗಮನ ಹರಿಸಿದ್ದೇನೆ. ಕನ್ನಡಕ್ಕಿಂತ ತೆಲುಗಿನಲ್ಲಿ ಹೆಚ್ಚು ಆಫರ್ಸ್ ಬರುತ್ತಿವೆ. ಅಲ್ಲಿ ನನ್ನನ್ನು ಒಪ್ಪಿಕೊಂಡು ಸಪೋರ್ಟ್ ಮಾಡುತ್ತಿರುವ ಖುಷಿಯೇನೋ ಇದೆ. ಆದರೆ, ನಮ್ಮವರು ಯಾಕೆ ಗುರುತಿಸುತ್ತಿಲ್ಲ ಅನ್ನೋ ಬೇಸರವೂ ಇದೆ' ಎನ್ನುತ್ತಾರೆ.