ಪ್ರಮುಖ ಮುಖ್ಯಾಂಶಗಳು
ಚಿತ್ರ: ಜಾಲಿ
ತಾಯಿ ಕಳೆದುಕೊಂಡು ತಂದೆಯ ಪ್ರೀತಿ ಸಿಗದೆ ಮನೆ ತೊರೆದ ಜಾಲಿ (ತಾರುಷ್) ಗ್ಯಾರೇಜ್ ಒಂದರಲ್ಲಿ ಕೆಲಸಕ್ಕೆ ಸೇರುತ್ತಾನೆ. ಅದೇ ಸಮಯದಲ್ಲಿ ಸ್ನೇಹಿತರ ಮೂಲಕ ಜಾನು (ಪದ್ಮಶ್ರೀ) ಪರಿಚಯವಾಗಿ ಇಬ್ಬರ ನಡುವೆ ಪ್ರೀತಿ ಚಿಗುರೊಡೆಯುತ್ತದೆ. ಆದರೆ, ಈ ಪ್ರೀತಿಗೆ ಜಾನು ತಂದೆ ಡಾನ್ (ಕೃಷ್ಣಪ್ಪ) ವಿರೋಧಿಸುತ್ತಾನೆ. ಆಗ ಅವಳು ಮನೆಬಿಟ್ಟು ಜಾಲಿ ಮಡಿಲು ಸೇರುತ್ತಾಳೆ. ಇಬ್ಬರು ಅನ್ಯೋನ್ಯವಾಗಿ ಬದುಕುವಾಗಲೇ ಜಾನುಗೆ ಗಂಭೀರ ಕಾಯಿಲೆ ಇರುವುದು ಗೊತ್ತಾಗುತ್ತದೆ. ಈ ವಿಷಯ ತಿಳಿದ ನಾಯಕ ಕುಸಿದು ಬೀಳುತ್ತಾನೆ. ಹಾಗಾದರೆ, ಮುಂದೆ ಜಾನು ಪ್ರೀತಿಯಲ್ಲಿ ಜಾಲಿ ಮುಂದುವರಿಯುತ್ತಾನಾ? ಕಾಯಿಲೆಗೊಳಗಾಗಿರುವ ಜಾನು ಗತಿಯೇನು? ಅಷ್ಟಕ್ಕೂ ಜಾನುಗೆ ಇರುವ ಗಂಭೀರ ಕಾಯಿಲೆ ಯಾವುದು? ಅದು ನಿಜನಾ? ತಿಳಿಯಲು ‘ಜಾಲಿ’ ಸಿನಿಮಾ ನೋಡಬೇಕಷ್ಟೇ.
ಟೈಟಲ್‌ಗೆ ತಕ್ಕಂತೆ ಕಥೆಯು ‘ಜಾಲಿ’ಯಾಗಿದೆ. ಕಾಮಿಡಿ, ಆ್ಯಕ್ಷನ್ ಅರ್ಭಟವೇ ಹೆಚ್ಚು. ಈ ಎರಡರ ಮಧ್ಯೆ ಕಥೆ ಎತ್ತ ಸಾಗುತ್ತದೆ ಎಂಬುದೇ ತಿಳಿಯುವುದಿಲ್ಲ. ಈ ಬಗ್ಗೆ ತಾರುಷ್ ಗಮನ ಹರಿಸಬೇಕಿತ್ತು. ಆ್ಯಕ್ಷನ್‌ಗೆ ತಕ್ಕಂತೆ ಹಿನ್ನೆಲೆ ಸಂಗೀತದ ಆರ್ಭಟ ಜೋರಾಗಿದೆ. ತಾರುಷ್ ಆ್ಯಕ್ಷನ್ ಹೀರೋ ಆಗಿ ಮಿಂಚಿದ್ದಾರೆ. ಕೆಲ ಸಾಹಸ ದೃಶ್ಯ ಮತ್ತು ನೋಟದಲ್ಲಿ ಚೆನ್ನಾಗಿ ಕಾಣಿಸುತ್ತಾರೆ. ಪದ್ಮಶ್ರೀ ಜಾನು ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಶೋಭರಾಜ್ ಕೆಲ ದೃಶ್ಯಗಳಿಗೆ ಸೀಮಿತವಾಗಿದ್ದಾರೆ. ಅವರಿಗೆ ಇನ್ನೊಂದಿಷ್ಟು ಜಾಗ ಕೊಟ್ಟಿದ್ದರೆ, ಚೆನ್ನಾಗಿರುತ್ತಿತ್ತು. ಅಭಿ ಮತ್ತು ಗೆಳೆಯರ ಕಾಮಿಡಿ ಪಂಚ್ ಪ್ರೇಕ್ಷಕರನ್ನು ನಗಿಸುತ್ತದೆ. ಹೊಸಬರ ಹೊಸ ಪ್ರಯತ್ನಕ್ಕೆ ಬೆನ್ನು ತಟ್ಟಲು ಇಚ್ಛಿಸುವವರು ‘ಜಾಲಿ’ಯಾಗಿ ಸಿನಿಮಾ ನೋಡಬಹುದು.