- ಜನವರಿಗೆ 2ಕ್ಕೆ ವಿಶ್ವಮಟ್ಟದಲ್ಲಿ ‘ಕೊರಗಜ್ಜ’ ರಿಲೀಸ್
- ಚಿತ್ರದ ಆಡಿಯೋ ಹಕ್ಕುಗಳನ್ನು ಜೀ ಮ್ಯೂಸಿಕ್ ಖರೀದಿ
- ಚಿತ್ರತಂಡಕ್ಕೆ ಕೊರಗಜ್ಜನ ಅಭಯ, ಆಶೀರ್ವಾದ
ಕರಾವಳಿ ಭಾಗದ ಕಾರ್ಣಿಕ ಪುರುಷ ಕೊರಗಜ್ಜನ ಕುರಿತ ‘ಕರಿಹೈದ..? ಕೊರಗಜ್ಜ’ ಕನ್ನಡದಲ್ಲಿ ಬಿಡುಗಡೆಗೆ ಸಿದ್ಧವಾಗಿರುವುದು ಗೊತ್ತೇ ಇದೆ. ಗೀತೆ ರಚನೆಕಾರ ಸುಧೀರ್ ಅತ್ತಾವರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಪ್ಯಾನ್ ಇಂಡಿಯಾ ಚಿತ್ರದಲ್ಲಿ ಬಾಲಿವುಡ್ ನಟರಾದ ಕಬೀರ್ ಬೇಡಿ, ಸಂದೀಪ್ ಸೋಪರ್ಕರ್, ನಟಿಯರಾದ ಭವ್ಯ, ಶ್ರುತಿ, ಶುಭ ಪೂಂಜಾ ಸೇರಿ ಹಲವರು ತಾರಾಗಣದಲ್ಲಿದ್ದಾರೆ. ಕಳೆದ ತಿಂಗಳು 3ಡಿ ಪೋಸ್ಟರ್ ರಿಲೀಸ್ ಮಾಡಿದ್ದ ತಂಡ, ಇತ್ತೀಚೆಗೆ ಮಂಗಳೂರಿನಲ್ಲಿ ಅದ್ದೂರಿ ಧ್ವನಿ ಸುರುಳಿ ಬಿಡುಗಡೆ ಕಾರ್ಯಕ್ರಮ ಆಯೋಜಿಸಿತ್ತು. ಇದೇ ಸಂದರ್ಭದಲ್ಲಿ ಚಿತ್ರದ ಆಡಿಯೋ ಹಕ್ಕುಗಳನ್ನು ಜೀ ಮ್ಯೂಸಿಕ್ ಖರೀದಿಸಿದೆ ಎಂದು ತಂಡ ಘೋಷಿಸಿತು. ಸುಧೀರ್ ಅತ್ತಾವರ್, ‘ಈ ಚಿತ್ರದ ಮೂರು ವರ್ಷದ ಜರ್ನಿಯಲ್ಲಿ ಸಾಕಷ್ಟು ಅಡೆತಡೆಗಳನ್ನು ಎದುರಿಸಿದ್ದೇವೆ. ನಮ್ಮ ತಂಡದ ಮೇಲೆ ಎರಡು ಬಾರಿ ದಾಳಿ ಕೂಡ ನಡೆದಿದ್ದು, ಇದರಿಂದ ಪ್ರತಿ ಬಾರಿ 60-70 ಲಕ್ಷ ರೂಪಾಯಿ ನಷ್ಟವಾಗಿದೆ. ಆದರೂ, ದಾಳಿ ಬಗ್ಗೆ ಈವರೆಗೆ ಕಾರಣ ಗೊತ್ತಿಲ್ಲ. ತುಳುನಾಡಿನ ದೈವ-ದೇವರ ಪರಂಪರೆಗಳ ಮೇಲೆ ಆಸಕ್ತಿಯಿಂದಾಗಿ ಈ ಕಥೆ ಆರಂಭಿಸಿದೆ. ಒಂದೂವರೆ ವರ್ಷ ಹಲವರನ್ನು ಸಂದರ್ಶಿಸಿ, ಹಲವು ಮೂಲಗಳಿಂದ ಮಾಹಿತಿ ಪಡೆದು, ಸಮಗ್ರ ಅಧ್ಯಯನ ಮಾಡಿ ‘ಕೊರಗಜ್ಜ’ ಕಥೆ ಮಾಡಿಕೊಂಡೆ. ಪ್ರತಿ ಪಾತ್ರಕ್ಕೂ ಕಲಾವಿದರ ಆಯ್ಕೆ ಮಾಡಲು ಸಾಕಷ್ಟು ಕಸರತ್ತು ನಡೆಸಿದ್ದೇವೆ. ತನಿಯ ಪಾತ್ರಕ್ಕಾಗಿಯೇ ಸುಮಾರು 150 ಜನರನ್ನು ಸಂದರ್ಶಿಸಿದ್ದೇವೆ’ ಎಂದು ಮಾಹಿತಿ ನೀಡಿದರು. ತ್ರಿವಿಕ್ರಮ್ ಸಪಲ್ಯ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಗೋಪಿ ಸುಂದರ್ ಸಂಗೀತ ಚಿತ್ರಕ್ಕಿದೆ. ಇದೇ ಜನವರಿಗೆ 2ಕ್ಕೆ ವಿಶ್ವಮಟ್ಟದಲ್ಲಿ ‘ಕೊರಗಜ್ಜ’ ರಿಲೀಸ್ ಆಗಲಿದೆ.
ಅರ್ಧಕ್ಕೆ ನಿಂತಿದ್ದಕ್ಕೆ ತಪ್ಪು ಕಾಣಿಕೆ
ಕನ್ನಡದಲ್ಲಿ ಈ ಮೊದಲು ‘ಕೊರಗಜ್ಜ’ ಮಹಿಮೆ ಕುರಿತು ಸಿನಿಮಾ ಮಾಡಲು ನಟ ಜೈ ಜಗದೀಶ್ ಮುಂದಾಗಿದ್ದರು. ಆದರೆ, ಅನಿವಾರ್ಯ ಕಾರಣಗಳಿಂದ ಹಿಂದೆ ಸರಿದರು. ಆದರೆ, ಈಗ ಮೂಡಿಬರುತ್ತಿರುವ ಚಿತ್ರಕ್ಕೆ ಸಾಥ್ ನೀಡಿದ್ದಾರೆ. ಈ ಬಗ್ಗೆ ಜೈ ಜಗದೀಶ್ ‘ಕನ್ನಡದಲ್ಲಿ ‘ಕೊರಗಜ್ಜ’ ಕುರಿತು ಸಿನಿಮಾ ಮಾಡಲು ಹೊರಟೆವು. ಆದರೆ, ಯಾಕೋ ಕೈಗೂಡಲಿಲ್ಲ. ಕೆಲವರು ಮಾಡಿ ಎಂದರು, ಕೆಲವರು ಬೇಡ ಎಂದರು. ನನಗೂ ಧೈರ್ಯ ಬರಲಿಲ್ಲ. ಹಾಗಾಗಿ, ಚಿತ್ರವನ್ನು ಅರ್ಧಕ್ಕೆ ನಿಲ್ಲಿಸಿದೆವು’ ಎಂದರು. ಇದಕ್ಕೆ ಧ್ವನಿಗೂಡಿಸಿದ ಪತ್ನಿ ವಿಜಯಲಕ್ಷ್ಮೀ, ‘ಅದಕ್ಕಾಗಿ ದೇವರಲ್ಲಿ ತಪ್ಪು ಕಾಣಿಕೆ ಸಲ್ಲಿಸಿದ್ದೇವೆ. ಈಗ ಮೂಡಿಬರುತ್ತಿರುವ ಚಿತ್ರಕ್ಕೆ ಟೈಟಲ್ ಕೊಟ್ಟು, ಬೆಂಬಲಕ್ಕೆ ನಿಂತಿದ್ದೇವೆ’ ಎಂದರು.
ಬೈರಕ್ಕಿ ಪಾತ್ರದಲ್ಲಿ ನಟಿಸಿರುವ ನಟಿ ಶ್ರುತಿ, ‘‘ಕೊರಗಜ್ಜ’ ವಿಶೇಷ ಅನುಭವ ನೀಡಿದ ಚಿತ್ರ. ತಾಯಿ ಸರಸ್ವತಿ ಆಶೀರ್ವಾದದಿಂದ ಬೈರಕ್ಕಿ ಪಾತ್ರ ಮಾಡಲು ಸಾಧ್ಯವಾಯಿತು. ನಮ್ಮ ನೆಲದ ಕಥೆಗಳನ್ನು ವಿಶ್ವಮಟ್ಟದಲ್ಲಿ ತೋರಿಸುವುದು ಸಂತೋಷದ ಸಂಗತಿ. ಪ್ಯಾನ್ ಇಂಡಿಯಾ ಮೂಡಿಬಂದರೂ, ನಮ್ಮ ಸೊಗಡು ತಿಳಿಯಲು ಕನ್ನಡದಲ್ಲಿಯೇ ಚಿತ್ರ ನೋಡಿ’ ಎಂದು ಸಲಹೆ ನೀಡಿದರು.
‘ಕರಿಹೈದ.. ಕೊರಗಜ್ಜ’ ಚಿತ್ರತಂಡದಿಂದ ಮಂಗಳೂರಿನ ಮಾರ್ನಮಿಕಟ್ಟೆ ಬಳಿಯ ಕೊರಗಜ್ಜ ದೇವಸ್ಥಾನದಲ್ಲಿ ದೈವದ ಕೋಲ ನಡೆಸಲಾಯಿತು. ಸ್ವಾಮಿ ಕೊರಗಜ್ಜ ಚಿತ್ರತಂಡಕ್ಕೆ ಅಭಯ ನೀಡಿ, ಆಶೀರ್ವದಿಸಿದರು. ನಟಿಯರಾದ ಭವ್ಯ, ಶ್ರುತಿ, ನಿರ್ದೇಶಕ ಸುಧೀರ್ ಅತ್ತಾವರ, ಸಂದೀಪ್ ಸೋಪರ್ಕರ್, ನಿರ್ಮಾಪಕ ತ್ರಿವಿಕ್ರಮ್ ಸಪಲ್ಯ, ಕ್ರಿಯೇಟಿವ್ ಹೆಡ್ ವಿದ್ಯಾಧರ ಶೆಟ್ಟಿ ಸೇರಿ ಚಿತ್ರತಂಡದ ಹಲವರು ಕೊರಗಜ್ಜನ ಆಶೀರ್ವಾದ ಪಡೆದರು.