ಟಾಕ್ಸಿಕ್ ಸಿನಿಮಾ ಪರ ನಿಂತ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ
- ನಿಮ್ಮ ಧೈರ್ಯಶಾಲಿ ಪ್ರಯತ್ನಕ್ಕೆ ನನ್ನ ಬೆಂಬಲವಿದೆ
- ಟಾಕ್ಸಿಕ್ ಸಿನಿಮಾ ಪರ ನಿಂತ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ
- ಕನ್ನಡ ಸಿನಿಮಾವನ್ನು ಜಾಗತೀಕರಣ ಮಾಡುವ ನಿಮ್ಮ ಪ್ರಯತ್ನಕ್ಕೆ ಮೆಚ್ಚುಗೆ
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಹಾಗೂ ಗೀತು ಮೋಹನ್ ದಾಸ್ ನಿರ್ದೇಶನದ ಸಿನಿಮಾ ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನಪ್ಸ್ ತೆರೆಕಂಡಿದ್ದು, ಮೊದಲ ದಿನವೇ 140 ಕೋಟಿ ಗಳಿಸಿ ಉತ್ತಮ ಪ್ರದರ್ಶನ ಕಾಣುತ್ತಿದೆ.
ಆದರೆ, ಈ ಸಿನಿಮಾ ಬಿಡುಗಡೆಯಾದ ದಿನ ಕೆಲ ಋಣಾತ್ಮಕ ವಿಮರ್ಶೆಗಳು ಕೇಳಿ ಬಂದಿದ್ದು, ಸಿನಿಮಾವನ್ನು ಬೇಕಂತಲೇ ಸೋಲಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದು ಯಶ್ ಅಭಿಮಾನಿಗಳು ಆರೋಪಿಸಿದ್ದರು.
ಟಾಕ್ಸಿಕ್ಗೆ ನೆಗೆಟಿವ್ ರಿವ್ಯೂ ಬರುತ್ತಿರುವ ಹಿನ್ನಲೆ ಕನ್ನಡ ಚಿತ್ರರಂಗದ ಕೆಲ ನಾಯಕ ನಟರು ಯಶ್ ಬೆಂಬಲಕ್ಕೆ ಬಂದಿದ್ದು, ಈದೀಗ ಕಿಚ್ಚಾ ಸುದೀಪ್ ಬಳಿಕ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ (Rishab Shetty on Toxic) ಯಶ್ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕನ್ನಡ ಸಿನಿಮಾ ಜಾಗತೀಕರಣ ಮಾಡಿದವರು ನೀವು
ಟಾಕ್ಸಿಕ್ ಹಾಗೂ ಯಶ್ ಅಭಿನಯವನ್ನು ಮೆಚ್ಚಿರುವ ರಿಷಬ್ ಶೆಟ್ಟಿ, ಒಬ್ಬ ಕಲಾವಿದನಾಗಿ, ನೀವು ಒಂದು ಪಾತ್ರವನ್ನು ನಿರ್ವಹಿಸುವಾಗ, ಅದನ್ನು ನಿಮ್ಮ ಹೃದಯಾಳದಿಂದ ಜೀವಂತಗೊಳಿಸಲು ಪ್ರಯತ್ನಿಸುತ್ತೀರಿ ಎಂದು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಸ್ಟೋರಿ ಹಾಕಿಕೊಂಡಿದ್ದಾರೆ.
ಈ ಸಿನಿಮಾದ ಕಥಾವಸ್ತು ಮತ್ತು ಪಾತ್ರಗಳ ಚಲನೆ ಸಾಮಾನ್ಯ ಟ್ರ್ಯಾಕ್ನಲ್ಲಿರದೆ ಇರಬಹುದು. ಆದರೆ ಟ್ರ್ಯಾಕ್ ತಪ್ಪಾಗಿದೆ ಎಂದು ಹೇಳಲು ಸಾಧ್ಯವಿಲ್ಲ. ಈ ಕಥೆಯನ್ನು ಹೇಳಲು ತೆಗೆದುಕೊಂಡಿರುವ ಪ್ರಯತ್ನ ಮತ್ತು ಪಯಣವನ್ನು ಮೆಚ್ಚುತ್ತೇನೆ ಎಂದಿದ್ದಾರೆ.
ಈ ಸಿನಿಮಾದಲ್ಲಿರುವ ನಿಮ್ಮ ಪಾತ್ರ ಅದ್ಭುತವಾಗಿರಬೇಕೆಂದು ನೀವು ನಿಮ್ಮನ್ನು ಅರ್ಪಿಸಿಕೊಂಡಿರುವ ರೀತಿಗೆ ಹ್ಯಾಟ್ಸಾಪ್ ಎಂದಿರುವ ಡಿವೈನ್ ಸ್ಟಾರ್, ನಿಮ್ಮ ಸಮರ್ಪಣಾ ಭಾವ ಪ್ರತಿ ದೃಶ್ಯದಲ್ಲಿ ಕಾಣಿಸಿಕೊಂಡಿದೆ ಎಂದಿದ್ದಾರೆ.
ನಿಮ್ಮ ಈ ಧೈರ್ಯಶಾಲಿ ಪ್ರಯೋಗಕ್ಕೆ ನಾನು ನಿಮ್ಮೊಂದಿಗೆ ನಿಲ್ಲುತ್ತೇನೆ. ಕನ್ನಡ ಸಿನಿಮಾವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ನೀವು ಹೊಂದಿರುವ ಪ್ರೀತಿಗಾಗಿ ನಾವು ನಿಮ್ಮನ್ನು ಪ್ರೀತಿಸುತ್ತೇವೆ ಎಂದು ರಿಷಬ್ ಶೆಟ್ಟಿ ಬರೆದುಕೊಂಡಿದ್ದಾರೆ, (ಏಜನ್ಸೀಸ್).