ಹನುಮಾನ್​ ಅಂಶ್ ಪೋಸ್ಟರ 
ಸ್ಯಾಂಡಲ್‌ವುಡ್

ಮನಗೆದ್ದ ‘ಹನುಮಾನ್ ಅಂಶ್’: 88 ಕೋಟಿ ರೂ. ಗಳಿಕೆ ಮಾಡಿ, 100 ಕೋಟಿ ರೂ. ಕ್ಲಬ್‌ದತ್ತ ದಾಪುಗಾಲಿಟ್ಟ ಹಿಂದಿ ಸಿನಿಮಾ

ಪ್ರಮುಖ ಮುಖ್ಯಾಂಶಗಳು

  • ಬಿಗ್ ಬಜೆಟ್ ಸಿನಿಮಾಗಳ ಮಧ್ಯೆಯೂ ಹಿಂದಿಯ ಹನುಮಾನ್ ಅಂಶ್ ಚಿತ್ರ ಕಮಾಲ್​
  • ರಿಲೀಸ್ ಆದ 29 ದಿನಕ್ಕೆ ಒಟ್ಟು 88 ಕೋಟಿ ರೂ. ಅಧಿಕ ಗಳಿಕೆ
  • ವೀರೇಂದ್ರ ಸೆಹ್ವಾಗ್, ಕಂಗನಾ ರಣಾವತ್ ಸೇರಿ ಹಲವರಿಂದ ಚಿತ್ರಕ್ಕೆ ಮೆಚ್ಚುಗೆ
ಹೈ ಬಜೆಟ್, ಬಹುತಾರಾಗಣ ಚಿತ್ರಗಳ ಮಧ್ಯೆಯೂ ಕೆಲವೊಮ್ಮೆ ಸಣ್ಣ ಬಜೆಟ್ ಚಿತ್ರಗಳು ಬಾಕ್ಸಾಫೀಸ್‌ನಲ್ಲಿ ಕಮಾಲ್ ಮಾಡುತ್ತವೆ ಎಂಬ ಮಾತಿಗೆ ಸದ್ಯ ಹಿಂದಿಯ ‘ಹನುಮಾನ್ ಅಂಶ್’ ದೊಡ್ಡ ಉದಾಹರಣೆಯಾಗಿ ನಿಂತಿದೆ. ನೀಮ್ ಕರೋಲಿ ಬಾಬಾ ವಿಚಾರಗಳಿಂದ ಸ್ಫೂರ್ತಿ ಪಡೆದಿರುವ, ಡಾ. ವಿಶಾಲ್ ಚತುರ್ವೇದಿ ನಿರ್ದೇಶನದ ಈ ಚಿತ್ರವು ಆಗಸ್ಟ್ 7ರಂದು ರಿಲೀಸ್ ಆಗಿತ್ತು. ಬಿಡುಗಡೆಯಾದ ಮೊದಲ ಎರಡು ವಾರ ಚಿತ್ರಕ್ಕೆ ಅಷ್ಟೇನೂ ಪ್ರತಿಕ್ರಿಯೆ ವ್ಯಕ್ತವಾಗಿರಲಿಲ್ಲ. ಎರಡು ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಈ ಚಿತ್ರ ಮೊದಲ ಎರಡು ವಾರಗಳಲ್ಲಿ ಕೇವಲ 1.20 ಕೋಟಿ ರೂ. ಗಳಿಕೆ ಮಾಡಿತ್ತಷ್ಟೇ. ಇನ್ನೇನು ಥಿಯೇಟರ್‌ನಿಂದ ಚಿತ್ರವನ್ನು ತೆಗೆದುಹಾಕುತ್ತಾರೆ ಎನ್ನುವ ಸಂದರ್ಭದಲ್ಲಿಯೇ ಪವಾಡ ಸೃಷ್ಟಿಯಾಗಿದೆ. ಸಿನಿಮಾ ನೋಡಿದವರು ಕಂಟೆಂಟ್ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ್ದು, ಜಾಲತಾಣದಲ್ಲಿ ವೈರಲ್ ಆಗಿದೆ. ಬಾಯಿಂದ ಬಾಯಿಗೆ ಪ್ರಚಾರ ಹಬ್ಬಿ, ಸಿನಿಮಾ ಥಿಯೇಟರ್‌ನಲ್ಲಿ ಮತ್ತೆ ಎದ್ದು ನಿಂತು ಬಹುತೇಕ ಕಡೆಗಳಲ್ಲಿ ಹೌಸ್‌ಫುಲ್ ಪ್ರದರ್ಶನ ಕಂಡಿದೆ. ಇದೀಗ ‘ಹನುಮಾನ್ ಅಂಶ್’ ಶನಿವಾರ (ಸೆ.5) 29ನೇ ದಿನಕ್ಕೆ ಕಾಲಿಟ್ಟಿದೆ. ಇದುವರೆಗೆ 88 ಕೋಟಿ ರೂ. ಗಳಿಕೆ ಮಾಡಿದ್ದು, 100 ಕೋಟಿ ರೂ. ಕ್ಲಬ್‌ನತ್ತ ದಾಪುಗಾಲಿಡುತ್ತಿದೆ. ‘ಹನುಮಾನ್ ಅಂಶ್’ ಇದೀಗ ಸಾಗರೋತ್ತರ ದೇಶಗಳಲ್ಲಿ ರಿಲೀಸ್‌ಗೆ ಮುಂದಾಗಿದ್ದು, ಕನ್ನಡದ ಹೊಂಬಾಳೆ ಸಂಸ್ಥೆ ವಿದೇಶಗಳಲ್ಲಿ ವಿತರಣೆ ಹಕ್ಕುಗಳನ್ನು ತನ್ನದಾಗಿಸಿಕೊಂಡಿದೆ. ಇದೇ 11ರಂದು ವಿದೇಶಗಳಲ್ಲಿ ಚಿತ್ರ ರಿಲೀಸ್ ಆಗಲಿದೆ.

ಸೀಕ್ವೆಲ್ ಘೋಷಣೆ

‘ಹನುಮಾನ್ ಅಂಶ್’ ಚಿತ್ರಕ್ಕೆ ಸಿಕ್ಕ ದೊಡ್ಡ ಯಶಸ್ಸಿನ ಬೆನ್ನಲ್ಲೇ ನಿರ್ದೇಶಕ ವಿಶಾಲ್ ಚರ್ತುವೇದಿ ಸೀಕ್ವೆಲ್ ಘೋಷಿಸಿದ್ದಾರೆ. ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್, ನಟಿ, ಸಂಸದೆ ಕಂಗನಾ ರಣಾವತ್ ಸೇರಿ ಹಲವು ತಾರೆಯರು ಚಿತ್ರವನ್ನು ನೋಡಿ ಕೊಂಡಾಡಿದ್ದಾರೆ. ಹಾಗೆಯೇ ಮುಸ್ಲಿಂ ವ್ಯಕ್ತಿಯೊಬ್ಬರು ಚಪ್ಪಲಿ ಬಿಟ್ಟು ‘ಹನುಮಾನ್ ಅಂಶ್’ ಚಿತ್ರವನ್ನು ವೀಕ್ಷಿಸುತ್ತಿರುವ ವಿಡಿಯೋ ವೈರಲ್ ಆಗಿದೆ.