- ಹನುಮಾನ್ ಅಂಶ್ ಬಳಿಕ ಹೊಸ ಸಿನಿಮಾ ಘೋಷಿಸಿದ ನಿರ್ದೇಶಕ ವಿಶಾಲ್
- ತುಳಸೀದಾಸರ ಜೀವನ ಚರಿತ್ರೆ ಮೇಲೆ ತರಲು ಮುಂದಾದ ನಿರ್ದೇಶಕ
- ಮಹಾವೀರ್ ಜೈನ್ ಚಿತ್ರಕ್ಕೆ ಬಂಡವಾಳ ಹೂಡಿಕೆ
ನಿರ್ದೇಶಕ ಡಾ. ವಿಶಾಲ್ ಚತುರ್ವೇದಿ ನಿರ್ದೇಶಣದ ಭಕ್ತಿಪ್ರಧಾನ ‘ಹನುಮಾನ್ ಅಂಶ್’ ದೊಡ್ಡಮಟ್ಟದಲ್ಲಿ ಸದ್ದು ಮಾಡುತ್ತಿದೆ. ನೀಮ್ ಕರೋಲಿ ಬಾಬಾ ಜೀವನ ಹಾಗೂ ವಿಚಾರಗಳ ಮೇಲೆ ಬೆಳಕು ಚೆಲ್ಲುವ ಕೇವಲ 2 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾದ ಈ ಸಿನಿಮಾ, ಈಗಾಗಲೇ 300 ಕೋಟಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ಬಾಕ್ಸಾಫೀಸ್‌ನಲ್ಲಿ ಮೈಲಿಗಲ್ಲು ಸಾಧಿಸಿದೆ. ‘ಹನುಮಾನ್ ಅಂಶ್’ ಚಿತ್ರದಲ್ಲೇ ಅದರ ಮುಂದುವರಿದ ಭಾಗದ ಬಗ್ಗೆ ಸುಳಿವು ನೀಡಲಾಗಿದ್ದು, ಅದು ಈಗಲೇ ಸೆಟ್ಟೇರಲಿದೆ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ, ಅದಕ್ಕೂ ಮುನ್ನವೇ ವಿಶಾಲ್ ಹೊಸ ಸಿನಿಮಾ ಘೋಷಿಸಿ, ಅಚ್ಚರಿ ಮೂಡಿಸಿದ್ದಾರೆ. ಈ ಬಾರಿಯೂ ಅವರು ಧಾರ್ಮಿಕ ಸಿನಿಮಾಕ್ಕೆ ಮುಂದಾಗಿದ್ದಾರೆ. ಹೆಸರು ‘ರಾಮ್ ಬೋಲಾ’. ‘ಹನುಮಾನ್ ಅಂಶ್’ನಲ್ಲಿ ನೀಮ್ ಕರೋಲಿ ಬಾಬಾ ಕುರಿತು ಹೇಳಿದ್ದ ವಿಶಾಲ್ ಚತುರ್ವೇದಿ, ಇದೀಗ ‘ರಾಮ್ ಬೋಲಾ’ ಮೂಲಕ 16ನೇ ಶತಮಾನದ ಮಹಾಕವಿ ತುಳಸಿದಾಸರ ಜೀವನ-ವಿಚಾರದ ಮೇಲೆ ಬೆಳಕು ಚೆಲ್ಲಲಿದ್ದಾರೆ. ಆ ಮೂಲಕ ಅವರು ಮತ್ತೊಮ್ಮೆ ಸಂತ ಪರಂಪರೆಗೆ ಮರಳಿದ್ದಾರೆ. ಈ ಚಿತ್ರಕ್ಕೆ ಆರ್ಟ್ ಆ್ ಲಿವಿಂಗ್‌ನ ಶ್ರೀ ಶ್ರೀ ರವಿಶಂಕರ್ ಗುರೂಜಿ ಬಯೋಪಿಕ್ ನಿರ್ಮಿಸುತ್ತಿರುವ ಮಹಾವೀರ್ ಜೈನ್ ಬಂಡವಾಳ ಹೂಡುತ್ತಿದ್ದಾರೆ. ಸದ್ಯದಲ್ಲೇ ತಾರಾ ಹಾಗೂ ತಾಂತ್ರಿಕ ಬಳಗವನ್ನು ಚಿತ್ರತಂಡ ಘೋಷಿಸಲಿದೆ. -ಏಜೆನ್ಸೀಸ್
ಒಂದೇ ಟೈಟಲ್, ಎರಡು ಸಿನಿಮಾ!
ಡಾ.ವಿಶಾಲ್ ಚತುರ್ವೇದಿ ‘ರಾಮ್ ಬೋಲಾ’ ಸಿನಿಮಾ ಘೋಷಿಸಿದ ಬೆನ್ನಲ್ಲೇ ಕಾಕತಾಳೀಯ ಎಂಬಂತೆ ಇನ್ನೊಂದು ಚಿತ್ರತಂಡ ಕೂಡ ಅದೇ ಟೈಟಲ್‌ನಲ್ಲಿ ಹೊಸ ಸಿನಿಮಾ ಅನೌನ್ಸ್ ಮಾಡಿದೆ. ಆ ಮೂಲಕ ಗಣೇಶ ಚೌತಿಯಂದು ಪ್ರತ್ಯೇಕ ಎರಡು ಸಿನಿಮಾಗಳು ಒಂದೇ ಟೈಟಲ್‌ನಲ್ಲಿ ಘೋಷಣೆಯಾಗಿವೆ. ಒಂದನ್ನು ವಿಶಾಲ್ ಚತುರ್ವೇದಿ ನಿರ್ದೇಶಿಸುತ್ತಿದ್ದರೆ, ಮತ್ತೊಂದನ್ನು ‘ಚಾಣಕ್ಯ’ ಧಾರಾವಾಹಿ, ‘ಸಾಮ್ರಾಟ್ ಪೃಥ್ವಿರಾಜ್’ ಚಿತ್ರದ ಖ್ಯಾತಿಯ ಡಾ. ಚಂದ್ರಪ್ರಕಾಶ್ ದ್ವಿವೇದಿ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ.