"ನಿನಗಾಗಿ', "ಗಿಣಿರಾಮ' ಧಾರಾವಾಹಿಗಳ ಖ್ಯಾತಿಯ ನಟ ರಿತ್ವಿಕ್ ಮಠದ್ ನಟಿಸಿದ್ದ "ಮಾರ್ನಮಿ' ಕಳೆದ ಫೆಬ್ರವರಿಯಲ್ಲಿ ರಿಲೀಸ್ ಆಗಿತ್ತು. ರಿಷಿತ್ ಶೆಟ್ಟಿ ನಿರ್ದೇಶಿಸಿದ್ದ ಈ ಫ್ಯಾಮಿಲಿ ಥ್ರಿಲ್ಲರ್ ಡ್ರಾಮಾಗೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ಜತೆಗೆ ರಿತ್ವಿಕ್ ನಟನೆಗೂ ಬೆನ್ನು ತಟ್ಟಿದ್ದರು. "ಮಾರ್ನಮಿ' ಬಳಿಕ ರಿತ್ವಿಕ್ ಸಿನಿಮಾಗಳತ್ತ ಹೆಚ್ಚು ಗಮನ ಹರಿಸಿದ್ದಾರಂತೆ. ""ಮಾರ್ನಮಿ'ಗೆ ತುಂಬ ಒಳ್ಳೆ ಪ್ರತಿಕ್ರಿಯೆ ದೊರೆಯಿತು. ಹಲವರು ನಿಮಗೆ ಆ್ಯಕ್ಷನ್ ಪಾತ್ರಗಳು ಚೆನ್ನಾಗಿ ಹೊಂದುತ್ತವೆ ಎಂದರು. ಆ ಚಿತ್ರದ ಬಳಿಕ 11 ಕಥೆಗಳನ್ನು ಕೇಳಿದ್ದೇನೆ. ಹಲವು ಧಾರಾವಾಹಿಗಳಿಗೂ ಅವಕಾಶಗಳು ಬಂದವು. ಸಿನಿಮಾ ಜತೆ ಧಾರಾವಾಹಿ ಕಮಿಟ್ ಆದರೆ, ಕುಟುಂಬಕ್ಕೆ ಹೆಚ್ಚು ಸಮಯ ನೀಡಲಾಗುವುದಿಲ್ಲ. ಸೀರಿಯಲ್ ಶೂಟಿಂಗ್ಗೆ ಬೆಳಗ್ಗೆ 7ಗಂಟೆಗೆ ಹೋದರೆ ರಾತ್ರಿ 10ರ ನಂತರ ಮನೆಗೆ ಬರುತ್ತಿದ್ದೆ. ಈಗಿನ್ನೂ ಮಗಳು ಲಿಪಿಗೆ ಒಂದು ವರ್ಷವಷ್ಟೇ. ಈ ಸಮಯದಲ್ಲಿ ಆಕೆಗೆ, ಕುಟುಂಬಕ್ಕೆ ಹೆಚ್ಚು ಸಮಯ ನೀಡಬೇಕು ಅಂತನ್ನಿಸಿತು. ಹೀಗಾಗಿ ಸಿನಿಮಾಗೆ ಹೆಚ್ಚು ಸಮಯ ನೀಡಬೇಕು ಅಂತ ಕಿರುತೆರೆಯಿಂದ ಬ್ರೇಕ್ ತೆಗೆದುಕೊಂಡಿದ್ದೇನೆ. ನನ್ನ ನಟನೆಯನ್ನು ಮೆಚ್ಚಿ ಹೆಸರಾಂತ ನಿರ್ದೇಶಕರೊಬ್ಬರು ಸಂಪರ್ಕಿಸಿದರು. ಅವರು ಹೇಳಿದ ಎರಡು ಕಥೆಗಳೂ ಇಷ್ಟವಾಗಿವೆ. ಸದ್ಯ ಅವರು ಒಂದು ಸಿನಿಮಾದಲ್ಲಿ ಬಿಜಿಯಿರುವ ಕಾರಣ, ನಮ್ಮ ಸಿನಿಮಾ ಅಕ್ಟೋಬರ್ನಲ್ಲಿ ಘೋಷಣೆಯಾಗಲಿದೆ' ಎಂದು ಮಾಹಿತಿ ನೀಡುತ್ತಾರೆ.
ಸಿಕ್ಸ್ ಪ್ಯಾಕ್ ಕಸರತ್ತು
"ಮಾರ್ನಮಿ' ಚಿತ್ರಕ್ಕಾಗಿ ತೂಕ ಹೆಚ್ಚಿಸಿಕೊಂಡಿದ್ದ ರಿತ್ವಿಕ್ ಇದೀಗ ಹೊಸ ಚಿತ್ರಕ್ಕಾಗಿ ಮೊದಲ ಬಾರಿಗೆ ಸಿಕ್ಸ್ ಪ್ಯಾಕ್ ಲುಕ್ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. "ನಾನು ಮೊದಲಿನಿಂದಲೂ ಫಿಟ್ ಆಗಿದ್ದೆ. ಆದರೆ, ಸಿಕ್ಸ್ ಪ್ಯಾಕ್ ಟೆ ಮಾಡಿರಲಿಲ್ಲ. ಇದೊಂದು ಆ್ಯಕ್ಷನ್, ್ಯಾಂಟಸಿ, ಕಾಮಿಡಿ ಜತೆಗೆ ಸಸ್ಪೆನ್ಸ್ ಅಂಶಗಳಿರುವ ಕಮರ್ಷಿಯಲ್ ಸಿನಿಮಾ. ನಾನು ಹಿಟ್ಮ್ಯಾನ್ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕಿದೆ. ಅದಕ್ಕಾಗಿ ರಾ ಲುಕ್ ಬೇಕಿದೆ. ಹೀಗಾಗಿ ಸಿಕ್ಸ್ ಪ್ಯಾಕ್ ಜತೆಗೆ ಉದ್ದ ಗಡ್ಡ ಬಿಡುತ್ತಿದ್ದೇನೆ. ಇದೆರಡೂ ನನಗೆ ಹೊಸ ಅನುಭವವೇ. ಜತೆಗೆ ಕಳರಿಪಾಯಟ್ಟು ಸಮರಕಲೆ ಕಲಿಯಬೇಕಿದೆ. ಶೂಟಿಂಗ್ ಸಮಯದಲ್ಲಿ ತರಬೇತಿ ಪಡೆಯಲಿದ್ದೇನೆ' ಎಂದು ಹೇಳಿಕೊಳ್ಳುತ್ತಾರೆ ರಿತ್ವಿಕ್.