ಸೂಪರ್​ಹಿಟ್​ 
ಸ್ಯಾಂಡಲ್‌ವುಡ್

Superhit ; ಹೀರೋ ಆದರು ಗಿಲ್ಲಿ ನಟ, ಗೌರವ್​ ಶೆಟ್ಟಿ

ಪ್ರಮುಖ ಮುಖ್ಯಾಂಶಗಳು

  • ಸಿನಿಮಾ ಪೂರ್ಣಗೊಳ್ಳುವವರೆಗೂ ಘೋಷಣೆ ಮಾಡಬಾರದು ಅಂತ ಮೊದಲೇ ಅಂದುಕೊಂಡಿದ್ದರಂತೆ ವಿಜಯಾನಂದ್​
  • ಗಿಲ್ಲಿನಟ ಮತ್ತು ಗೌರವ್​ ಶೆಟ್ಟಿ "ಸೂಪರ್​ಹಿಟ್​' ಮೂಲಕ ನಾಯಕರಾಗಿ ಪದಾರ್ಪಣೆ ಮಾಡುತ್ತಿದ್ದಾರೆ.
  • ಇದೊಂದು ಜರ್ನಿ ಹಿನ್ನೆಲೆಯಲ್ಲಿ ನಡೆಯುವ ಕಥೆ.
  • ಸಾಧು ಕೋಕಿಲ, ಪ್ರಮೋದ್​ ಶೆಟ್ಟಿ, ಡ್ರ್ಯಾಗನ್​ ಮಂಜು, ಟೆನ್ನಿಸ್​ ಕೃಷ್ಣ, ಗಿರಿ, ಕರಿಸುಬ್ಬು ತಾರಾಗಣದಲ್ಲಿದ್ದಾರೆ.
Superhit - ಸಾಮಾನ್ಯವಾಗಿ ಬಿಡುಗಡೆಯಾದ ಸಿನಿಮಾಗಳು ಹೌಸ್​ಫುಲ್​ ಪ್ರದರ್ಶನ ಕಾಣುತ್ತಿದ್ದರೆ "ಸೂಪರ್​ಹಿಟ್​, ರನ್ನಿಂಗ್​ ಸಕ್ಸಸ್​ಫುಲಿ' ಎಂದು ಹೇಳುವುದುಂಟು. ಆದರೆ, ಕಾಶೀನಾಥ್​ ನಟಿಸಿದ್ದ ಡ್ರಾಮಾ "ಓಳ್​ ಮುನ್ಸಾಮಿ' ಮತ್ತು ಅಜೇಯ್​ ರಾವ್​ ನಾಯಕನಾಗಿದ್ದ ಹಾರರ್​ ಥ್ರಿಲ್ಲರ್​ "ಕೃಷ್ಣ ಟಾಕೀಸ್​' ಚಿತ್ರಗಳನ್ನು ನಿರ್ದೇಶಿಸಿದ್ದ ವಿಜಯಾನಂದ್​ "ಸೂಪರ್​ಹಿಟ್​' ಎಂಬ ಶೀರ್ಷಿಕೆಯಲ್ಲೇ ಸಿನಿಮಾ ಮಾಡಿ ಮುಗಿಸಿದ್ದಾರೆ. ವಿಶೇಷ ಅಂದರೆ ಅದಕ್ಕೆ "ರನ್ನಿಂಗ್​ ಸಕ್ಸಸ್​ಫುಲಿ' ಎಂಬ ಅಡಿಬರಹ ಇಟ್ಟಿದ್ದಾರೆ! ಇತ್ತೀಚೆಗಷ್ಟೆ ಚಿತ್ರದ ಟೀಸರ್​ ಬಿಡುಗಡೆ ಮಾಡಲಾಗಿದೆ.
"ಸೂಪರ್​ಹಿಟ್​' ಬಗ್ಗೆ ವಿಜಯಾನಂದ್​, "ಕನ್ನಡದಲ್ಲಿ ಕಾಮಿಡಿ ಥ್ರಿಲ್ಲರ್​ ಚಿತ್ರಗಳು ಬಂದಿರುವುದು ಕಡಿಮೆ. ಹೀಗಾಗಿ ಈ ಜಾನರ್​ನಲ್ಲೇ ಸಿನಿಮಾ ಮಾಡಬೇಕು ಅಂತ ಯೋಚಿಸಿ, ಕಥೆ ಪ್ರಾರಂಭಿಸಿದೆ. ಭಗವದ್ಗೀತೆಯಲ್ಲಿ ಭಗವಂತನ ಅಪ್ಪಣೆ ಇಲ್ಲದೇ ಒಂದು ಹುಲ್ಲುಕಡ್ಡಿಯೂ ಅಲುಗಾಡುವುದಿಲ್ಲ ಎಂಬ ಮಾತಿದೆ. ಅದೇ ಸಾಲಿನಲ್ಲಿ ಸಾಗುವ ಕಥೆಯಿದು. ಸ್ಟೋರಿ ನನಗೆ ವ್ಹಾಹ್​ ಅನ್ನಿಸಿದ ಬಳಿಕವಷ್ಟೇ ಸಿನಿಮಾ ಮಾಡಲು ನಿರ್ಧರಿಸಿದೆ. ಸಿನಿಮಾ ಪೂರ್ಣಗೊಳ್ಳುವವರೆಗೂ ಘೋಷಣೆ ಮಾಡಬಾರದು ಅಂತ ಮೊದಲೇ ಅಂದುಕೊಂಡಿದ್ದೆ. ಅದರಂತೆ ಶೂಟಿಂಗ್​ ಮುಗಿಸಿ, ಇದೀಗ ಟೀಸರ್​ ಬಿಡುಗಡೆಯ ಮೂಲಕ ಅನೌನ್ಸ್​ ಮಾಡುತ್ತಿದ್ದೇವೆ. ಟೀಸರ್​ಗಿಂತ ಸಾವಿರ ಪಟ್ಟು ಮನರಂಜನೆ ಚಿತ್ರದಲ್ಲಿದೆ' ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.
ಸದ್ಯ ಬಿಗ್​ಬಾಸ್​ ಮನೆಯಲ್ಲಿ ಅಬ್ಬರಿಸುತ್ತಿರುವ ಗಿಲ್ಲಿನಟ ಮತ್ತು ಯೂಟ್ಯೂಬ್​ನಲ್ಲಿ ತಮ್ಮದೇ ಛಾಪು ಮೂಡಿಸಿರುವ ಗೌರವ್​ ಶೆಟ್ಟಿ "ಸೂಪರ್​ಹಿಟ್​' ಚಿತ್ರದ ಮೂಲಕ ನಾಯಕರಾಗಿ ಪದಾರ್ಪಣೆ ಮಾಡುತ್ತಿದ್ದಾರೆ. ಅವರಿಗೆ ಶ್ವೇತಾ ನಾಯಕಿಯಾಗಿದ್ದು ಸಾಧು ಕೋಕಿಲ, ಪ್ರಮೋದ್​ ಶೆಟ್ಟಿ, ಡ್ರ್ಯಾಗನ್​ ಮಂಜು, ಟೆನ್ನಿಸ್​ ಕೃಷ್ಣ, ಗಿರಿ, ಕರಿಸುಬ್ಬು ಪ್ರಮುಖ ತಾರಾಗಣದಲ್ಲಿದ್ದಾರೆ. ಜತೆಗೆ ನಿರ್ದೇಶಕ ವಿಜಯಾನಂದ್​ ಮತ್ತು ಅವರ ಅಣ್ಣ ಡಾ. ವಿ. ನಾಗೇಂದ್ರ ಪ್ರಸಾದ್​ ಕೂಡ ವಿಶೇಷ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಾಗೇ ಚಿತ್ರದ ಸಾಹಿತ್ಯ ಮತ್ತು ಸಂಗೀತದ ಜವಾಬ್ದಾರಿಯನ್ನೂ ನಾಗೇಂದ್ರ ಪ್ರಸಾದ್​ ನಿರ್ವಹಿಸಿದ್ದಾರೆ.
ಕೋಟ್​:
ಚಿತ್ರದಲ್ಲಿ ಪ್ರತಿ 10 ನಿಮಿಷದಲ್ಲಿ ಒಂದು ವ್ಹಾವ್​ ಅನ್ನಿಸುವ ಥ್ರಿಲ್ಲಿಂಗ್​ ಅಂಶಗಳಿವೆ. ಇದೊಂದು ಜರ್ನಿ ಹಿನ್ನೆಲೆಯಲ್ಲಿ ನಡೆಯುವ ಕಥೆ. ಹೀಗಾಗಿಯೇ ಹುಬ್ಬಳ್ಳಿ, ಧಾರವಾಡ, ಚನ್ನರಾಯಪಟ್ಟಣ, ಮರವಂತೆ, ಹಾಸನ ಸೇರಿ ಹಲವು ಸ್ಥಳಗಳಲ್ಲಿ ಶೂಟಿಂಗ್​ ಮಾಡಿದ್ದೇವೆ. ಸದ್ಯ ಚಿತ್ರದ ಪೋಸ್ಟ್​-ಪ್ರೊಡಕ್ಷನ್​ ಕೆಲಸಗಳು ಭರದಿಂದ ಸಾಗಿವೆ. ಕೆಲವೇ ದಿನಗಳಲ್ಲಿ ಸಿನಿಮಾ ಬಿಡುಗಡೆ ದಿನಾಂಕ ಘೋಷಿಸಲಿದ್ದೇವೆ. -ವಿಜಯಾನಂದ್​, ನಿರ್ದೇಶಕ