ಇತಿಹಾಸ ಬರೆದ ಟಾಕ್ಸಿಕ್​ ಸೃಷ್ಟಿಕರ್ತೆ ಗೀತು ಮೋಹನ್‌ದಾಸ್: ಈ ಸಾಧನೆ ಮಾಡಿದ ಮೊದಲ ಭಾರತೀಯ ನಿರ್ದೇಶಕಿ! Geetu Mohandas  
ಸ್ಯಾಂಡಲ್‌ವುಡ್

ಇತಿಹಾಸ ಬರೆದ ಟಾಕ್ಸಿಕ್​ ಸೃಷ್ಟಿಕರ್ತೆ ಗೀತು ಮೋಹನ್‌ದಾಸ್: ಈ ಸಾಧನೆ ಮಾಡಿದ ಮೊದಲ ಭಾರತೀಯ ನಿರ್ದೇಶಕಿ! Geetu Mohandas

ಪ್ರಮುಖ ಮುಖ್ಯಾಂಶಗಳು

  • ಯಶ್ ಅಭಿನಯದ ಟಾಕ್ಸಿಕ್ ಸಿನಿಮಾದ ಮೂಲಕ ಇತಿಹಾಸ ಬರೆಯುತ್ತಿರುವ ನಿರ್ದೇಶಕಿ ಗೀತು ಮೋಹನ್‌ದಾಸ್
  • ಬಾಲನಟಿಯಾಗಿ ವೃತ್ತಿಜೀವನ ಆರಂಭಿಸಿ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದ ಪ್ರತಿಭಾವಂತೆ
  • ಕಲಾತ್ಮಕ ಚಿತ್ರಗಳ ಮೂಲಕ ಗುರುತಿಸಿಕೊಂಡು ಈಗ ಅತಿ ದೊಡ್ಡ ಬಜೆಟ್ ಚಿತ್ರದ ಸಾರಥ್ಯ
  • ಪತಿ ರಾಜೀವ್ ರವಿ ಜೊತೆಗೂಡಿ ಮೂರು ಸಿನಿಮಾಗಳನ್ನು ನಿರ್ದೇಶಿಸಿ ರಾಷ್ಟ್ರೀಯ ಪ್ರಶಸ್ತಿ ಪಡೆದ ಸಾಧನೆ
  • ಭಾರತೀಯ ಚಿತ್ರರಂಗದ ಸ್ಟಾರ್ ನಿರ್ದೇಶಕರ ಸಾಲಿನಲ್ಲಿ ಸ್ಥಾನ ಪಡೆಯಲು ಸಜ್ಜಾದ ಗೀತು ಮೋಹನ್ ದಾಸ್
Geetu Mohandas : ಭಾರತೀಯ ಚಿತ್ರರಂಗದಲ್ಲಿ ಬಿಗ್​ ಬಜೆಟ್​ ಸಿನಿಮಾಗಳನ್ನು ನಿರ್ದೇಶಿಸುವ ಸೀಮಿತ ನಿರ್ದೇಶಕರ ಸಾಲಿನಲ್ಲಿ ಪ್ರಶಾಂತ್ ನೀಲ್, ರಾಜಮೌಳಿ, ಮಣಿರತ್ನಂ ಮತ್ತು ಶಂಕರ್ ಅವರಂತಹ ದಿಗ್ಗಜರೊಂದಿಗೆ ಒಬ್ಬ ಮಹಿಳೆಯನ್ನು ಊಹಿಸುವುದು ಈವರೆಗೆ ಅಸಾಧ್ಯವಾಗಿತ್ತು. ಸಾಕಷ್ಟು ಮಹಿಳಾ ನಿರ್ದೇಶಕಿಯರು ಸಿದ್ಧಪಡಿಸಿದ ಚಿತ್ರಗಳೆಲ್ಲವೂ ಸಣ್ಣ ಬಜೆಟ್​ಗೆ ಸೀಮಿತವಾಗಿದ್ದವು. ಆದರೆ, ಗೀತು ಮೋಹನ್‌ದಾಸ್ ಆ ಚರಿತ್ರೆಯನ್ನು ಇದೀ ಬದಲಾಯಿಸಿದ್ದಾರೆ.
ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದ 'ಕೆಜಿಎಫ್' ಚಿತ್ರದ ನಂತರ ಪ್ಯಾನ್​ ಇಂಡಿಯಾ ಸ್ಟಾರ್​ ಆಗಿ ಬೆಳೆದಿರುವ ಯಶ್ ಅವರ ಮುಂದಿನ ಚಿತ್ರವನ್ನು ಯಾರು ನಿರ್ದೇಶಿಸಲಿದ್ದಾರೆ ಎಂಬ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆ ನಡೆದಿತ್ತು. ಪ್ರಶಾಂತ್ ನೀಲ್ ಅವರ ಹೆಸರೂ ಕೇಳಿಬಂದಿತ್ತು. ಆದರೆ, ಎಲ್ಲರ ನಿರೀಕ್ಷೆಯನ್ನು ತಲೆಕೆಳಗಾಗಿಸಿ ಗ್ಯಾಂಗ್‌ಸ್ಟರ್ ಹಿನ್ನೆಲೆಯ 'ಟಾಕ್ಸಿಕ್' ಸಿನಿಮಾವನ್ನು ಯಶ್ ಘೋಷಿಸಿದರು. ಈ ಮೂಲಕ, ನಿರ್ದೇಶನದ ಜವಾಬ್ದಾರಿಯನ್ನು ಯಶಸ್ವಿಯಾಗಿ ವಹಿಸಿಕೊಂಡಿರುವ ಪ್ರತಿಭಾವಂತೆ ಗೀತು ಮೋಹನ್‌ದಾಸ್ ಈಗ ಭಾರತೀಯ ಸಿನಿಮಾದ ದಿಕ್ಕನ್ನೇ ಬದಲಾಯಿಸುತ್ತಿದ್ದಾರೆ.
ಟಾಕ್ಸಿಕ್​ 600 ಕೋಟಿ ರೂಪಾಯಿಗಳ ಬೃಹತ್ ಬಂಡವಾಳದಲ್ಲಿ ತಯಾರಾಗಿರುವ ಬಿಗ್​ ಬಜೆಟ್​ ಚಲನಚಿತ್ರವಾಗಿದೆ. ನಿಖರವಾದ ಬಜೆಟ್ ಬಗ್ಗೆ ನಿರ್ಮಾಪಕರು ಅಧಿಕೃತವಾಗಿ ಬಹಿರಂಗಪಡಿಸದಿದ್ದರೂ, ಇದು 500 ರಿಂದ 1000 ಕೋಟಿ ರೂ.ಗಳ ನಡುವೆ ಇದೆ ಎಂದು ಅಂದಾಜಿಸಲಾಗಿದೆ. ಗೀತು ಮೋಹನ್‌ದಾಸ್ ಅವರಿಗೆ ಇಂತಹ ಬೃಹತ್ ಚಿತ್ರವನ್ನು ನಿರ್ದೇಶಿಸಿದ ಯಾವುದೇ ಹಿನ್ನೆಲೆಯಿಲ್ಲದಿದ್ದರೂ, ಈ ಸಾಹಸವು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.
ಚಿಣ್ಣರ ಕಲಾ ಲೋಕದಿಂದ ಸಿನೆಮಾ ಪಯಣ ಆರಂಭಿಸಿದ ಗೀತು, ಕೇವಲ ಐದನೇ ವಯಸ್ಸಿನಲ್ಲಿ 'ಒನ್ನುಮುತು ಪೂಜ್ಯಂ ವರೆ' ಚಿತ್ರದ ಮೂಲಕ ಬಾಲನಟಿಯಾಗಿ ಕ್ಯಾಮೆರಾ ಮುಂದೆ ಹೆಜ್ಜೆ ಇಟ್ಟರು. ತಮ್ಮ ನಿಜವಾದ ಹೆಸರಾದ ಗಾಯತ್ರಿ ದಾಸ್ ಎಂಬುದನ್ನು ತೆರೆಯ ಮೇಲೆ 'ಗೀತು' ಎಂದು ಬದಲಾಯಿಸಿಕೊಂಡ ಅವರಿಗೆ, ಅಂದು ಇದು ವಿಶ್ವ ಸಿನಿಮಾ ಭೂಪಟದವರೆಗೂ ಬೆಳೆಯುವ ಸುದೀರ್ಘ ಪಯಣವಾಗುತ್ತದೆ ಎಂಬ ಕಲ್ಪನೆ ಇರಲಿಲ್ಲ. ಎನ್ ಮಮಟ್ಟಿಕುಟ್ಟಿಅಮ್ಮಾಯ್ಕ್ ನಂತಹ ಮಲಯಾಳಂ ಹಿಟ್ ಚಿತ್ರಗಳ ರಿಮೇಕ್ ಅವಕಾಶಗಳು ಬಂದರೂ, ನಾಯಕಿಯಾಗಿ ಅವರಿಗೆ ದೊಡ್ಡ ಯಶಸ್ಸು ಸಿಗಲಿಲ್ಲ.
ನಾಯಕಿಯಾಗಿ ಹಲವು ಚಿತ್ರಗಳಲ್ಲಿ ನಟಿಸಿದರೂ, ಬ್ಲಾಕ್‌ಬಸ್ಟರ್ ಸಿನಿಮಾಗಳ ಭಾಗವಾಗದ ಕಾರಣ ಗೀತು ಅವರ ಹೆಸರು ಪ್ರಮುಖ ನಾಯಕಿಯರ ಪಟ್ಟಿಯಲ್ಲಿ ಮುಂಚೂಣಿಗೆ ಬರಲಿಲ್ಲ. ಆದರೂ ನಟನೆಯಲ್ಲಿ ತಮ್ಮ ಶ್ರೇಷ್ಠತೆಯನ್ನು ಮೆರೆದ ಅವರು 2004ರಲ್ಲಿ ಪ್ರದೀಪ್ ನಾಯರ್ ನಿರ್ದೇಶನದ 'ಒರಿದಂ' ಚಿತ್ರದಲ್ಲಿ ವೇಶ್ಯೆಯ ಪಾತ್ರದಲ್ಲಿ ಅದ್ಭುತವಾಗಿ ಅಭಿನಯಿಸಿ ಅತ್ಯುತ್ತಮ ನಟಿಗಾಗಿ ರಾಜ್ಯ ಪ್ರಶಸ್ತಿಯನ್ನು ಪಡೆದುಕೊಂಡರು. ಆದರೆ ಪ್ರಶಸ್ತಿ ಬಂದರೂ ಅವರಿಗೆ ನಿರೀಕ್ಷಿತ ಮಟ್ಟದ ದೊಡ್ಡ ವಾಣಿಜ್ಯ ಪಾತ್ರಗಳು ದೊರೆಯಲಿಲ್ಲ.
ನಟನೆಯಿಂದ ಸೃಷ್ಟಿಕರ್ತನ ಲೋಕಕ್ಕೆ ಹೆಜ್ಜೆ ಇಟ್ಟ ಗೀತು, ತಮಗಿದ್ದ ಸೃಜನಶೀಲತೆ ಮತ್ತು ವಿಶ್ವದ ಅತ್ಯುತ್ತಮ ಸಿನಿಮಾಗಳ ಅಧ್ಯಯನದ ಬಲದಿಂದ ನಿರ್ದೇಶನದ ಕಡೆಗೆ ಮುಖ ಮಾಡಿದರು. 'ಡು ಯು ಹಿಯರ್?' ಎಂಬ ಕಿರುಚಿತ್ರದ ಮೂಲಕ ನಿರ್ದೇಶಕಿಯಾಗಿ ಮೊದಲ ಹೆಜ್ಜೆ ಇಟ್ಟು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದರು. ಅವರ ಈ ಧೈರ್ಯ ಮತ್ತು ಸ್ಪಷ್ಟ ನಿಲುವುಗಳೇ ಅವರ ಮುಂದಿನ ದೊಡ್ಡ ಯಶಸ್ಸಿಗೆ ಅಡಿಪಾಯವಾಯಿತು.
ಅವರ ಹಿಂದಿನ ಸಿನಿಮಾಗಳಾದ 'ಲಯರ್ಸ್ ಡೈಸ್' ಆಸ್ಕರ್ ನಾಮನಿರ್ದೇಶನ ಹಾಗೂ ಎರಡು ರಾಷ್ಟ್ರೀಯ ಪ್ರಶಸ್ತಿಗಳನ್ನು ಗಳಿಸಿದರೆ, ನಿವಿನ್ ಪಾಲಿ ನಟನೆಯ ಮಲಯಾಳಂ ಸಿನಿಮಾ 'ಮೂತೋನ್' ಸುಂದರ್‌ಲಾಂಡ್ ಚಲನಚಿತ್ರೋತ್ಸವ ಸೇರಿದಂತೆ ಹಲವು ಜಾಗತಿಕ ವೇದಿಕೆಗಳಲ್ಲಿ ಪ್ರಶಸ್ತಿ ಬಾಚಿಕೊಂಡಿತು. ಆದಾಗ್ಯೂ, ಇವೆಲ್ಲವೂ ಸಣ್ಣ ಕ್ಯಾನ್ವಾಸ್‌ನ ಕಲಾತ್ಮಕ ಚಿತ್ರಗಳಾಗಿದ್ದವು, ಆದರೆ 'ಟಾಕ್ಸಿಕ್' ಸಂಪೂರ್ಣ ಭಿನ್ನವಾದ ದೊಡ್ಡ ಬಜೆಟ್‌ನ ವಾಣಿಜ್ಯ ಸಿನಿಮಾವಾಗಿದೆ.
'ಕೆಜಿಎಫ್' ಚಿತ್ರದ ಮೂಲಕ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಬೆಳೆದಿರುವ ನಟ ಯಶ್ ಅವರ ಮುಂದಿನ ಚಿತ್ರವನ್ನು ಯಾರು ನಿರ್ದೇಶಿಸಲಿದ್ದಾರೆ ಎಂಬ ಕುತೂಹಲವಿದ್ದಾಗ, ಗೀತು ಮೋಹನ್‌ದಾಸ್ ಅವರೊಂದಿಗೆ ಯಶ್ ಕೈಜೋಡಿಸಿದ್ದು ಎಲ್ಲರಿಗೂ ಅಚ್ಚರಿಯಾಗಿತ್ತು. ಯಶ್ ಒಪ್ಪಿಗೆಯೊಂದಿಗೆ ಸ್ಕ್ರಿಪ್ಟ್ ಬರೆಯುವಲ್ಲಿಯೂ ಪಾಲ್ಗೊಂಡ ಗೀತು, ಹಾಲಿವುಡ್ ತಂತ್ರಜ್ಞರನ್ನು ಒಟ್ಟುಗೂಡಿಸಿ ಚಿತ್ರವನ್ನು ಅದ್ಧೂರಿಯಾಗಿ ರೂಪಿಸಿದ್ದಾರೆ. ಆಫ್‌ಬೀಟ್ ಚಿತ್ರಗಳನ್ನು ಮಾಡುತ್ತಿದ್ದ ನಿರ್ದೇಶಕಿಯಿಂದ ಈ ಮಟ್ಟದ ಕಮರ್ಷಿಯಲ್ ಮ್ಯಾಜಿಕ್ ನಿರೀಕ್ಷಿಸಿರಲಿಲ್ಲ.
ವೈಯಕ್ತಿಕ ಬದುಕಿನಲ್ಲೂ ಗೀತು ತಮ್ಮ ಪತಿ ಹಾಗೂ ಖ್ಯಾತ ಸಿನಿಮಾಟೋಗ್ರಾಫರ್ ರಾಜೀವ್ ರವಿ ಅವರೊಂದಿಗೆ ಗಟ್ಟಿಯಾದ ವೃತ್ತಿಪರ ಒಡನಾಟ ಹೊಂದಿದ್ದಾರೆ. ಗೀತು ನಿರ್ದೇಶನದ ಮೂರು ಚಿತ್ರಗಳಿಗೂ ರಾಜೀವ್ ರವಿ ಅವರೇ ಕ್ಯಾಮೆರಾ ಹಿಡಿದಿದ್ದು, 'ಲಯರ್ಸ್ ಡೈಸ್' ಚಿತ್ರಕ್ಕಾಗಿ ಪತ್ನಿ ನಿರ್ದೇಶನದ ಸಿನಿಮಾಗೆ ಪತಿ ಅತ್ಯುತ್ತಮ ಛಾಯಾಗ್ರಹಣದ ರಾಷ್ಟ್ರೀಯ ಪ್ರಶಸ್ತಿ ಪಡೆದ ಅಪರೂಪದ ದಾಖಲೆಯೂ ಈ ಜೋಡಿಯ ಹೆಸರಿದೆ.
'ಟಾಕ್ಸಿಕ್' ಚಿತ್ರದ ಟೀಸರ್​ಗಳು​ ಹಾಗೂ ಟ್ರೈಲರ್​ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಮೂಡಿಸಿದ್ದು, ಚಿತ್ರಮಂದಿರಗಳಲ್ಲಿ ಇದು ಯಾವ ಮಟ್ಟದ ಯಶಸ್ಸು ಕಾಣಲಿದೆ ಎಂಬುದನ್ನು ಕಾದು ನೋಡಬೇಕಿದೆ. ಒಂದು ವೇಳೆ ಇದು ಕೆಜಿಎಫ್ ನಂತಹ ದೊಡ್ಡ ಗೆಲುವು ದಾಖಲಿಸಿದರೆ, ಭಾರತದ ಅತ್ಯಂತ ಯಶಸ್ವಿ ಮತ್ತು ದಿಗ್ಗಜ ನಿರ್ದೇಶಕರ ಸಾಲಿನಲ್ಲಿ ಗೀತು ಮೋಹನ್‌ದಾಸ್ ಹೆಮ್ಮೆಯಿಂದ ನಿಲ್ಲಲಿದ್ದಾರೆ, (ಏಜೆನ್ಸೀಸ್​).