ಗತವೈಭವ ಚಿತ್ರದ ಪೋಸ್ಟರ್​  
ಸ್ಯಾಂಡಲ್‌ವುಡ್

GATHAVAIBHAVA MOVIE REVIEW: ಜನ್ಮ-ಜನ್ಮಾಂತರದ ಗತವೈಭವ

ಪ್ರಮುಖ ಮುಖ್ಯಾಂಶಗಳು

  • ಸಿಂಪಲ್ ಸುನಿ ‘ಗತವೈಭವ’ ಮೂಲಕ ನಿರ್ದೇಶನ ಕೌಶಲದ ಸಾಧ್ಯತೆ ವಿಸ್ತರಿಸಿಕೊಂಡಿದ್ದಾರೆ
  • ಜನ್ಮ-ಜನ್ಮಾಂತರದ ಫ್ಯಾಂಟಸಿ ಕಥೆಗೆ ದೃಶ್ಯವೈಭವ ಸೃಷ್ಟಿ
  • ಆಶಿಕಾ ದೇವಕನ್ಯೆಯಂತೆ ಕಂಗೊಳಿಸಿದ್ದಾರೆ
ಚಿತ್ರ: ಗತವೈಭವ 
ನಿರ್ದೇಶನ: ಸಿಂಪಲ್ ಸುನಿ
ತಾರಾಗಣ: ದುಷ್ಯಂತ್, ಆಶಿಕಾ ರಂಗನಾಥ, ಕಿಶನ್ ಬಿಳಗಲಿ, ಕೃಷ್ಣ ಹೆಬ್ಬಾಳೆ, ಸುಧಾ ಬೆಳವಾಡಿ ಮತ್ತಿತರರು. 
ಶಿವ ಸ್ಥಾವರಮಠ
ತಂದೆ ಕೃಷ್ಣ (ಕೃಷ್ಣ) ಸಲಹೆಯಂತೆ ಪುತ್ರ ಪುರಾತನ್ (ದುಷ್ಯಂತ್) ಗೋಣಿಕೊಪ್ಪಕ್ಕೆ ಹುಡುಗಿ ನೋಡಲು ಹೋಗುತ್ತಾನೆ. ಮೊದಲ ಬಾರಿಗೆ ಆಧುನಿಕಾಳನ್ನು (ಆಶಿಕಾ) ನೋಡುತ್ತಾನೆ. ಆದರೆ, ಆಧುನಿಕಾಳಿಗೆ ಪುರಾತನನ್ನು ಮೊದಲೇ ಎಲ್ಲೋ ನೋಡಿದ ಅನುಭವ. ಈತನೊಂದಿಗೆ ನನ್ನ ಜನ್ಮ ಜನ್ಮಾಂತರದ ಸಂಬಂಧ ಇರಬಹುದೇನೂ ಎಂಬಂತೆ ಕಥೆ ಹೇಳಲು ಮುಂದಾಗುತ್ತಾಳೆ. ಆ ಮೊದಲ ಕಥೆಯೇ ಸಮುದ್ರ ಮಂಥನ. ಅಮೃತ ಕುಡಿದು ಅಮರರಾಗಬೇಕು ಎಂದು ದೇವಮಾನವರು ಮತ್ತು ಅಸುರರ ನಡುವೆ ಜಿದ್ದಾಜಿದ್ದಿ ನಡೆಯುತ್ತಿರುತ್ತದೆ. ಆ ನಡುವೆಯೇ, ಅಸುರನೊಬ್ಬ ದೇವಲೋಕದಲ್ಲಿ ನಿರ್ವಾಣ ಎಂಬ ದೇವಸುಂದರಿ ಜತೆ ಸರಸದಲ್ಲಿರುತ್ತಾನೆ. ಸಮುದ್ರ ಮಂಥನ ಗೆದ್ದು ಬರುವ ದೇವಲೋಕದ ಅನಾಮೇಧಯನ (ಕಿಶನ್) ಕಣ್ಣಿಗೆ ಈ ಇಬ್ಬರು ಬೀಳುತ್ತಾರೆ. ಆಗ ಆತ ಅಸುರನನ್ನು ಸಂಹರಿಸುತ್ತಾನೆ. ಸಹೋದರನ ಕೃತ್ಯಕ್ಕೆ ನೊಂದು ದೇವಸುಂದರಿ ವಿಷ ಸೇವಿಸಿ ಪ್ರಾಣ ಬೀಡುತ್ತಾಳೆ. ಬಳಿಕ ಇಬ್ಬರೂ ಯಾವ ಜನ್ಮದಲ್ಲೂ ಒಂದಾಗದಿರಿಲಿ ಎಂದು ದೇವಮಾನವ ಅನಾಮಧೇಯ ಶಾಪ ವಿಧಿಸುತ್ತಾನೆ. ಆ ಶಾಪದಿಂದ ಈ ಪ್ರೇಮಿಗಳು ಮುಂದಿನ ಮೂರು ಜನ್ಮದಲ್ಲೂ ಭೇಟಿಯಾಗುತ್ತಾರೆ. ಆದರೆ, ಒಂದಾಗುತ್ತಾರಾ ಅಥವಾ ಇಲ್ಲವಾ ಎನ್ನುವುದೇ ಸಿಂಪಲ್ ಸುನಿಯ ಸರಳ, ವಿರಳ ‘ಗತವೈಭವ’. 
ಸರಳ ಪ್ರೇಮಕಥೆಯನ್ನು ಹೇಳುತ್ತಿದ್ದ ಸಿಂಪಲ್ ಸುನಿ ‘ಗತವೈಭವ’ ಮೂಲಕ ನಿರ್ದೇಶನ ಕೌಶಲದ ಸಾಧ್ಯತೆಯನ್ನು ವಿಸ್ತರಿಸಿಕೊಂಡಿದ್ದಾರೆ. ಜನ್ಮ-ಜನ್ಮಾಂತರದ ಫ್ಯಾಂಟಸಿ  ಕಥೆಗೆ ದೃಶ್ಯವೈಭವ ಸೃಷ್ಟಿಸಿದ್ದಾರೆ. ಪ್ರತಿ ದೃಶ್ಯ ಕಲಾತ್ಮಕವಾಗಿ ಮೂಡಿಬಂದಿದೆ. ಅದ್ದೂರಿ ಸೆಟ್‌ಗಳು, ವಸಾಲಂಕಾರ, ವರ್ಣಾಲಂಕಾರ ಗಮನಸೆಳೆಯುತ್ತವೆ. ಪುರಾತನ-ಆಧುನಿಕ ನಾಯಕ- ನಾಯಕಿಯ ಹೆಸರು ಹೇಳುವಂತೆಯೇ ಈ ಒಂದು ಸಿನಿಮಾದಲ್ಲಿ ಹಳೆಯ ಕಾಲದ ಮೂರು ಕಥೆಗಳು ಹಾಗೂ ಆಧುನಿಕ ಕಥೆಯನ್ನು ಹೇಳಿದ್ದಾರೆ. ಕಾಲಘಟ್ಟಗಳಿಗೆ ಅನುಗುಣವಾಗಿ ಕಥೆ ನಿರೂಪಿಸಿರುವುದರಿಂದ ಎಲ್ಲಿಯೂ ಗೊಂದಲವಾಗದೆ ಪ್ರೇಕ್ಷಕರು ಸರಳವಾಗಿ ಅರ್ಥ ಮಾಡಿಕೊಳ್ಳಬಹುದು. ಮೊದಲು ಸಮುದ್ರ ಮಂಥನ, ನಂತರ ವಾಸ್ಕೊ-ಡಾ-ಗಾಮ 1498ರಲ್ಲಿ ಭಾರತಕ್ಕೆ ಬರುವ ಕಥೆ, ಬಳಿಕ ಬ್ರಿಟಿಷರ ಕಾಲದ ಕರಾವಳಿಯ ವೀರ ಕಂಬಳ ಸಾಹಸ. ಕಥೆಯಲ್ಲಿ ಎಲ್ಲ ಕಾಲದಲ್ಲಿ ಪ್ರೀತಿ ಸಿಗುತ್ತದೆ. ಅದು ಅನುಭವಕ್ಕೆ ದಕ್ಕುವ ಮುನ್ನವೇ ಅದಕ್ಕೊಂದು ದುರಂತ ಆರಂಭವಾಗುತ್ತದೆ. ಅದು ಪ್ರೇಕ್ಷಕನಿಗೆ ನಾಟುತ್ತದೆ. ದುಷ್ಯಂತ್ ನಾಲ್ಕು ಶೇಡ್‌ಗಳಲ್ಲಿ ಮಿಂಚಿದ್ದಾರೆ. ಅದರಲ್ಲೂ ವೀರ ಕಂಬಳ ಚೆನ್ನಯನಾಗಿ ಖಡಕ್ ಆಗಿ ಗಮನ ಸೆಳೆಯುತ್ತಾರೆ. ಇನ್ನು ಆಶಿಕಾ ದೇವಕನ್ಯೆಯಂತೆ ಕಂಗೊಳಿಸಿದ್ದಾರೆ. ಇಬ್ಬರ ಕೆಮಿಸ್ಟ್ರಿ ಚೆನ್ನಾಗಿ ಮೂಡಿಬಂದಿದೆ. ಜೂಡಾ ಸ್ಯಾಂಡಿ ಸಂಗೀತ, ಹಿನ್ನೆಲೆ ಸಂಗೀತ ಆಪ್ತವಾಗಿದ್ದು, ಛಾಯಾಗ್ರಾಹಕ ವಿಲಿಯಂ ಡೇವಿಡ್ ಪ್ರತಿ ದೃಶ್ಯಗಳನ್ನು ಸುಂದರವಾಗಿಸಿದ್ದಾರೆ. ‘ಜನ್ಮಕ್ಕೆ ಸಾವಿರಬಹುದು, ಪ್ರೀತಿಗಲ್ಲ’ ಎಂಬ ಮಾತಿನ ಅನುಭವ ಪಡೆಯಬೇಕಾದರೆ ‘ಗತವೈಭವ’ ಕಣ್ತುಂಬಿಕೊಳ್ಳಬಹುದು.
ರೇಟಿಂಗ್: 3.5