ಫುಲ್ ಮೀಲ್ಸ್ ಚಿತ್ರದ ಪೋಸ್ಟರ್
- ವಿನಾಯಕ ಒಂದೇ ಕಥೆಯಲ್ಲಿ ರುಚಿಯಾದ ‘ಫುಲ್‌ಮೀಲ್ಸ್’ ಬಡಿಸಿದ್ದಾರೆ
- ಕಥೆಯ ನಡುವೆ ಬರುವ ಫ್ಲಾಶ್‌ಬ್ಯಾಕ್ ಲವ್‌ಸ್ಟೋರಿ ಊಹೆಗೆ ಮೀರಿದ್ದು!
- ಲಿಖಿತ್ ಹೋರಾಟದ ಹುಡುಗನಾಗಿ ಪಾತ್ರವನ್ನು ಚೆನ್ನಾಗಿ ನಿಭಾಯಿಸಿದ್ದಾರೆ.
ತಾರಾಗಣ: ಲಿಖಿತ್ ಶೆಟ್ಟಿ, ಖುಷಿ ರವಿ, ತೇಜಸ್ವಿನಿ ಶರ್ಮಾ, ವಿಜಯ್ ಚೆಂಡೂರ್, ರಂಗಾಯಣ ರಘು, ರಾಜೇಶ್ ನಟರಂಗ ಮತ್ತಿತರರು.
ವೆಡ್ಡಿಂಗ್ ಫೋಟೋಗ್ರಾರ್ ಆಗಿದ್ದರೂ ಕೆಲಸಗಳಿಲ್ಲದೇ ಹೋರಾಡುತ್ತಿರುವ ಲಕ್ಕಿ (ಲಿಖಿತ್), ಸಾಲ ತೀರಿಸುವ ಒತ್ತಡದಲ್ಲಿರುತ್ತಾನೆ. ಆತನ ಮಾವನ (ರಂಗಾಯಣ ರಘು) ನೆರವಿನಿಂದ ಮದುವೆಯೊಂದರ ಪ್ರಿ-ವೆಡ್ಡಿಂಗ್ ಫೋಟೋಶೂಟ್ ಆರ್ ಬರುತ್ತದೆ. ವಧು ಪೂಜಾ (ಖುಷಿ) ವೆಡ್ಡಿಂಗ್ ಫೋಟೋಗ್ರಾರ್ಸ್ ಎಂದರೆ ಫ್ಲರ್ಟ್‌ಗಳು ಎಂದೇ ನಂಬಿರುವಾಕೆ. ಆದರೆ, ಲಕ್ಕಿಯ ಹೋರಾಟದ ಜೀವನ ಮತ್ತು ಒಳ್ಳೆಯತನ ಆಕೆಯ ಮನೋಭಾವವನ್ನು ಬದಲಾಯಿಸಿ, ಆತನ ಮೇಲೆ ಮನಸ್ಸಾಗುವಂತೆ ಮಾಡುತ್ತದೆ. ಇದೇ ವೇಳೆ ಪೂಜಾಳ ಗೆಳತಿ, ಮೇಕಪ್ ಆರ್ಟಿಸ್ಟ್ ಪ್ರೀತಿ (ತೇಜಸ್ವಿನಿ) ಕೂಡ ಮೊದಲಿನಿಂದಲೂ ಲಕ್ಕಿಯನ್ನು ಪ್ರೀತಿಸುತ್ತಿರುತ್ತಾಳೆ. ಈ ಇಬ್ಬರ ಮಧ್ಯೆ ಸಿಲುಕಿರುವ ಲಕ್ಕಿ, ತನ್ನ ಮನಸ್ಸನ್ನು ನೀಡುವ ಲಕ್ಕಿ ಹುಡುಗಿ ಯಾರು? ಎನ್ನುವುದೇ ವಿನಾಯಕ ನಿರ್ದೇಶನದ ‘ಫುಲ್‌ಮೀಲ್ಸ್’ ಕಥೆ.
ನವಿರಾದ ಪ್ರೀತಿ, ಭಾವನಾತ್ಮಕ ಸಂಬಂಧ, ಲವಲವಿಕೆ ಪಾತ್ರಗಳ ಮೂಲಕ ವಿನಾಯಕ ಒಂದೇ ಕಥೆಯಲ್ಲಿ ರುಚಿಯಾದ ‘ಫುಲ್‌ಮೀಲ್ಸ್’ ಬಡಿಸಿದ್ದಾರೆ. ಹೇಳಬೇಕಾದ ಕಥೆಯನ್ನು ನೇರವಾಗಿ ಹೇಳಿದ್ದು, ಬರವಣಿಗೆಯಲ್ಲಿ ಹಿಡಿತ ಸಾಧಿಸಿದ್ದಾರೆ. ಕಥೆಯ ನಡುವೆ ಬರುವ ಫ್ಲಾಶ್‌ಬ್ಯಾಕ್ ಲವ್‌ಸ್ಟೋರಿ ಊಹೆಗೆ ಮೀರಿದ್ದು! ಅಷ್ಟು ಅಂದವಾಗಿ ಜೋಡಿಸಿದ್ದಾರೆ. ತಾಜಾತನದ ಕಥೆಯ ಮೂಲಕ ವಿನಾಯಕ ಪ್ರೇಕ್ಷಕರಿಗೆ ‘ಸಿಹಿಯೂಟ’ ಬಡಿಸಿದ್ದಾರೆ. ಲಿಖಿತ್ ಹೋರಾಟದ ಹುಡುಗನಾಗಿ ಪಾತ್ರವನ್ನು ಚೆನ್ನಾಗಿ ನಿಭಾಯಿಸಿದ್ದಾರೆ. ಕೆಲವೆಡೆ ನಟನೆಯಲ್ಲಿ ಜೋಶ್‌ಯಿದೆ. ಖುಷಿ ರವಿ ಮತ್ತು ತೇಜಸ್ವಿನಿ ಶರ್ಮಾ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಖುಷಿ ಸಿಹಿಯಾಗಿ ನಟಿಸಿದರೆ, ತೇಜಸ್ವಿನಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ವಿಜಯ್ ಚೆಂಡೂರು, ರಂಗಾಯಣ ರಘು, ರಾಜೇಶ್ ನಟರಂಗ ಪಾತ್ರಗಳು ಅಚ್ಚುಕಟ್ಟಾಗಿ ಮೂಡಿಬಂದಿವೆ. ಈ ‘ಫುಲ್‌ಮೀಲ್ಸ್’ಅನ್ನು ಪ್ರೇಕ್ಷಕರು ಹೋಟೆಲ್ ಅರ್ಥಾತ್ ಥಿಯೇಟರ್‌ಗಳಲ್ಲಿ ಸವಿಯಲು ಅಡ್ಡಿಯಿಲ್ಲ!