ದ ಡೆವಿಲ್​ 
ಸ್ಯಾಂಡಲ್‌ವುಡ್

The Devil - ದರ್ಶನ್​ ಬಗ್ಗೆ ನಿರ್ದೇಶಕ ಪ್ರಕಾಶ್​ ವೀರ್​ Exclusive ಮಾತು

ಪ್ರಮುಖ ಮುಖ್ಯಾಂಶಗಳು

  • 2018ರಲ್ಲೇ "ದ ಡೆವಿಲ್​' ಕಥೆ ಬಗ್ಗೆ ದರ್ಶನ್​ಗೆ ಹೇಳಿದ್ದರಂತೆ ಪ್ರಕಾಶ್​ ವೀರ್​
  • ಎರಡು ವಾರಗಳ ಹಿಂದೆ ಹೋಗಿ ದರ್ಶನ್​ರನ್ನು ಭೇಟಿಯಾಗಿದ್ದ ಪ್ರಕಾಶ್​ ಕೆಲ ಪುಸ್ತಕಗಳನ್ನು ಕೊಟ್ಟು ಮಾತನಾಡಿಸಿಕೊಂಡು ಬಂದರಂತೆ
  • ಈ ಚಿತ್ರದಲ್ಲಿ ಅದ್ಭುತ ನಟನನ್ನು ನೋಡಬಹುದು - ಪ್ರಕಾಶ್​ ವೀರ್​
  • ಡಿ. 11ರ ಬೆ. 6.30ಕ್ಕೆ ರಾಜ್ಯಾದ್ಯಂತ ದ ಡೆವಿಲ್​ ಸಿನಿಮಾ ಶೋಗಳು ಪ್ರಾರಂಭವಾಗಲಿವೆ
The Devil - "ಖುಷಿ', "ರಿಷಿ', "ಮಿಲನ', "ವಂಶಿ', "ತಾರಕ್​' ಸೇರಿ 23 ವರ್ಷಗಳ ಕರಿಯರ್​ನಲ್ಲಿ ಎಂಟು ಚಿತ್ರಗಳಿಗೆ ಆ್ಯಕ್ಷನ್​-ಕಟ್​ ಹೇಳಿರುವ ಪ್ರಕಾಶ್​ ವೀರ್​ ನಿರ್ದೇಶನದ ಒಂಬತ್ತನೇ ಸಿನಿಮಾ "ದ ಡೆವಿಲ್​'. "ತಾರಕ್​' ಬಳಿಕ 8 ವರ್ಷಗಳ ನಂತರ ಪ್ರಕಾಶ್​ ವೀರ್​ ಮತ್ತೆ ನಿರ್ದೇಶಿಸುತ್ತಿದ್ದು ಜತೆಗೆ ದರ್ಶನ್​ ಕಾರಣಕ್ಕೆ ಸಿನಿಮಾ ಬಗ್ಗೆ ಪ್ರಾರಂಭದಿಂದಲೂ ಕುತೂಹಲ ಹೆಚ್ಚಿದೆ.
ಈ ಸುದೀರ್ಘ ಗ್ಯಾಪ್​ ಬಗ್ಗೆ ಪ್ರಕಾಶ್​, "ಒಂದು ಕಥೆ ನಮ್ಮನ್ನು ಮಲಗಲು ಬಿಡದಷ್ಟು ಕಾಡಬೇಕು, ಅದೇ ನಮ್ಮನ್ನು ಸೆಟ್​ಗೆ ಕರೆದುಕೊಂಡು ಹೋಗಬೇಕು ಅನ್ನೋದು ನನ್ನ ನಂಬಿಕೆ. ಆದರೆ, ನನ್ನ ತಂದೆ, ದೊಡ್ಡಮ್ಮ ಪಾರ್ವತಮ್ಮ ರಾಜಕುಮಾರ್​ ಸೇರಿ ಎಲ್ಲರೂ ಒಂದೊಂದು ಚಿತ್ರಕ್ಕೂ ನೀನು ಇಷ್ಟೊಂದು ಸಮಯ ತೆಗೆದುಕೊಂಡರೆ ಹೇಗೋ? ಬೇಗ ಸಿನಿಮಾ ಮಾಡು ಅಂತ ಬೈಯುತ್ತಿದ್ದರು. 2018ರಲ್ಲೇ "ದ ಡೆವಿಲ್​' ಕಥೆ ಬಗ್ಗೆ ದರ್ಶನ್​ಗೆ ಹೇಳಿದ್ದೆ. ಅದರ ನಡುವೆ ಕರೊನಾ ಬಂತು. ಅಪ್ಪನಿಗೆ ತುಂಬ ದಿನಗಳ ಕಾಲ ಅನಾರೋಗ್ಯವಿತ್ತು. ನಿಜ ಹೇಳಬೇಕೆಂದರೆ "ಕ್ರಾಂತಿ' ಡೇಟ್ಸ್​ ಅನ್ನೇ ದರ್ಶನ್​ "ಡೆವಿಲ್​'ಗೆ ನೀಡಿದ್ದರು. ಆದರೆ, "ಡೆವಿಲ್​' ತಡವಾಗುತ್ತಿದ್ದ ಕಾರಣ ದರ್ಶನ್​ "ಕ್ರಾಂತಿ' ಮತ್ತು "ಕಾಟೇರ' ಶೂಟಿಂಗ್​ಗೆ ಡೇಟ್ಸ್​ ಕೊಟ್ಟರು. ಕೇವಲ 80 ದಿನಗಳಲ್ಲಿ "ಡೆವಿಲ್​' ಶೂಟಿಂಗ್​ ಮುಗಿಸಿದೆವು. ಅದಕ್ಕೆ ಕಾರಣ ಹೋಮ್​ ವರ್ಕ್​. ಸಿದ್ಧತೆ ಚೆನ್ನಾಗಿದ್ದರೆ ಸೆಟ್​ನಲ್ಲಿ ಯಾವುದೇ ಗೊಂದಲವಿರುವುದಿಲ್ಲ. ಏನು ಬೇಕು? ಎಷ್ಟು ಬೇಕು? ಎಂಬ ಸ್ಪಷ್ಟತೆ ಇರುತ್ತದೆ. ಎಷ್ಟೇ ವರ್ಷಗಳ ಬಳಿಕ ನಾನು ನನ್ನ ಸಿನಿಮಾ ಮತ್ತೆ ನೋಡಿದಾಗ, ನಾನೇಕೆ ಈ ಸಿನಿಮಾ ಮಾಡಿದೆ ಅಂತ ನನಗೇ ಅನ್ನಿಸಬಾರದು. ಆ ಅನುಭವ ಕಾಡದಂತಹ ಸಿನಿಮಾ ಮಾಡುವುದಷ್ಟೇ ನನ್ನ ಗುರಿ' ಎಂದು ಹೇಳಿಕೊಳ್ಳುತ್ತಾರೆ.

ಎರಡು ವಾರಗಳ ಹಿಂದೆ ದರ್ಶನ್​ ಭೇಟಿ

"ನಾನು, ದರ್ಶನ್​ ಫ್ಯಾಮಿಲಿ ಫ್ರೆಂಡ್ಸ್​. ಆದರೆ, ನಮ್ಮ ಗೆಳೆತನದ ಬಗ್ಗೆ ನಾನಾಗಲಿ ಅಥವಾ ದರ್ಶನ್​ ಆಗಲಿ ಮಾತನಾಡುವುದಿಲ್ಲ. ಅವರು ನನ್ನನ್ನು, ನಾನು ಅವರನ್ನು ಕುಟುಂಬದ ಸದಸ್ಯರಂತೆಯೇ ನೋಡುತ್ತೇವೆ. ನಾವು ಸಿನಿಮಾ ಮತ್ತು ವೈಯಕ್ತಿಕ ವಿಷಯಗಳನ್ನು ಮಿಕ್ಸ್​ ಮಾಡುವುದಿಲ್ಲ. ಎರಡು ವಾರಗಳ ಹಿಂದೆ ಹೋಗಿ ದರ್ಶನ್​ರನ್ನು ಭೇಟಿ ಮಾಡಿದೆ. ಕೆಲ ಪುಸ್ತಕಗಳನ್ನು ಕೊಟ್ಟು ಮಾತನಾಡಿಸಿಕೊಂಡು ಬಂದೆ. "ಸಿನಿಮಾ ನಿನಗೆ ಇಷ್ಟವಾಯಿತಾ? ಸಂಗೀತ ಹೇಗೆ ಬಂದಿದೆ? ತೆರೆಯ ಮೇಲೆ ಹೇಗೆ ಕಾಣುತ್ತದೆ? ರಿಲೀಸ್​ಗೆ ಹೇಗೆ ಸಿದ್ಧತೆ ನಡೆಸುತ್ತಿದ್ದೀಯಾ?' ಅಂತ ಸಿನಿಮಾ ಬಿಟ್ಟು ಬೇರೆ ವಿಷಯ ನಾವು ಮಾತನಾಡುವುದಿಲ್ಲ. ರಿಲೀಸ್​ಗೂ ಮುನ್ನ ಮತ್ತೊಮ್ಮೆ ಅವರನ್ನು ಭೇಟಿಯಾಗಬೇಕು ಅಂತ ಅಂದುಕೊಂಡಿದ್ದೇನೆ. ದರ್ಶನ್​ನ ತುಂಬ ಮಿಸ್​ ಮಾಡಿಕೊಳ್ಳುತ್ತೇನೆ' ಎಂದು ಮಾಹಿತಿ ನೀಡುತ್ತಾರೆ ಪ್ರಕಾಶ್​.

ಹಲವು ಶೇಡ್​ಗಳ ದರ್ಶನ

ಈ ಹಿಂದೆ ಹಲವು ಬಾರಿ ನೆಗೆಟಿವ್​ ಪಾತ್ರ ಮಾಡಲು ಇಷ್ಟ ಅಂತ ಖುದ್ದು ದರ್ಶನ್​ ಹೇಳಿಕೊಂಡಿದ್ದರು. "ಡೆವಿಲ್​' ಪಾತ್ರದ ಬಗ್ಗೆ, "ಚಿತ್ರದಲ್ಲಿ ದರ್ಶನ್​ ಪಾತ್ರಕ್ಕೆ ಹಲವು ಶೇಡ್​ಗಳಿವೆ. ಪಾತ್ರದ ಬಗ್ಗೆ ಕೇಳಿ ಅವರೂ ತುಂಬ ಎಕ್ಸೈಟ್​ ಆಗಿದ್ದರು. ಯಾವಾಗಲೂ ಕಥೆ ರೆಡಿ ಆಯಿತಾ ಅಂತ ಕೇಳುತ್ತಿದ್ದರು. ಈ ಚಿತ್ರದಲ್ಲಿ ಅದ್ಭುತ ನಟನನ್ನು ನೋಡಬಹುದು. ಅವರನ್ನು ಕ್ಯಾಮರಾ ಹಿಂದೆ ಕುಳಿತು ನೋಡುತ್ತಲೇ ನಾನು ತುಂಬ ಎಂಜಾಯ್​ ಮಾಡಿದೆ' ಎನ್ನುತ್ತಾರೆ.

ಅಭಿಮಾನಿಗಳೇ ಪ್ರಚಾರ ರಾಯಭಾರಿಗಳು

"ಅಭಿಮಾನಿಗಳೇ "ಡೆವಿಲ್​' ಪ್ರಚಾರ ಮಾಡುತ್ತಿದ್ದಾರೆ' ಎನ್ನುವ ಪ್ರಕಾಶ್​, "ಡಿ. 5ರಂದು ಟ್ರೇಲರ್​ ಬಿಡುಗಡೆ ಆಗಿದೆ. ಟಿಕೆಟ್​ ದರ ಏರಿಸುವ ಆಲೋಚನೆ ಇಲ್ಲ. ಡಿ. 12ರಂದು ರಿಲೀಸ್​ ಪ್ಲ್ಯಾನ್ ಮಾಡಿದ್ದೆವು. 11ರಂದು ಸೆಲೆಬ್ರಿಟಿ ಶೋ ಅಥವಾ ಫ್ಯಾನ್​ ಶೋ ಅಂತೆಲ್ಲ ಮಾಡುವ ಬದಲು, ಅಂದು ಸಿನಿಮಾನೇ ಬಿಡುಗಡೆ ಮಾಡಲು ನಿರ್ಧರಿಸಿದೆವು. ಡಿ. 11ರ ಬೆ. 6.30ಕ್ಕೆ ಶೋಗಳು ಪ್ರಾರಂಭವಾಗಲಿವೆ' ಎಂದು ಮಾಹಿತಿ ನೀಡುತ್ತಾರೆ.