ಗಂಜ್ ಸರ್ಕಲ್​ ಪೋಸ್ಟರ್​ 
ಸ್ಯಾಂಡಲ್‌ವುಡ್

ಜವಾರಿ ಮಾಸ್ ‘ಗಂಜ್ ಸರ್ಕಲ್’: ಎರಡನೇ ಸಿನಿಮಾ ಅನೌನ್ಸ್ ಮಾಡಿದ ‘ಹೆಬ್ಬುಲಿ ಕಟ್’ ನಿರ್ದೇಶಕ ಭೀಮರಾವ್

ಕಳೆದ ವರ್ಷ ತೆರೆಕಂಡಿದ್ದ ‘ಹೆಬ್ಬುಲಿ ಕಟ್’ ಚಿತ್ರದ ಮೂಲಕ ಗಂಭೀರ ವಿಷಯದ ಎಳೆಯನ್ನು ಮನರಂಜನಾತ್ಮಕವಾಗಿ ನಿರೂಪಿಸಿದ್ದ ನಿರ್ದೇಶಕ ಭೀಮರಾವ್ ಪೈದೊಡ್ಡಿ ಇದೀಗ ಎರಡನೇ ಸಿನಿಮಾ ಘೋಷಿಸಿದ್ದಾರೆ.

ಬೆಂಗಳೂರು: ಕಳೆದ ವರ್ಷ ತೆರೆಕಂಡಿದ್ದ ‘ಹೆಬ್ಬುಲಿ ಕಟ್’ ಚಿತ್ರದ ಮೂಲಕ ಗಂಭೀರ ವಿಷಯದ ಎಳೆಯನ್ನು ಮನರಂಜನಾತ್ಮಕವಾಗಿ ನಿರೂಪಿಸಿದ್ದ ನಿರ್ದೇಶಕ ಭೀಮರಾವ್ ಪೈದೊಡ್ಡಿ ಇದೀಗ ಎರಡನೇ ಸಿನಿಮಾ ಘೋಷಿಸಿದ್ದಾರೆ. ಈ ಬಾರಿ ಅವರು ಮಾಸ್ ಜತೆಗೆ ಮನರಂಜನೆಯ ಕಥೆಯನ್ನು ಆಯ್ದುಕೊಂಡಿದ್ದಾರೆ. ಚಿತ್ರಕ್ಕೆ ‘ಗಂಜ್ ಸರ್ಕಲ್’ ಎಂದು ಹೆಸರಿಡಲಾಗಿದ್ದು, ಇದು ಕೂಡ ರಾಯಚೂರು ಭಾಗದಲ್ಲಿ ನಡೆಯುವ ಕಥೆಯಾಗಿದೆ. ಟೈಟಲ್ ಘೋಷಿಸಿದ ಬಳಿಕ ಭೀಮರಾವ್, ‘‘ಹೆಬ್ಬುಲಿ ಕಟ್’ ವಿಷಯಾಧಾರಿತ ಚಿತ್ರವಾಗಿತ್ತು. ತುಂಬಾ ಜನರಿಂದ ಮೆಚ್ಚುಗೆ ಗಳಿಸಿತ್ತು. ಆದರೆ, ಪ್ರಚಾರದ ಕೊರತೆಯಿಂದಾಗಿ ನಾವಂದುಕೊಂಡಷ್ಟು ರೀಚ್ ಆಗಲಿಲ್ಲ. ಆದರೆ, ‘ಗಂಜ್ ಸರ್ಕಲ್’ ಚಿತ್ರವನ್ನು ಯಾವುದೇ ಕೊರತೆ ಬಾರದಂತೆ ತೆರೆ ಮೇಲೆ ತರಲಿದ್ದೇವೆ. ಇದು ವಿಭಿನ್ನ ಸ್ಟೋರಿಯಾಗಿದ್ದು, ಮಾಸ್ ಆಡಿಯನ್ಸ್ ಗಮನದಲ್ಲಿಟ್ಟುಕೊಂಡು ನಿರೂಪಣೆ ಮಾಡುತ್ತಿದ್ದೇವೆ. ಒಟ್ಟು 45 ದಿನಗಳ ಚಿತ್ರೀಕರಣ ನಡೆಸಲಿದ್ದೇವೆ. ‘ಹೆಬ್ಬುಲಿಕಟ್’ ಸಿನಿಮಾ ನೋಡಿ, ಮೆಚ್ಚಿದ್ದ ಇನ್‌ಸೈಟ್ ಐಎಎಸ್ ಸಂಸ್ಥಾಪಕ ವಿನಯ್ ಕುಮಾರ್ ‘ಗಂಜ್ ಸರ್ಕಲ್’ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಆ ಮೂಲಕ ಅವರು ಮೊದಲ ಬಾರಿಗೆ ನಿರ್ಮಾಪಕರಾಗುತ್ತಿದ್ದಾರೆ. ಕಲಾವಿದರಿಗೆ ವರ್ಕ್‌ಶಾಪ್‌ಗೆ ಮಾಡಲಿದ್ದು, ನೈಜ ಲೋಕೇಷನ್‌ಗಳಲ್ಲಿಯೇ 15 ರಿಂದ 20 ದಿನಗಳ ಕಾಲ ತರಬೇತಿ ನಡೆಸಲಿದ್ದೇವೆ. 2027ರ ಏಪ್ರಿಲ್‌ಗೆ ಸಿನಿಮಾ ತೆರೆ ಮೇಲೆ ತರುವ ಯೋಚನೆಯಿದೆ’ ಎಂದು ಹೇಳಿಕೊಳ್ಳುತ್ತಾರೆ.

ಅಧಿಕಾರ, ಅನ್ನ, ಹಣಕ್ಕಾಗಿ ಮನುಷ್ಯನ ಹಸಿವು ದೊಡ್ಡದು. ಅದನ್ನೇ ಗಮನದಲ್ಲಿಟ್ಟುಕೊಂಡು ಕರ್ಮಷಿಯಲ್ ರೂಪದಲ್ಲಿ ‘ಗಂಜ್ ಸರ್ಕಲ್’ ನಿರೂಪಣೆಯಾಗಲಿದೆ. ಎಪಿಎಂಸಿ ಯಾರ್ಡ್‌ಗಳಲ್ಲಿ ಶೂಟಿಂಗ್ ನಡೆಸಲಿದ್ದೇವೆ. ಸದ್ಯಕ್ಕೆ ನಾಯಕ, ನಾಯಕಿಯ ಆಯ್ಕೆ ಪ್ರಕ್ರಿಯೆ ಹಂತದಲ್ಲಿದೆ. ಅದು ಶೀಘ್ರವೇ ಮುಗಿಯಲಿದ್ದು, ನವೆಂಬರ್‌ನಿಂದ ಶೂಟಿಂಗ್ ಆರಂಭವಾಗಲಿದೆ.
ಭೀಮರಾವ್ ಪೈದೊಡ್ಡಿ, ನಿರ್ದೇಶಕ