Devi 
ಸ್ಯಾಂಡಲ್‌ವುಡ್

Devi - ಶಾಸ್ತ್ರಿ ಮುಂದೆ ದೇವಿ ಆ್ಯಕ್ಷನ್​

Devi movie -
ಮಂಡ್ಯ ಮೂಲದ ಯುವರೈತ ಚೇತನ್​ ಗೌಡ ಮತ್ತು "ಬಿಗ್​ಬಾಸ್​ ಕನ್ನಡ' ಸೀಸನ್​ 11ರ ಖ್ಯಾತಿಯ ನಟಿ ಭವ್ಯಾ ಗೌಡ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ಸಿನಿಮಾ "ದೇವಿ'. ಚೇತನ್​ ಅವರೇ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದು, ಪ್ರಕಾಶ್​ ಕುಮಾರ್​ ನಿರ್ದೇಶಿಸುತ್ತಿದ್ದಾರೆ. ಕಳೆದ ಕೆಲ ದಿನಗಳಿಂದ ಲಗ್ಗೆರೆಯ ಆಕಾಶ್​ ಚಿತ್ರಮಂದಿರದ ಮುಂದೆ ನಟ ದರ್ಶನ್​ರ 50 ಅಡಿ ಎತ್ತರದ ಕಟೌಟ್​ ನಿರ್ಮಿಸಿ, "ದೇವಿ' ಚಿತ್ರದ ಸಾಹಸ ಸನ್ನಿವೇಶಗಳ ಶೂಟಿಂಗ್​ ನಡೆಸಲಾಗುತ್ತಿದೆ. ಚೇತನ್​ ಜತೆ ಹುಲಿ ಕಾರ್ತಿಕ್​, ಕಾರೋಚ್​ ಸುಧಿ, ಯಶ್​ ಶೆಟ್ಟಿ ಹಾಗೂ ನೂರಕ್ಕೂ ಅಧಿಕ ಸಹ&ಕಲಾವಿದರು ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ನಾಯಕ ಚೇತನ್​, "ಜೀವನದಲ್ಲಿ ಏನಾದರೂ ಸಾಧಿಸಬೇಕು ಅಂತ ಹಳ್ಳಿಯಿಂದ ನಗರಕ್ಕೆ ಬರುವ ಹುಡುಗನೊಬ್ಬ, ಸಂದರ್ಭದ ಕೈಗೊಂಬೆಯಾಗಿ ರೌಡಿಸಂಗೆ ಇಳಿಯುವ ಕಥೆಯಿದು. ಸಿನಿಮಾ ನಾವಂದುಕೊಂಡಂತೆಯೇ ತುಂಬ ಚೆನ್ನಾಗಿ ಮೂಡಿಬರುತ್ತಿದೆ. ನಾನು ನಿಜ ಜೀವನದಲ್ಲಿ ನಟ ದರ್ಶನ್​ ಅಭಿಮಾನಿ. ಸಿನಿಮಾದಲ್ಲೂ ಅವರ ಅಭಿಮಾನಿ ಪಾತ್ರದಲ್ಲೇ ನಟಿಸಿದ್ದೇನೆ. ದರ್ಶನ್​ರ "ಶಾಸ್ತ್ರಿ' ಸಿನಿಮಾ ರಿ&ರಿಲೀಸ್​ ಆದ ಸಮಯದಲ್ಲಿ ನಾಯಕ ಮತ್ತು ವಿಲನ್​ಗಳ ನಡುವೆ ಗಲಾಟೆಯಾಗುವ ಸನ್ನಿವೇಶವನ್ನು ಚಿತ್ರೀಕರಿಸುತ್ತಿದ್ದೇವೆ' ಎಂದರು. ನಿರ್ದೇಶಕ ಪ್ರಕಾಶ್​, "ಈಗಾಗಲೇ ಎಂಟು ದಿನಗಳ ಚಿತ್ರೀಕರಣ ಮುಗಿದಿದ್ದು, ಇನ್ನೂ 45 ದಿನಗಳ ಶೂಟಿಂಗ್​ ಬಾಕಿ ಇದೆ. ಮಂಡ್ಯದಲ್ಲಿ 10 ದಿನ, ಶಿವಮೊಗ್ಗ ಮತ್ತು ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಿದ್ದೇವೆ' ಎಂದು ಮಾಹಿತಿ ನೀಡುತ್ತಾರೆ. ಆ್ಯಕ್ಷನ್​ ಜತೆಗೆ ತಾಯಿ ಸೆಂಟಿಮೆಂಟ್​ ಅಂಶಗಳಿರುವ "ದೇವಿ'ಗೆ ಅಜಿತ್​ ಕುಮಾರ್​ ಛಾಯಾಗ್ರಹಣ, ಮಾಸ್ತಿ ಸಂಭಾಷಣೆ ಮತ್ತು ಶ್ರೀಧರ್​ ವಿ. ಸಂಭ್ರಮ್​ ಸಂಗೀತವಿರಲಿದೆ.