‘ಡಿಟೆಕ್ಟಿವ್ ತೀಕ್ಷ್ಣ’ ಪೋಸ್ಟರ್
- ಪ್ರಿಯಾಂಕಾ ಉಪೇಂದ್ರ ಅಭಿನಯದ 50ನೇ ಸಿನಿಮಾ
- ಪತ್ತೆದಾರಿಯ ಪಾತ್ರದಲ್ಲಿ ಮಿಂಚಿದ ನಟಿ ಪ್ರಿಯಾಂಕಾ ಉಪೇಂದ್ರ
- ಗಮನಸೆಳೆಯುವ ಚುರುಕು ಕಾರ್ಯಾಚರಣೆ, ಆ್ಯಕ್ಷನ್ ದೃಶ್ಯಗಳು
ಚಿತ್ರ: ಡಿಟೆಕ್ಟಿವ್ ತೀಕ್ಷ್ಣ
ನಿರ್ದೇಶನ: ತ್ರಿವಿಕ್ರಮ್ ರಘು
ತಾರಾಗಣ: ಪ್ರಿಯಾಂಕಾ ಉಪೇಂದ್ರ, ಅವಿನಾಶ್, ಸಿದ್ಲಿಂಗು ಶ್ರೀಧರ್, ಅರುಣ ಬಾಲರಾಜ್ ಮತ್ತಿತರರು
ಕಾರ್ಯಾಚರಣೆ ವೇಳೆ ಗುಂಡೇಟಿಗೆ ಅರಣ್ಯಾಧಿಕಾರಿ ಬಲಿಯಾಗುತ್ತಾನೆ. ಆದು ಕೊಲೆ ಎಂದು ಕೋರ್ಟ್‌ಗೆ ಹೋಗುವ ತಾಯಿ ಮತ್ತು ಮಗಳಿಗೆ ಹಿನ್ನಡೆಯಾಗುತ್ತದೆ. ಅಲ್ಲದೇ ತಾಯಿಗೆ ಹುಚ್ಚಿ ಪಟ್ಟ ಕಟ್ಟಲಾಗುತ್ತದೆ. ಬೇಸತ್ತ ತಾಯಿ, ನ್ಯಾಯಾಲಯದ ಆವರಣದಲ್ಲಿಯೇ ಪಿಸ್ತೂಲಿನಿಂದ ಶೂಟ್ ಮಾಡಿಕೊಂಡು ಸಾಯುತ್ತಾಳೆ. ಮಗಳು ತೀಕ್ಷ್ಣಅನಾಥೆಯಾಗುತ್ತಾಳೆ. ಅದೇ ಸಮಯದಲ್ಲಿ ನ್ಯಾಯಾಲಯದಲ್ಲಿದ್ದ ಹಿರಿಯ ನೋಟರಿ ಟೈಪಿಸ್ಟ್ ತೀಕ್ಷ್ಣಳನ್ನು ಸಾಕಿ, ಆಕೆಯನ್ನು ಕೂಡ ಟೈಪಿಸ್ಟ್ ಆಗಿ ಮಾಡುತ್ತಾರೆ. ಹೆಸರಿಗೆ ತಕ್ಕಂತೆ ಆಕೆಯದು ತೀಕ್ಷ್ಣ ಬುದ್ಧಿ. ಅನುಭವದಿಂದಲೇ ಎಲ್ಲ ಕಾನೂನು ತಿಳಿದುಕೊಳ್ಳುತ್ತಾಳೆ. ಎಷ್ಟೋ ಕೇಸ್‌ಗಳಿಗೆ ಚಿಕ್ಕವಯಸ್ಸಿನಲ್ಲಿಯೇ ಸಲಹೆ ನೀಡಿ ಪರಿಹರಿಸಿರುತ್ತಾಳೆ. ಇದೇ ಅನುಭವ ಆಕೆಯನ್ನು ಮುಂದೆ ಟೈಪಿಸ್ಟ್ ಕೆಲಸ ಬಿಟ್ಟು ಡಿಟೆಕ್ಟಿವ್ ಉದ್ಯೋಗ ಆಯ್ಕೆ ಮಾಡಿಕೊಳ್ಳಲು ಕಾರಣವಾಗುತ್ತದೆ. ಹಾಗಾದರೆ, ಡಿಟೆಕ್ಟಿವ್ ಆಗುವ ತೀಕ್ಷ್ಣಮುಂದೆ ಯಾವೆಲ್ಲ ಕೇಸ್‌ಗಳನ್ನು ಪರಿಹರಿಸುತ್ತಾಳೆ ಹಾಗೂ ಈ ವೇಳೆ ಯಾರೆನ್ನೆಲ್ಲ ಎದುರು ಹಾಕಿಕೊಳ್ಳುತ್ತಾಳೆ ಎಂಬುದೇ ಚಿತ್ರದ ಮುಂದುವರಿದ ಕಥೆ.
‘ಡಿಟೆಕ್ಟಿವ್ ತೀಕ್ಷ್ಣ’ ಪ್ರಿಯಾಂಕಾ ಉಪೇಂದ್ರ ಅಭಿನಯದ 50ನೇ ಸಿನಿಮಾ ಎಂಬ ಕಾರಣಕ್ಕೆ ವಿಶೇಷತೆ ಪಡೆದಿತ್ತು. ಈ ಚಿತ್ರದಲ್ಲೂ ಅವರು ‘ಉಗ್ರಾವತಾರ’ ಮುಂದುವರಿಸಿದ್ದಾರೆ. ಚುರುಕು ಬುದ್ಧಿಯ ಚುಟುಕು ಕಾರ್ಯಾಚರಣೆ ಹಾಗೂ ಆ್ಯಕ್ಷನ್ ಮೂಲಕ ಗಮನ ಸೆಳೆದಿದ್ದಾರೆ. ಆದರೆ, ಕಥೆಗೆ ಇನ್ನೊಂದಿಷ್ಟು ರೋಚಕತೆ ಬೇಕಿತ್ತು. ಕೆಲವು ಕಾರ್ಯಾಚರಣೆಗಳನ್ನು ಊಹಿಸಬಹುದು. ಇನ್ನು ಮೊದಲರ್ಧ ತೀಕ್ಷ್ಣಳ ಹಿನ್ನೆಲೆ, ಟೈಪಿಸ್ಟ್ ಆಗಿದ್ದಾಗ ಆಕೆ ತೋರಿದ ಚುರುಕುತನ ಹಾಗೂ ಕೆಲ ಫ್ಲಾಶ್‌ಬ್ಯಾಕ್‌ಗಳಿಗೆ ಸೀಮಿತವಾಗಿದೆ. ದ್ವಿತೀಯಾರ್ಧದಲ್ಲಿ ಭೂಗತ ಪಾತಕಿಗಳನ್ನು ಸದೆಬಡಿಯುವ ಕಾರ್ಯಾಚರಣೆಗಳನ್ನು ತೋರಿಸಲಾಗಿದೆ. ಕಥೆಯು ಅಪೂರ್ಣವಾಗಿದ್ದು, ನಿಜವಾದ ತೀಕ್ಷ್ಣಳ ಹೋರಾಟಕ್ಕಾಗಿ ಮುಂದಿನ ಭಾಗ ಬರುವರೆರೆಗೂ ಕಾಯಬೇಕಿದೆ. ತ್ರಿವಿಕ್ರಮ್ ರಘು ಅವರ ಈ ಆ್ಯಕ್ಷನ್ ಪ್ರಧಾನ ಕಥೆಯಲ್ಲಿ ಪ್ರಿಯಾಂಕಾ ಅಬ್ಬರಿಸಿದ್ದಾರೆ. ಕೊನೆಯಲ್ಲಿ ವಿಜಯ್ ಸೂರ್ಯ ಕಾಣಿಸಿಕೊಂಡು ಅಚ್ಚರಿ ಮೂಡಿಸುತ್ತಾರೆ. ಅವಿನಾಶ್, ಶ್ರೀಧರ್ ಸೇರಿ ಹಲವು ಹೊಸ ಪಾತ್ರಗಳು ಚೆನ್ನಾಗಿ ಮೂಡಿಬಂದಿವೆ.