- ಡಿಸೆಂಬರ್ ನಲ್ಲಿ ರಿಲೀಸ್ ಆದ ಖ್ಯಾತ ನಟರ ಚಿತ್ರಗಳು ಬಿಗ್ ಹಿಟ್
- ಸ್ಯಾಂಡಲ್ ವುಡ್ ಗೆ ವರವಾಗಿ ಪರಿಣಮಿಸಿದ ವರ್ಷಾಂತ್ಯ
- ಈ ವರ್ಷದ ಡಿಸೆಂಬರ್ ನಲ್ಲಿ ಕನ್ನಡ ಮೂರು ಬಹುನಿರೀಕ್ಷಿತ ಚಿತ್ರಗಳು ರಿಲೀಸ್
SANDALWOOD ಬೆಂಗಳೂರು: ವರ್ಷಾಂತ್ಯದ ಡಿಸೆಂಬರ್ ಮಾಸವು ಸ್ಯಾಂಡಲ್‌ವುಡ್‌ಗೆ ವರವಾಗಿ ಪರಿಣಮಿಸಿದೆ. ಕಳೆದ ಹತ್ತು ವರ್ಷಗಳಲ್ಲಿ ಈ ತಿಂಗಳಲ್ಲಿ ರಿಲೀಸ್ ಆದ ಬಹುತೇಕ ಸಿನಿಮಾಗಳು ಹಿಟ್ ಲಿಸ್ಟ್ ಸೇರಿವೆ. ‘ಮಿಸ್ಟರ್ ಆ್ಯಂಡ್ ಮಿಸೆಸ್ ರಾಮಾಚಾರಿ’, ‘ಕಿರಿಕ್ ಪಾರ್ಟಿ’, ‘ಕಾಟೇರ’, ‘ಮ್ಯಾಕ್ಸ್’ ಸೇರಿ ಈ ತಿಂಗಳು ರಿಲೀಸ್ ಆದ ಅನೇಕ ಚಿತ್ರಗಳು ಬ್ಲಾಕ್‌ಬಸ್ಟರ್ ಪಟ್ಟಿಗೆ ಸೇರಿವೆ. ಈ ಹಿನ್ನೆಲೆಯಲ್ಲಿ ಈ ವರ್ಷ ಕೂಡ ಖ್ಯಾತ ನಟರ ಮೂರು ಸಿನಿಮಾಗಳು ರಿಲೀಸ್ ಆಗುತ್ತಿದ್ದು, ಈ ಮೂಲಕ ವರ್ಷಾಂತ್ಯದ ವೈಬ್ ಸದುಪಯೋಗಪಡಿಸಿಕೊಳ್ಳಲು ಚಿತ್ರತಂಡಗಳು ಮುಂದಾಗುತ್ತಿವೆ.
ಕಳೆದ 10 ವರ್ಷದ ರಿಸಲ್ಟ್ ಏನು: ಕಳೆದ ವರ್ಷಗಳಲ್ಲಿ ಡಿಸೆಂಬರ್ ತಿಂಗಳು ರಿಲೀಸ್ ಆದ ಸಿನಿಮಾಗಳನ್ನು ಅವಲೋಕಿಸಿದಾಗ ಬಹುತೇಕ ಚಿತ್ರಗಳು ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿವೆ. ಯಶ್ ಅಭಿನಯದ ‘ಮಿಸ್ಟರ್ ಆ್ಯಂಡ್ ಮಿಸೆಸ್ ರಾಮಾಚಾರಿ’ ಚಿತ್ರವು 2014ರ ಡಿ.25ರಂದು ರಿಲೀಸ್ ಆಗಿ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿತ್ತು. ಹಾಗೆಯೇ, ‘ಮಾಸ್ಟರ್ ಪೀಸ್’ (2015), ರಕ್ಷಿತ್ ಶೆಟ್ಟಿ ಅಭಿನಯದ ‘ಕಿರಿಕ್ ಪಾರ್ಟಿ’ (2016), ಶಿವಣ್ಣರ ‘ಮಫ್ತಿ’, ಪುನೀತ್ ರಾಜಕುಮಾರ್ ಅಭಿನಯದ ‘ಅಂಜನಿಪುತ್ರ’, ಗಣೇಶ್ ಅವರ ‘ಚಮಕ್’ ಕೂಡ 2017ರ ವರ್ಷಾಂತ್ಯಕ್ಕೆ ತೆರೆಕಂಡಿದ್ದವು. ಇನ್ನು ಇಡೀ ಭಾರತೀಯ ಚಿತ್ರರಂಗವೇ ಕನ್ನಡ ಚಿತ್ರರಂಗದತ್ತ ನೋಡುವಂತೆ ಮಾಡಿದ್ದ ಯಶ್ ನಟನೆಯ ‘ಕೆಜಿಎ್ ಚಾಪ್ಟರ್ 1’ ಕೂಡ ರಿಲೀಸ್ ಆಗಿದ್ದು, 2018ರ ಡಿಸೆಂಬರ್‌ನಲ್ಲಿ. ಅಷ್ಟರ ಮಟ್ಟಿಗೆ ಡಿಸೆಂಬರ್ ಖ್ಯಾತ ನಟರಿಗೆ ನೆಚ್ಚಿನ ತಿಂಗಳಾಗಿದೆ. 2019ರಲ್ಲಿ ‘ಅವನೇ ಶ್ರೀಮನ್ನಾರಾಯಣ’ ತೆರೆಕಂಡಿತ್ತು. ಕರೊನಾ ಸಂಕಷ್ಟದಿಂದಾಗಿ 2020ರ ಡಿಸೆಂಬರ್‌ನಲ್ಲಿ ಯಾವುದೇ ಖ್ಯಾತ ನಟರ ಸಿನಿಮಾ ರಿಲೀಸ್ ಆಗಿರಲಿಲ್ಲ. ಬಳಿಕ 2021ರಲ್ಲಿ ‘ಮದಗಜ’, ಧನಂಜಯರ ‘ಬಡವ ರಾಸ್ಕಲ್’, 2022ರಲ್ಲಿ ‘ವೇದ’ ಹಾಗೂ 2023ರಲ್ಲಿ ‘ಕಾಟೇರ’ ಬಿಡುಗಡೆಯಾಗಿ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿದ್ದವು. ಇನ್ನು ಕಳೆದ ಇಡೀ ವರ್ಷ ಸ್ಯಾಂಡಲ್‌ವುಡ್ ಡಲ್ ಹೊಡೆದಿತ್ತು. ಆದರೆ, ವರ್ಷಾಂತ್ಯದಲ್ಲಿ ರಿಲೀಸ್ ಆಗಿದ್ದ ‘ಯುಐ’ ಹಾಗೂ ‘ಮ್ಯಾಕ್ಸ್’ ಚಿತ್ರಗಳು ಹೆಚ್ಚು ಪ್ರೇಕ್ಷಕರನ್ನು ಸಿನಿಮಾ ಮಂದಿರಕ್ಕೆ ಕರೆ ತಂದಿದ್ದವು.
ಖ್ಯಾತ ನಟರ ತ್ರಿಬಲ್ ಸಂಭ್ರಮ: ಇನ್ನು ವರ್ಷದ ಡಿಸೆಂಬರ್ ಆರಂಭವಾಗಿದ್ದು, ಮೊದಲ ವಾರ ಹೊಸಬರ 4 ಚಿತ್ರಗಳು ರಿಲೀಸ್ ಆಗುತ್ತಿವೆ. ಬಳಿಕ ಖ್ಯಾತ ನಟರ ಮೂರು ಚಿತ್ರಗಳು ಬ್ಯಾಕ್ ಟು ಬ್ಯಾಕ್ ಬಿಡುಗಡೆಯಾಗಲಿವೆ. ಇದೇ 11ರಂದು ದರ್ಶನ್ ಅಭಿನಯದ ‘ದ ಡೆವಿಲ್’ ಅದೃಷ್ಟ ಪರೀಕ್ಷೆಗೆ ಇಳಿದರೆ, ಮಾಸದ ಕೊನೆಯ ವಾರ 25ರಂದು ಶಿವಣ್ಣ, ಉಪೇಂದ್ರ, ರಾಜ್ ಬಿ. ಶೆಟ್ಟಿ ತಾರಾಗಣದ ‘45’ ಹಾಗೂ ಸುದೀಪ್ ಅಭಿನಯದ ‘ಮಾರ್ಕ್’ ಒಂದೇ ದಿನ ತೆರೆ ಕಾಣುತ್ತಿವೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಸುದೀಪ್‌ರ ‘ಮ್ಯಾಕ್ಸ್’ ರಿಲೀಸ್ ಮಾಡಿದ್ದ ದಿನವೇ ‘ಮಾರ್ಕ್’ ರಿಲೀಸ್ ಆಗುತ್ತಿರುವುದು ವಿಶೇಷ. ಹೀಗಾಗಿ, ಡಿಸೆಂಬರ್‌ನಲ್ಲಿ ಸ್ಯಾಂಡಲ್‌ವುಡ್‌ಗೆ ಸಿಹಿಯಾಗಿದೆ.
ವರ್ಷಾಂತ್ಯವೇ ಯಾಕೆ?: ವರ್ಷಾಂತ್ಯದ ಡಿಸೆಂಬರ್ ಸಿನಿಮಾ ಪ್ರಿಯರಿಗೆ ನೆಚ್ಚಿನ ಮಾಸ. ಈ ತಿಂಗಳು ಕ್ರಿಸ್ಮಸ್ ರಜೆ ಹಾಗೂ ಹೊಸ ವರ್ಷದ ವೈಬ್ ಇರುವ ಕಾರಣ ಹೆಚ್ಚಿನ ಜನರು ಥಿಯೇಟರ್‌ನತ್ತ ಧಾವಿಸುತ್ತಾರೆ. ಆ ಕಾರಣಕ್ಕೆ ಸಿನಿಮಾ ತಂಡಗಳು ಇದೇ ತಿಂಗಳು ಸಿನಿಮಾ ರಿಲೀಸ್‌ಗೆ ಮುಂದಾಗುತ್ತಾರೆ. ಇನ್ನು ಜನವರಿ, ಫೆಬ್ರವರಿಯಲ್ಲಿ ಕೆಲಸದ ಒತ್ತಡ ಹೆಚ್ಚಿರುತ್ತದೆ. ಮಾರ್ಚ್ ಬಳಿಕ ಪರೀಕ್ಷೆ, ಬೇಸಿಗೆ ರಜೆ, ಐಪಿಎಲ್, ಚುನಾವಣೆಗಳು ಬರುವ ಕಾರಣ ಡಿಸೆಂಬರ್‌ನಲ್ಲಿಯೇ ಸಿನಿಮಾ ರಿಲೀಸ್ ಮಾಡಲು ಮುಖ್ಯ ಕಾರಣ.