- ಸಿನಿಮಾದಲ್ಲಿ ಒಂದು ರೀತಿ ನಟ ದರ್ಶನ್ರದ್ದೇ ಎರಡು ವಿಭಿನ್ನ ಮುಖಗಳ, ವ್ಯಕ್ತಿತ್ವಗಳ ದರ್ಶನವಾಗುತ್ತಿದೆಯಾ ಅಂತ ಅನ್ನಿಸುವುದುಂಟು
- "ಡೆವಿಲ್'ನಲ್ಲಿ ದರ್ಶನ್ ದ್ವಿಪಾತ್ರದಲ್ಲಿ ನಟಿಸಿದ್ದಾರೆ.
- ಅಜನೀಷ್ ಲೋಕನಾಥ್ ಹಿನ್ನೆಲೆ ಸಂಗೀತ ಮತ್ತು ಹಾಡುಗಳು ಚಿತ್ರಕ್ಕೆ ಪ್ಲಸ್ ಆಗಿವೆ.
- ದರ್ಶನ್ ಫ್ಯಾನ್ಸ್ಗಾಗಿಯೇ ಪ್ರಕಾಶ್ ವೀರ್ ಈ ಸಿನಿಮಾ ಮಾಡಿದಂತಿದೆ.
ತಾರಾಗಣ: ದರ್ಶನ್, ರಚನಾ ರೈ, ಅಚ್ಯುತ್ ಕುಮಾರ್, ಮಹೇಶ್ ಮಂಜ್ರೇಕರ್, ಹುಲಿ ಕಾರ್ತಿಕ್, ಗಿಲ್ಲಿ ನಟ, ರೋಜರ್ ನಾರಾಯಣ್, ವಿನಯ್, ಚಂದು ಮತ್ತಿತರರು
ಹೀರೋಗೆ ಬಿಲ್ಡಪ್ ಕೊಡಲು ಒಂದು ಮಾಸ್ ಡೈಲಾಗ್ ಇಡುವುದು ಅಥವಾ ಸೀನ್ ಸೃಷ್ಟಿಸುವುದು ಸಾಮಾನ್ಯ. ಬಜೆಟ್ ಹೆಚ್ಚಿದ್ದರೆ ಒಂದು ಹಾಡನ್ನೋ ಅಥವಾ ಆ್ಯಕ್ಷನ್ ಸನ್ನಿವೇಶವನ್ನೋ ಇಡುವುದೂ ಕಾಮನ್. ಆದರೆ, ಆ ನಾಯಕನ ಅಭಿಮಾನಿಗಳಿಗಾಗಿ, ಆ ನಟನನ್ನು ಸಂಭ್ರಮಿಸಲೆಂದೇ ಬಿಲ್ಡಪ್ ಸಿನಿಮಾ ಮಾಡುವುದು ಇದೆಯಲ್ಲಾ ಅದು ದರ್ಶನ್ ಅವರಂತಹ ಕ್ರೇಜ್ ಇರುವ ನಟರಿಗೆ ಮಾತ್ರ ಸಾಧ್ಯ. ಆದರೂ, ಸದ್ಯದ ಪರಿಸ್ಥಿತಿಗಳಿಂದಾಗಿ "ಡೆವಿಲ್' ಸಿನಿಮಾ ದರ್ಶನ್ ನಟನೆ, ಸಂಭಾಷಣೆ, ಸನ್ನಿವೇಶಗಳು ಅವರ ನೈಜ ವ್ಯಕ್ತಿತ್ವ, ಪರಿಸ್ಥಿತಿ ಮತ್ತು ಟನೆಗಳನ್ನು ನೆನಪಿಸುತ್ತಾ ಹೋಗುತ್ತದೆ. ಸಿನಿಮಾದಲ್ಲಿ ಒಂದು ರೀತಿ ನಟ ದರ್ಶನ್ರದ್ದೇ ಎರಡು ವಿಭಿನ್ನ ಮುಖಗಳ, ವ್ಯಕ್ತಿತ್ವಗಳ ದರ್ಶನವಾಗುತ್ತಿದೆಯಾ ಅಂತ ಅನ್ನಿಸುವುದುಂಟು (2019ರ ಲೋಕಸಭಾ ಚುನಾವಣೆ ಪ್ರಚಾರದ ಸಮಯದಲ್ಲಿ ಮಂಡ್ಯದಲ್ಲಿ ಖುದ್ದು ದರ್ಶನ್ ತಮಗೆ ಎರಡು ಮುಖಗಳಿವೆ ಎಂದು ಹೇಳಿದ್ದರು).
ಆತ ಧನುಷ್ (ದರ್ಶನ್). ಸಿಎಂ ರಾಜಶೇಖರನ (ಮಹೇಶ್) ಏಕೈಕ ಸುಪುತ್ರ. ಪುತ್ರನ ಆಟಾಟೋಪ ತಾಳಲಾರದೇ ಅಪ್ಪ ಆತನನ್ನು ಹೊರದೇಶಕ್ಕೆ ಕಳುಹಿಸಿರುತ್ತಾರೆ. ಹಣಬಲದ ಮದವೇರಿರುವ ಮಗನಿಗೆ ಅಲ್ಲೂ ಬ್ರೇಕ್ ಬೀಳುವುದಿಲ್ಲ. ಮೂರನೇ ಬಾರಿ ಸಿಎಂ ಆಗಿರುವ ಕಸದ ಕಾಂಟ್ರಾ$್ಯಕ್ಟರ್ ರಾಜಶೇಖರನಿಗೆ ಕುರ್ಚಿಯ ಮೇಲೆ ಎಲ್ಲಿಲ್ಲದ ಆಸೆ. ಆದರೆ, ಆತನನ್ನು ಕುರ್ಚಿಯಿಂದ ಕೆಳಗೆ ಇಳಿಸಲೇಬೇಕೆಂದು ಪಣತೊಡುವ ರಾಜಶೇಖರ್ ತಂಗಿ ಮಕ್ಕಳು, ವಿಪಕ್ಷ ನಾಯಕ ಪಾಟೀಲ ಒಂದಾಗಿ ಪಿತೂರಿ ಹೂಡುತ್ತಾರೆ. ಭ್ರಷ್ಟಾಚಾರ ಆರೋಪದಿಂದಾಗಿ ರಾಜಶೇಖರ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾಗುತ್ತದೆ. ಆಗ ಮಗನನ್ನು ಸಿಎಂ ಮಾಡಲು ಆತ ನಿರ್ಧರಿಸುತ್ತಾನೆ. ಆದರೆ, ಆತ ಬರಲೊಪ್ಪದ ಕಾರಣ ಸಿಎಂ ಬಂಟ "ಚಾಣಕ್ಯ' ಅನಂತ ನಂಬಿಯಾರ್ (ಅಚ್ಯುತ್) ಧನುಷ್ನಂತೆಯೇ ಕಾಣುವ ಹೋಟೆಲ್ ಮಾಲೀಕ ಕೃಷ್ಣನನ್ನು (ದರ್ಶನ್) ಕರೆತರುತ್ತಾನೆ. ಕೃಷ್ಣನಿಗೋ ನಟನಾಗುವ ಆಸೆ. ಸೌಟು ಬಿಟ್ಟು ಕಟೌಟ್ ಹಾಕಿಸಿಕೊಳ್ಳುವ ಕನಸು. ಇತ್ತ ಡೂಪ್ಲಿಕೇಟ್ ಧನುಷ್ ಆಗಿ ಕೃಷ್ಣ ಎಂಟ್ರಿ ಕೊಟ್ಟ ಬೆನ್ನಲ್ಲೇ, ಅತ್ತ ಒರಿಜಿನಲ್ ಧನುಷ್ ಕೂಡ ಭಾರತಕ್ಕೆ ವಾಪಸ್ಸಾಗುತ್ತಾನೆ. ಮುಂದೆ? "ಡೆವಿಲ್' ನೋಡಿ.
"ಡೆವಿಲ್'ನಲ್ಲಿ ದರ್ಶನ್ ದ್ವಿಪಾತ್ರದಲ್ಲಿ ನಟಿಸಿದ್ದು, ಎರಡು ವಿಭಿನ್ನ ಲುಕ್, ಮ್ಯಾನರಿಸಂ, ಬಾಡಿ ಲಾಂಗ್ವೇಜ್, ಡೈಲಾಗ್ ಡೆಲಿವರಿ ಮೂಲಕ ಚಿತ್ರವನ್ನು ಹೆಗಲ ಮೇಲೆ ಹೊತ್ತೊಯ್ದಿದ್ದಾರೆ. ಖಡಕ್ ಒನ್ಲೈನರ್, ಭರ್ಜರಿ ನಟನೆ, ಭರಪೂರ ಆ್ಯಕ್ಷನ್ ಇದ್ದು ದರ್ಶನ್ ಅಭಿಮಾನಿಗಳಿಗೆ ಫುಲ್ ಮೀಲ್ಸ್ ಸವಿದ ಖುಷಿ. ರಚನಾ ರೈ ಪಾತ್ರಕ್ಕೆ ತಕ್ಕಂತೆ ನಟಿಸಿದ್ದು, ಚಾಣಕ್ಯನಾಗಿ ಅಚ್ಯುತ್ ಮತ್ತು ಸಿಎಂ ಪಾತ್ರದಲ್ಲಿ ಮಹೇಶ್ ಮಂಜ್ರೇಕರ್ ಗಮನ ಸೆಳೆಯುತ್ತಾರೆ. ಉಳಿದ ಪಾತ್ರಗಳೂ ಅಚ್ಚುಕಟ್ಟಾಗಿ ಮೂಡಿಬಂದಿವೆ. ಅಜನೀಷ್ ಲೋಕನಾಥ್ ಹಿನ್ನೆಲೆ ಸಂಗೀತ ಮತ್ತು ಹಾಡುಗಳು ಚಿತ್ರಕ್ಕೆ ಪ್ಲಸ್ ಆಗಿವೆ. ಛಾಯಾಗ್ರಾಹಕ ಸುಧಾಕರ್ ರಾಜ್ ಮತ್ತುಕಲಾನಿರ್ದೇಶಕ ಮೋಹನ್ ಬಿ.ಕೆರೆ ಚಿತ್ರವನ್ನು ತೆರೆಯ ಮೇಲೆ ಮತ್ತಷ್ಟು ಅದ್ಧೂರಿಯಾಗಿಸಿದ್ದಾರೆ. ದರ್ಶನ್ ಫ್ಯಾನ್ಸ್ಗಾಗಿಯೇ ಪ್ರಕಾಶ್ ವೀರ್ ಈ ಸಿನಿಮಾ ಮಾಡಿದಂತಿದೆ. ಹೀಗಾಗಿಯೇ ಅವರ ಅಭಿಮಾನಿಗಳು "ಡೆವಿಲ್' ಮಿಸ್ ಮಾಡಿಕೊಳ್ಳುವಂತಿಲ್ಲ!