ಕೋಸ್ಟಲ್ವುಡ್ ಸೂಪರ್ಸ್ಟಾರ್ ಅರ್ಜುನ್ ದೇವ್ ನಟಿಸಿ, ನಿರ್ದೇಶಿಸಿರುವ ಸಿನಿಮಾ "ಟಾಸ್'. ಇದು ರೊಮ್ಯಾಂಟಿಕ್ ಕಾಮಿಡಿ ಆ್ಯಕ್ಷನ್ ಡ್ರಾಮಾ ಚಿತ್ರವಾಗಿದ್ದು, ಸೆ. 18ಕ್ಕೆ ರಾಜ್ಯಾದ್ಯಂತ ಕನ್ನಡ ಮತ್ತು ತುಳು ಭಾಷೆಗಳಲ್ಲಿ ರಿಲೀಸ್ ಆಗಲಿದೆ. "ಪಿಚ್ಚರ್' ಸಿನಿಮಾ ನಿರ್ಮಿಸಿದ್ದ ನಟ ಗೋಲ್ಡನ್ ಸ್ಟಾರ್ ಗಣೇಶ್ ಪತ್ನಿ ಶಿಲ್ಪಾ, ಇದೀಗ "ಗೋಲ್ಡನ್ ಮೂವೀಸ್' ಬ್ಯಾನರ್ನಲ್ಲಿ "ಟಾಸ್'ಅನ್ನು ಅರ್ಪಿಸುತ್ತಿದ್ದಾರೆ. ಇತ್ತೀಚೆಗಷ್ಟೆ ಚಿತ್ರದ ನಾಗಾರ್ಜುನ್ ಶರ್ಮಾ ಸಾಹಿತ್ಯ, ಮಣಿಕಾಂತ್ ಕದ್ರಿ ಸಂಗೀತದಲ್ಲಿ ಮೂಡಿಬಂದಿರುವ "ಬೇಡ ಯಾವ ಸುಂದರಿ' ಎಂದು ಸಾಗುವ ರೊಮ್ಯಾಂಟಿಕ್ ಸಾಂಗ್ ಬಿಡುಗಡೆ ಮಾಡಲಾಗಿದ್ದು, ಅರ್ಜುನ್ ಮತ್ತು ನಾಯಕಿ ಸುತೇಜ್ ಶೆಟ್ಟಿ ಕುಣಿದು ಕುಪ್ಪಳಿಸಿದ್ದಾರೆ. ರಂಗಭೂಮಿ ಮತ್ತು ತುಳು ಚಿತ್ರರಂಗದ ದಿಗ್ಗಜ ಡಾ. ದೇವದಾಸ್ ಕಾಪಿಕಾಡ್ ಮಗನ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ಸಾಹಿತ್ಯ ಬರೆದು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದ ಬಗ್ಗೆ, "ಅರ್ಜುನ್ ಮನೆಯಲ್ಲಿ ನನಗೆ ಮಗ. ಕೆಲಸದ ವಿಷಯದಲ್ಲಿ ನನಗಿಂತ ಒಂದು ಹೆಜ್ಜೆ ಮುಂದೆ. ಅತ್ಯುತ್ತಮ ತಂತ್ರಜ್ಞ. ಹೀಗಾಗಿ ನಾನು ಚಿತ್ರದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದೇ ಆತನ ಹಿಂದೆ ನಿಂತೆ' ಎಂದು ಪುತ್ರನ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಹಿರಿಯ ನಟ ದೇವದಾಸ್ ಕಾಪಿಕಾಡ್ ಮೇಲಿನ ಗೌರವ ಮತ್ತು ಚಿತ್ರದ ಕಂಟೆಂಟ್ ನೋಡಿ ಅರ್ಜುನ್ರನ್ನು ಕನ್ನಡಕ್ಕೆ ನಾಯಕನನ್ನಾಗಿ ಪರಿಚಯಿಸುತ್ತಿದ್ದಾರೆ. ಇತ್ತೀಚೆಗಷ್ಟೆ ನಟ ಶಿವರಾಜಕುಮಾರ್ "ಟಾಸ್' ಝಲಕ್ ನೋಡಿ ತಂಡಕ್ಕೆ ಶುಭಹಾರೈಸಿದ್ದಾರೆ. ಅರ್ಜುನ್, ಸುತೇಜ್, ದೇವದಾಸ್ ಜತೆ ಗರುಡ ರಾಮ್, ಬಾಲಾಜಿ ಮನೋಹರ್, ಕೃತಿ ಶೆಟ್ಟಿ, ನವೀನ್ ಡಿ. ಪಡೀಲ್, ಅರವಿಂದ್ ಬೋಳಾರ್, ಭೋಜರಾಜ ವಾಮಂಜೂರು, ಶಶಿರಾಜ್ ಪ್ರಮುಖ ತಾರಾಗಣದಲ್ಲಿದ್ದಾರೆ. ಉಳಿದಂತೆ ಜೋಯೆಲ್ ಡಿಸೋಜಾ ಛಾಯಾಗ್ರಹಣ, ಯಾಶ್ವಿನ್ ಕೆ. ಶೆಟ್ಟಿಗಾರ್ ಸಂಕಲನದಲ್ಲಿ "ಟಾಸ' ಮೂಡಿಬಂದಿದೆ.