ಲಕ್ಷ್ಮೀಪುತ್ರ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ ನಟ ಶಿವರಾಜಕುಮಾರ್, ಚಿಕ್ಕಣ್ಣನ ಅಭಿನಯಕ್ಕೆ ಮನಸೋತು, "ಚಿಕ್ಕಣ್ಣ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಾರೆ, ಸ್ಟಾರ್ ಆಗುತ್ತಾರೆ' ಎಂದಿದ್ದರು. "ಲಕ್ಷ್ಮೀಪುತ್ರ' ನೋಡಿದವರಿಗೆ ಶಿವಣ್ಣ ಮಾತು ಅಕ್ಷರಶಃ ನಿಜ ಅನ್ನಿಸದೇ ಇರದು. ಹಾಗಾದರೆ, ಹೇಗಿದೆ ಸಿನಿಮಾ?
ಆತ ಮಂಡ್ಯದ ಕೆರಗೋಡಿನಲ್ಲಿ ಮೊಬೈಲ್ ಅಂಗಡಿ ನಡೆಸುವ ಕೃಷ್ಣ (ಚಿಕ್ಕಣ್ಣ). ಅಪ್ಪನಿಲ್ಲ, ಅಮ್ಮ ಲಕ್ಷ್ಮೀನೇ (ತಾರಾ) ಎಲ್ಲ. ಲಕ್ಷ್ಮೀಗೂ ಮಗನೆಂದರೆ ಪ್ರಾಣ. ರಾತ್ರೋರಾತ್ರಿ ಹಲವರ ಎತ್ತುಗಳನ್ನು ಕದ್ದೊಯ್ಯುವ ಮಗನ ಪರವಹಿಸಿ, ಊರಿನವರಿಗೆ ಬುದ್ಧಿ ಹೇಳುವಷ್ಟು ಮುಗ್ಧೆ. ಆದರೆ, ಈತನೋ ಪೋಲಿಗಳ "ಉಪಾಧ್ಯಕ್ಷ'. ಮಗನಿಗೆ ಹುಡುಗಿ ಹುಡುಕಲು ಲಕ್ಷ್ಮೀ ಬ್ರೋಕರ್ಗಳ ಹಿಂದೆ ಬಿದ್ದಿದ್ದರೆ, "ನಾನು ಲವ್ ಮ್ಯಾರೇಜೇ ಆಗದು' ಅಂತ ಕಳ್ಳ ಕೃಷ್ಣ, ಊರಿನ ಹುಡುಗಿಯರ ಹಿಂದೆ ಬಿದ್ದಿರುತ್ತಾನೆ. ಗೆಳೆಯರಾದ ಕೇದಾರ ಮತ್ತು ಸುಕೇಶ್ ಜತೆ ಸೇರಿ ಊರಿನ ಎಲ್ಲ ಹೆಣ್ಣುಮಕ್ಕಳಿಗೂ ಪ್ರಪೋಸ್ ಮಾಡುತ್ತಿರುತ್ತಾನೆ. ಒಮ್ಮೆ ಮೂವರೂ ಕಂಠಪೂರ್ತಿ ಕುಡಿದು ಊಟಕ್ಕೆ ಕಾಸಿಲ್ಲ ಅಂತ ಮದುವೆ ಮಂಟಪಕ್ಕೆ ನುಗ್ಗುತ್ತಾರೆ. ಅಲ್ಲಿ ಭರ್ಜರಿ ಊಟದ ಜತೆಗೆ ಸುಂದರಿ ಗೌರಿ (ವಂದಿತ) ಎದುರಾಗುತ್ತಾಳೆ. ಅಲ್ಲಿಂದ ಕೃಷ್ಣ, ಗೌರಿಯ ಹಿಂದೆ ಬೀಳುತ್ತಾನೆ. ಅತ್ತ ಗೌರಿಗೆ ಹತ್ತಿರವಾದಂತೆ, ಇತ್ತ ಲಕ್ಷ್ಮೀಯಿಂದ ದೂರವಾಗುತ್ತಾನೆ. ಹಾಗಾದರೆ, ಮುಂದೆ? ಕೃಷ್ಣ ಗೌರಿಯನ್ನು ಮದುವೆಯಾಗುತ್ತಾನಾ? ಆ ಮದುವೆಯನ್ನು ಲಕ್ಷ್ಮೀ ಒಪ್ಪುತ್ತಾರಾ? ಅಥವಾ ಗೌರಿಯೇ ಕೃಷ್ಣನಿಗೆ ಕೈಕೊಡುತ್ತಾಳಾ? ಲಕ್ಷ್ಮೀಪುತ್ರ ನೋಡಿ.
"ಅಧ್ಯಕ್ಷ', "ಉಪಾಧ್ಯಕ್ಷ', "ಅಯೋಗ್ಯ' ಸರಣಿಯಂತೆಯೇ "ಲಕ್ಷ್ಮೀಪುತ್ರ' ಕೂಡ ಮಂಡ್ಯದ ಊರೊಂದರಲ್ಲಿ ನಡೆಯುವ ಕಥೆ. ಕಾಮಿಡಿ ಕಚಗುಳಿ ಇಟ್ಟು, ದ್ವೀತಿಯಾರ್ಧದಲ್ಲಿ ಎಮೋಷನಲ್ ಆಗಿಸುತ್ತದೆ. ಎರಡೂವರೆ ತಾಸು ಬೋರ್ ಆಗದಂತೆ ನೋಡಿಸಿಕೊಂಡು ಹೋಗುವ "ಲಕ್ಷ್ಮೀಪುತ್ರ' ಮೂಲಕ ನಿರ್ದೇಶಕ ವಿಜಯ್ ಸ್ವಾಮಿ ಚೊಚ್ಚಲ ಚಿತ್ರದಲ್ಲೇ ಒಳ್ಳೆ ಕಮರ್ಷಿಯಲ್ ಕಥೆ ಹೆಣೆದಿದ್ದಾರೆ. ಅಲ್ಲಲ್ಲಿ ಡಬಲ್ ಮೀನಿಂಗ್ ಇದ್ದರೂ, ಒನ್ಲೈನರ್ಗಳು ಹಾಗೂ ಅರ್ಥಪೂರ್ಣ ಸಂಭಾಷಣೆಗಳು ಹೆಚ್ಚು ಗಮನ ಸೆಳೆಯುತ್ತವೆ. ಅರ್ಜುನ್ ಜನ್ಯ ಸಂಗೀತದಲ್ಲಿ "ಅಮ್ಮನ ಹಾಡು' ಮತ್ತು "ಇನ್ಮೇಲೆ' ಸುಂದರವಾಗಿ ಮೂಡಿಬಂದಿವೆ. ಚಿಕ್ಕಣ್ಣ "ನ್ಯಾಚುರಲ್' ನಟನೆಯ ಮೂಲಕ ಹೀರೋ ಆಗಿ ನಿಲ್ಲುವ ನಿರೀಕ್ಷೆ ಹೆಚ್ಚಿಸಿದ್ದಾರೆ. ನಾಯಕಿ ವಂದಿತ ವಿಭಿನ್ನ ಶೇಡ್ಗಳಲ್ಲಿ ಮಿಂಚಿದ್ದಾರೆ. ಕುರಿ ಪ್ರತಾಪ್, ಧರ್ಮಣ್ಣ, ಗಿರಿ, ಶಿವರಾಜ್ ಕೆಆರ್ ಪೇಟೆ, ಅನಂತು, ಸುಕೇಶ್ ಜತೆ ನಗಿಸುತ್ತಾರೆ. ಕನ್ನಡ ಚಿತ್ರರಂಗದ ಸ್ಟಾರ್ಗಳ "ಅಮ್ಮ' ತಾರಾ ಮುಗ್ಧೆ ಲಕ್ಷ್ಮೀಯಾಗಿ ಎಲ್ಲರಿಗಿಂತ ಹೆಚ್ಚು ಆಪ್ತರಾಗುತ್ತಾರೆ. ಒಟ್ಟಾರೆ "ಲಕ್ಷ್ಮೀಪುತ್ರ' ಒಂದೊಳ್ಳೆ ಸಿನಿಮಾ ನೋಡಿದ ಸಮಾಧಾನ ನೀಡುತ್ತದೆ.