‘ಟಾಕ್ಸಿಕ್’ ಸಿನಿಮಾ ನೋಡಲು ಕಂದಮ್ಮನಿಗೂ ಎಂಟ್ರಿ?
ವೈರಲ್: ರಾಕಿಂಗ್ ಸ್ಟಾರ್ ಯಶ್ ಮತ್ತು ಕಿಯಾರಾ ಅಡ್ವಾಣಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಬಹುನಿರೀಕ್ಷಿತ 'ಟಾಕ್ಸಿಕ್' (Toxic) ಸಿನಿಮಾ ಇಂದು ಅಧಿಕೃತವಾಗಿ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿದೆ. ಸಿನಿಮಾ ನೋಡಲು ಅಭಿಮಾನಿಗಳು ಹರಿದುಬರುತ್ತಿದ್ದು, ಚಿತ್ರಮಂದಿರಗಳಲ್ಲಿ ಹಬ್ಬದ ವಾತಾವರಣವಿದೆ.
ಆದರೆ, ಈ ಸಂಭ್ರಮದ ನಡುವೆ ಸೋಷಿಯಲ್ ಮೀಡಿಯಾದಲ್ಲಿ ಅಪ್ರಾಪ್ತ ಹುಡುಗನೊಬ್ಬ (Minor in Toxic) ಟಾಕ್ಸಿಕ್ ಸಿನಿಮಾಗೆ ಪ್ರವೇಶ ಪಡೆದಿರುವುದು ಚರ್ಚೆಗೆ ಗ್ರಾಸವಾಗಿದೆ.
ಹೌದು, 'ಟಾಕ್ಸಿಕ್' ಸಿನಿಮಾವು ಸಂಪೂರ್ಣ ಆಕ್ಷನ್ ಮತ್ತು ಹಿಂಸಾತ್ಮಕ ದೃಶ್ಯಗಳನ್ನೊಳಗೊಂಡಿರುವ ಕಾರಣ ಈ ಸಿನಿಮಾ 'ಎ' ರೇಟಿಂಗ್ ಎಂದರೆ ಕೇವಲ 18 ವರ್ಷ ಮೇಲ್ಪಟ್ಟ ವಯಸ್ಕರು ಮಾತ್ರ ವೀಕ್ಷಿಸಲು ಸೆನ್ಸಾರ್ ಪರವಾನಗಿ ನೀಡಿದೆ. ಹೀಗಿದ್ದರೂ, ಕೆಲವರು ಪುಟ್ಟ ಮಕ್ಕಳನ್ನು ಜೊತೆಯಲ್ಲಿ ಕರೆದುಕೊಂಡು ಥಿಯೇಟರ್‌ಗೆ ಬಂದಿರುವುದು ಈಗ ಆನ್‌ಲೈನ್‌ನಲ್ಲಿ ದೊಡ್ಡ ವಿವಾದಕ್ಕೆ ಕಾರಣವಾಗಿದೆ.
ಥಿಯೇಟರ್ ಒಳಗೆ ಮಹಿಳೆಯೊಬ್ಬರ ಮಡಿಲಲ್ಲಿ ಕುಳಿತಿದ್ದ ಕಂದಮ್ಮನ ಫೋಟೋವೊಂದು ವೈರಲ್ ಆಗುತ್ತಿದ್ದಂತೆ, ನೆಟ್ಟಿಗರು ಪೋಷಕರ ಜವಾಬ್ದಾರಿಯ ಬಗ್ಗೆ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.
ಪಕ್ಕದಲ್ಲೇ ಮಗು, ಆತಂಕಗೊಂಡ ಪ್ರೇಕ್ಷಕ!
ವಿಶಾಲ್ ಎಂಬ ಎಕ್ಸ್ (X) ಬಳಕೆದಾರರು ಥಿಯೇಟರ್ ಒಳಗೆ ತಮಗೆ ಆದ ಅನುಭವವನ್ನು ಹಂಚಿಕೊಂಡಿದ್ದಾರೆ. ಒಂದು ಪುಟ್ಟ ಮಗು ನನ್ನ ಪಕ್ಕದಲ್ಲೇ ಕುಳಿತಿರುವುದರಿಂದ ನನ್ನ ಥಿಯೇಟರ್ ಅನುಭವದ ಆತಂಕ ಹೆಚ್ಚಾಗಿದೆ.
ಇದು ಹಿಂಸೆಯಿಂದ ಕೂಡಿದ ವಯಸ್ಕರ 'ಎ' ರೇಟಿಂಗ್ ಸಿನಿಮಾ. ದಯವಿಟ್ಟು ಪೋಷಕರೇ, ನಿಮ್ಮ ಮಕ್ಕಳನ್ನು ಇಂತಹ ಸಿನಿಮಾಗಳಿಗೆ ಕರೆತರುವುದನ್ನು ನಿಲ್ಲಿಸಿ! ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ, ಹಲವರು ಪೋಷಕರ ಈ ಬೇಜವಾಬ್ದಾರಿತನವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ನೆಟ್ಟಿಗರ ರಿಯಾಕ್ಷನ್ ಹೇಗಿದೆ?
ಒಬ್ಬ ಬಳಕೆದಾರ ತಮಾಷೆಯಾಗಿ, ಆ ಮಗುವಿಗೆ ಅಕ್ಷರ ಅಭ್ಯಾಸ ಮಾಡುವ ಮೊದಲೇ ಬೇರೆಯದನ್ನೇ ಕಲಿಯಲ್ಲಿದ್ದಾನೆಂದು ಹೇಳಿದ್ದಾರೆ.
ಪ್ರವೇಶದ್ವಾರದಲ್ಲೇ ವಯಸ್ಸಿನ ನಿರ್ಬಂಧಗಳನ್ನು ಕಟ್ಟುನಿಟ್ಟಾಗಿ ಪರಿಶೀಲಿಸಬೇಕು. ಪಿವಿಆರ್ ಅಥವಾ ಮಲ್ಟಿಪ್ಲೆಕ್ಸ್ ಸಿಬ್ಬಂದಿ ಇಂತಹ ವಿಷಯಗಳಲ್ಲಿ ನಿರ್ಲಕ್ಷ್ಯ ತೋರಬಾರದು ಎಂದು ಇನ್ನೊಬ್ಬರು ಆಗ್ರಹಿಸಿದ್ದಾರೆ.
ಇದೇ ರೀತಿಯ ಘಟನೆಗಳಿಂದಾಗಿ ಮುಂದಿನ ದಿನಗಳಲ್ಲಿ ಸೆನ್ಸಾರ್ ಮಂಡಳಿಯು ಸಿನಿಮಾಗಳ ಮೇಲೆ ಮತ್ತಷ್ಟು ಕಠಿಣ ನಿಯಮಗಳನ್ನು ಹೇರಬೇಕಾಗುತ್ತದೆ" ಎಂದು ಇನ್ನೊಬ್ಬರು ಎಚ್ಚರಿಸಿದ್ದಾರೆ, (ಏಜನ್ಸೀಸ್).