ಬೆಂಗಳೂರು : ಚಿಕ್ಕಮಗಳೂರಿನ ಕೊಪ್ಪ ಮೂಲದ ಯುವ ನಟಿ ದೇವಿಕಾ ಭಟ್‌ಗೆ ಗೋಲ್ಡನ್ ಚಾನ್ಸ್ ಒದಗಿ ಬಂದಿದೆ. ಮಂಗಳೂರಿನಲ್ಲಿ ಪದವಿ ಪೂರ್ಣಗೊಳಿಸಿ, ಉನ್ನತ ವ್ಯಾಸಂಗಕ್ಕೆಂದು ಬೆಂಗಳೂರಿಗೆ ಬಂದ ಅವರಿಗೆ ಬಂಗಾರದ ಅವಕಾಶ ದೊರಕಿ, ಗಣೇಶ್ ಅಭಿನಯದ ‘ಬೃಂದಾವಿಹಾರಿ’ ಚಿತ್ರಕ್ಕೆ ನಾಯಕಿಯಾಗಿದ್ದರು. ಶ್ರೀನಿವಾಸರಾಜು ನಿರ್ದೇಶನದ ಈ ಸಿನಿಮಾ ಈಗಾಗಲೇ ಸಾಂಗ್‌ಗಳ ಮೂಲಕ ಸದ್ದು ಮಾಡಿದ್ದು, ಇದೇ 16ರಂದು ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ಸದ್ಯ ಪ್ರಚಾರದಲ್ಲಿ ಬಿಜಿ ಇದ್ದು, ಅದರ ಮಧ್ಯೆಯೇ ದೇವಿಕಾ ‘ವಿಜಯವಾಣಿ’ ಜತೆ ಮಾತಿಗೆ ಸಿಕ್ಕರು.
‘ಶಾಲೆ ಮತ್ತು ಕಾಲೇಜು ದಿನಗಳಿಂದಲೂ ನಾನು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮುಂದಿದ್ದೆ. ಸಿನಿಮಾ ಬಗ್ಗೆ ಮೊದಲಿನಿಂದಲೂ ಇಂಟರೆಸ್ಟ್ ಇತ್ತು. ಬೆಂಗಳೂರಿನಲ್ಲಿ ಓದುತ್ತಿರುವಾಗಲೇ ನನ್ನ ಫೋಟೋಗಳನ್ನು ನಿರ್ದೇಶಕ ಶ್ರೀನಿವಾಸರಾಜು ನೋಡಿದ್ದಾರೆ. ಅವರಿಗೆ ಇಷ್ಟವಾಗಿ, ಪಾತ್ರಕ್ಕೆ ಸೂಕ್ತವಾಗಬಹುದೆಂದು ಆಫೀಸ್‌ಗೆ ಬರಹೇಳಿದ್ದರು. ಅಂತೆಯೇ ನಾನೂ ಹೋಗಿ ಅವರನ್ನು ಭೇಟಿ ಮಾಡಿ ಬಂದೆ. ದೊಡ್ಡ ಬ್ಯಾನರ್ ಸಿನಿಮಾ ಆದ ಕಾರಣ ನಾನು ಆಯ್ಕೆಯಾಗುತ್ತೇನೆ ಅಂತ ನಿರೀಕ್ಷೆ ಇರಲಿಲ್ಲ. ಎರಡು ದಿನಗಳಾದ ಬಳಿಕ ಪಾತ್ರಕ್ಕೆ ಆಯ್ಕೆಯಾಗಿದ್ದೀರಿ ಸಂದೇಶ ಬಂತು. 15 ಕಲಾವಿದರಲ್ಲಿ ‘ರಾಧಾ’ ಪಾತ್ರಕ್ಕೆ ಕೊನೆಗೆ ನಾನೇ ಆಯ್ಕೆಯಾದೆ. ಯಾವುದೇ ಆಡಿಷನ್ ಮಾಡಿಲ್ಲ. ಚಿತ್ರತಂಡ ನನ್ನ ಮೇಲೆ ನಂಬಿಕೆ ಇಟ್ಟಿದ್ದರಿಂದ ಜವಾಬ್ದಾರಿ ಜತೆಗೆ ಭಯನೂ ಇತ್ತು. ಸಿನಿಮಾ ಆರಂಭಕ್ಕೂ ಮುನ್ನ ಒಂದು ತಿಂಗಳು ವರ್ಕ್‌ಶಾಪ್ ಮಾಡಿದೆವು. ಆ ಸಮಯದಲ್ಲಿ ಶ್ರೀನಿವಾಸ್ ಸರ್ ಅಭಿನಯದ ಬಗ್ಗೆ ತುಂಬಾ ಹೇಳಿಕೊಟ್ಟರು. ಶೂಟ್‌ಗೆ ಹೋದಾಗ ಅದು ಸಹಕಾರಿಯಾಯಿತು’ ಎಂದು ಮಾಹಿತಿ ನೀಡುತ್ತಾರೆ.
‘ಬೃಂದಾವಿಹಾರಿ’ ಚಿತ್ರದ ಅನುಭವದ ಬಗ್ಗೆ ನಟಿ ದೇವಿಕಾ ಭಟ್, ‘ಮೊದಲ ಚಿತ್ರದಲ್ಲಿಯೇ ಕನ್ನಡದ ಸ್ಟಾರ್ ನಟ ಗಣೇಶ್ ಸರ್ ಹಾಗೂ ಅತ್ಯುತ್ತಮ ನಿರ್ದೇಶಕರ ಜತೆ ಕೆಲಸ ಮಾಡಿದ ದೊಡ್ಡ ಖುಷಿಯಿದೆ. ನನ್ನಂತಹ ಅನನುಭವಿಗೆ ಇಡೀ ತಂಡ ಬೆಂಬಲವಾಗಿ ನಿಂತಿತ್ತು. ಎಂದಿಗೂ ನನ್ನನ್ನು ಹೊಸಬಳು ಎಂದು ಅವರು ಭಾವಿಸಲಿಲ್ಲ. ಸಾಕಷ್ಟು ಹೇಳಿಕೊಟ್ಟಿದ್ದಾರೆ. ಪಾತ್ರದ ನಿರ್ವಹಣೆ ಮೊದಲಿಗೆ ಕಷ್ಟ ಅನಿಸುತ್ತಿತ್ತು. ಆದರೆ, ದಿನ ಕಳೆದಂತೆ ಶೂಟಿಂಗ್ ವಾತಾವರಣಕ್ಕೆ ಹೊಂದಿಕೊಂಡಾಗ ಎಲ್ಲವೂ ಸುಲಭವಾಯಿತು. ಶ್ರೀಕೃಷ್ಣನ ಥೀಮ್‌ನಲ್ಲಿ ಈ ಸಿನಿಮಾ ಮೂಡಿಬರುತ್ತಿದ್ದು, ರಾಧೆಗೆ ಹೋಲುವ ಪಾತ್ರ ನನ್ನದು’ ಎಂದು ಹೇಳಿಕೊಳ್ಳುತ್ತಾರೆ. ವಿಶೇಷ ಅಂದರೆ, ತಾವು ನಟಿಸಿದ ಮೊದಲ ಸಿನಿಮಾ ‘ಬೃಂದಾವಿಹಾರಿ’ ರಿಲೀಸ್‌ಗೂ ಮುನ್ನವೇ ದೇವಿಕಾ ತೆಲುಗಿನ ‘ರಿಯಾಲ್ಟಿ’ ಎಂಬ ಚಿತ್ರಕ್ಕೆ ಆಯ್ಕೆಯಾಗಿದ್ದಾರೆ. ಕಳೆದ ಭಾನುವಾರವಷ್ಟೇ ಸಿನಿಮಾ ೋಷಣೆಯಾಗಿದ್ದು, ಅವರು ನಟ ಕಿರಣ್ ಅಬ್ಬಾವರಂಗೆ ನಾಯಕಿಯಾಗಿದ್ದಾರೆ.