ಚಿತ್ರ: ಬಿಂಗೋ
ನಿರ್ದೇಶನ: ಶಂಕರ್
ತಾರಾಗಣ: ಆರ್.ಕೆ.ಚಂದನ್, ರಕ್ಷಾ ನಿಂಬರ್ಗಿ, ರಾಜೇಶ್ ನಟರಂಗ, ಅಪೂರ್ವಶ್ರೀ, ಶ್ರವಣ್ ಕುಮಾರ್ ಮತ್ತಿತರರು
ಶಿವ ಸ್ಥಾವರಮಠ
‘ದುಡ್ಡು ಮಾಡು, ದುಡಿಯದಿದ್ದರೂ ಪರವಾಗಿಲ್ಲ ರೋಲ್‌ಕಾಲ್ ಮಾಡಿಯಾದರೂ ದುಡ್ಡು ಮಾಡು’ ಎಂದು ಪ್ರೇಯಸಿ ರಮೋಲಾ (ರಕ್ಷಾ), ರಾಜನಿಗೆ (ಚಂದನ್) ಹೇಳುತ್ತಾಳೆ. ಅಲ್ಲಿಯವರೆಗೂ ಏರಿಯಾಗೆ ನಾನೇ ಕಿಂಗ್ ಎಂದು ದುಡಿಯದೇ ಬದುಕುತ್ತಿದ್ದ ರಾಜನಿಗೆ ಆ ಮಾತು ನಾಟುತ್ತದೆ. ದುಡಿಯಲು ಡೆಲಿವರಿ ಬಾಯ್ ಆಗಿ ರಾಜ ಕೆಲಸ ಶುರು ಮಾಡುತ್ತಾನೆ. ಅಷ್ಟರಲ್ಲಿ ರಮೋಲಾ, ಆತನನ್ನು ಬಿಟ್ಟು ಬೇರೆಯವನ ಜತೆ ಮದುವೆ ನಿಶ್ಚಿತಾರ್ಥ ಮಾಡಿಕೊಳ್ಳುತ್ತಾಳೆ. ರಾಜನಿಗೆ ಅವಮಾನ ಕೂಡ ಮಾಡುತ್ತಾಳೆ. ಅದು ಆತನ ಸಿಟ್ಟಿಗೆ ಕಾರಣವಾಗುತ್ತದೆ. ಜೀವನದಲ್ಲಿ ಏನಾದರೂ ಆಗಲಿ ದುಡ್ಡು ಮಾಡಬೇಕು ಎಂದು ನಿಶ್ಚಯಿಸಿದವನೇ ಮೂರೇ ದಿನಗಳಲ್ಲಿ ಮನೆ ಮುಂದೆ ಐಷಾರಾಮಿ ಕಾರು ತಂದು ನಿಲ್ಲಿಸುತ್ತಾನೆ. ಡೆಲಿವರಿ ಬಾಯ್ ಆಗಿದ್ದವನಿಗೆ ಮೂರೇ ದಿನಕ್ಕೆ ಕಾರು ಹೇಗೆ ಬಂತು? ಐಷಾರಾಮಿ ಬದುಕು ಹೇಗೆ ಸಾಧ್ಯವಾಯಿತು? ಎಂಬ ಅಚ್ಚರಿ ಆತನ ತಾಯಿ, ಗೆಳೆಯ ಸೇರಿ ಮಾಜಿ ಪ್ರೇಯಸಿಗೂ ಮೂಡುತ್ತದೆ. ಹಾಗಾದರೆ, ರಾಜ ಅಷ್ಟೆಲ್ಲಾ ದುಡ್ಡು ಹೇಗೆ ಸಂಪಾದಿಸಿದ? ಮೂರೇ ದಿನದಲ್ಲಿ ಕೋಟಿ ದುಡ್ಡು ಎಲ್ಲಿಂದ ಬಂತು? ಹೀಗೆ ಹಲವು ಅಚ್ಚರಿಗಳ ಮೂಲಕ ‘ಬಿಂಗೋ’ ಸಿನಿಮಾ ತೆರೆದುಕೊಳ್ಳುತ್ತದೆ.
ದುಡ್ಡಿನ ಹಿಂದೆ ಬೀಳುವ ಹಲವು ಕಥೆಗಳು ಈಗಾಗಲೇ ಕನ್ನಡ ಸೇರಿ ಪರಭಾಷೆಗಳಲ್ಲೂ ಮೂಡಿಬಂದಿವೆ. ಆ ಸಾಲಿಗೆ ಶಂಕರ್ ನಿರ್ದೇಶನದ ‘ಬಿಂಗೋ’ ಸೇರಿದರೂ, ಸರಳವಾದ ಕಥೆ, ವಿಶೇಷ ನಿರೂಪಣೆ ಹಾಗೂ ಥ್ರಿಲ್ಲಿಂಗ್ ಅಂಶಗಳಿಂದ ಗಮನ ಸೆಳೆಯುತ್ತದೆ. ಕ್ಲೈಮ್ಯಾಕ್ಸ್‌ವರೆಗೂ ಕಥೆ ಬಿಟ್ಟು ಕೊಡದೆ ಕುತೂಹಲವನ್ನು ಕಾಯ್ದಿಟ್ಟುಕೊಂಡಿದ್ದಾರೆ ಶಂಕರ್. ಅನವಶ್ಯಕವಾಗಿ ಯಾವುದೇ ದೃಶ್ಯವನ್ನು ಸೇರಿಸದೆ ನೇರವಾಗಿ ಕಥೆ ಹೇಳಿದ್ದಾರೆ. ಇಲ್ಲಿ ಯಾವ ಪಾತ್ರಕ್ಕೂ ಹೈಪ್ ಕೊಟ್ಟಿಲ್ಲ. ಸಿನಿಮಾದ ರೋಚಕ ತಿರುವುಗಳು ಕೆಲವೊಮ್ಮೆ ನಗಿಸಿದರೆ, ಕೆಲವೊಮ್ಮೆ ಅಚ್ಚರಿ ಮೂಡಿಸುತ್ತವೆ. ಇನ್ನು ಆರ್.ಕೆ.ಚಂದನ್ ಚುರುಕಾಗಿ ನಟಿಸಿದ್ದು, ಮಧ್ಯಮ ವರ್ಗದ ಹುಡುಗನಾಗಿ ಗಮನ ಸೆಳೆಯುತ್ತಾರೆ. ರಕ್ಷಾಗೆ ಕೆಲ ದೃಶ್ಯಗಳು ಸೀಮಿತವಾಗಿದ್ದು, ಕೊಟ್ಟ ಜವಾಬ್ದಾರಿ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ರಾಜೇಶ್ ನಟರಂಗ, ಶ್ರವಣ್, ಅಪೂರ್ವಶ್ರೀ ಪಾತ್ರಗಳು ಚೆನ್ನಾಗಿ ಮೂಡಿಬಂದಿವೆ. ರಾಗಿಣಿ ದ್ವಿವೇದಿ ಪಾತ್ರವೇ ಅಚ್ಚರಿ. ಅದನ್ನು ಸಿನಿಮಾದಲ್ಲಿ ನೋಡಬೇಕಷ್ಟೇ. ಹಿತನ್ ಹಾಸನ್ ಸಂಗೀತ ಕಥೆಗೆ ಪೂರಕವಾಗಿದೆ