ಆರಂಭಕ್ಕೂ ಮುನ್ನವೇ ಬಿಗ್ಬಾಸ್ಗೆ ಬಿಗ್ ಶಾಕ್: ಸೆ.6ರಂದು ಸೀಸನ್ 13 ಶುರುವಾಗೋದೆ ಡೌಟು! Bigg Boss Kannada Season 13
- ಬಿಗ್ ಬಾಸ್ ಕನ್ನಡ ಸೀಸನ್ ಆರಂಭಕ್ಕೂ ಮುನ್ನವೇ ಕಾನೂನು ತೊಡಕು
- ಅನುಮತಿ ನಿರಾಕರಿಸಿ ಬಿಗ್ ಶಾಕ್ ನೀಡಿದ ಸಚಿವ ರಾಮಲಿಂಗಾರೆಡ್ಡಿ
- ಹಿಂದಿನ ದಂಡ ಪಾವತಿಸದ ಹಾಗೂ ನಿಯಮ ಉಲ್ಲಂಘಿಸಿದ ಜಾಲಿವುಡ್ ಸ್ಟುಡಿಯೋ
- ಪರಿಸರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸರ್ಕಾರದ ಎಚ್ಚರಿಕೆ
ಬೆಂಗಳೂರು: ಕನ್ನಡ ಕಿರುತೆರೆ ಲೋಕದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ( Bigg Boss Kannada Season 13 ) ಆರಂಭಕ್ಕೂ ಮುನ್ನವೇ ಅನಿರೀಕ್ಷಿತ ಆಘಾತ ಎದುರಾಗಿದೆ. ನಿಗದಿತ ದಿನದೊಳಗೆ ಶೋ ಶುರುವಾಗುವುದೇ ಅನುಮಾನ ಎಂಬಂತಾಗಿದ್ದು, ಇದಕ್ಕೆ ಅರಣ್ಯ ಹಾಗೂ ಪರಿಸರ ಸಚಿವರ ಕಠಿಣ ನಿಲುವು ಕಾರಣವಾಗಿದೆ.
ಹೌದು, ಕನ್ನಡದ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್ ಕನ್ನಡ' ಸೀಸನ್ 13 ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ನಿನ್ನೆಯಷ್ಟೇ ಕಲರ್ಸ್ ಕನ್ನಡದ ಬಿಗ್ಬಾಸ್ ತಂಡ ಸುದ್ದಿಗೋಷ್ಠಿ ನಡೆಸಿ ಮಾಹಿತಿ ಹಂಚಿಕೊಂಡಿತು. ಇದರ ಬೆನ್ನಲ್ಲೇ, ಕಾರ್ಯಕ್ರಮದ ಮೇಲೊಂದು ಕಾರ್ಮೋಡ ಕವಿದಿದೆ. ಪರಿಸರ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಅರಣ್ಯ ಹಾಗೂ ಪರಿಸರ ಸಚಿವ ರಾಮಲಿಂಗಾರೆಡ್ಡಿ ಅವರು ಶೋ ಆಯೋಜನೆಗೆ ಬ್ರೇಕ್ ಹಾಕಿದ್ದಾರೆ. ಸೆಪ್ಟೆಂಬರ್ 6ರಂದು ಅದ್ದೂರಿಯಾಗಿ ಗ್ರ್ಯಾಂಡ್ ಪ್ರೀಮಿಯರ್ ನಡೆಸಲು ಸಜ್ಜಾಗಿದ್ದ ಆಯೋಜಕರಿಗೆ ಸಚಿವರ ಈ ದಿಢೀರ್ ನಡೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಪ್ರತಿ ಬಾರಿಯಂತೆ ಈ ಸಲವೂ ಬಿಗ್ ಬಾಸ್ ಹೌಸ್ ಅನ್ನು ಬೆಂಗಳೂರು ಹೊರವಲಯದ ಬಿಡದಿ ಸಮೀಪವಿರುವ 'ಜಾಲಿವುಡ್ ಸ್ಟುಡಿಯೋ'ದಲ್ಲಿ ನಿರ್ಮಿಸಲಾಗಿದೆ. ಆದರೆ ಸ್ಟುಡಿಯೋ ಆಡಳಿತ ಮಂಡಳಿಯು ಈ ಬಾರಿಯ ಶೂಟಿಂಗ್‌ಗಾಗಿ ಅರಣ್ಯ ಮತ್ತು ಪರಿಸರ ಇಲಾಖೆಯಿಂದ ಅಗತ್ಯವಿರುವ ಅಧಿಕೃತ ಅನುಮತಿಯನ್ನು ಪಡೆದುಕೊಂಡಿಲ್ಲ ಎಂಬ ಸಂಗತಿ ಈಗ ಬಹಿರಂಗವಾಗಿದೆ. ಕೇವಲ ಅನುಮತಿ ಮಾತ್ರವಲ್ಲದೆ, ಹಿಂದಿನ ಸೀಸನ್‌ನ ಬಾಕಿ ದಂಡದ ಮೊತ್ತವನ್ನು ಕೂಡ ಇನ್ನೂ ಪಾವತಿಸಿಲ್ಲ ಎಂಬುದು ಸರ್ಕಾರದ ಆಕ್ಷೇಪಕ್ಕೆ ಮುಖ್ಯ ಕಾರಣವಾಗಿದೆ.
ಪರಿಸರ ರಕ್ಷಣೆಯ ನಿಯಮಗಳ ಪ್ರಕಾರ ತ್ಯಾಜ್ಯ ನೀರು ಶುದ್ಧೀಕರಣ ಘಟಕ (STP) ಅಳವಡಿಕೆ ಹಾಗೂ ಸಂಸ್ಕರಿಸಿದ ನೀರಿನ ಮರುಬಳಕೆ ಕಡ್ಡಾಯವಾಗಿದ್ದರೂ, ಅಲ್ಲಿ ಇದರ ಸಮರ್ಪಕ ನಿರ್ವಹಣೆ ಆಗಿಲ್ಲ ಎಂದು ಸಚಿವರು ಬೇಸರ ವ್ಯಕ್ತಪಡಿಸಿದ್ದಾರೆ. ಹಸಿರು ನಿಯಮಗಳನ್ನು ಗಾಳಿಗೆ ತೂರಿ ನಡೆಸುವ ಇಂತಹ ಚಟುವಟಿಕೆಗಳಿಗೆ ಮಣಿಯುವ ಪ್ರಶ್ನೆಯೇ ಇಲ್ಲ ಎಂದು ರಾಮಲಿಂಗಾರೆಡ್ಡಿ ಅವರು ಸ್ಪಷ್ಟಪಡಿಸಿದ್ದು, ನಿಯಮಗಳನ್ನು ಸಂಪೂರ್ಣವಾಗಿ ಪಾಲಿಸುವವರೆಗೆ ಯಾವುದೇ ವಿನಾಯಿತಿ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಹಿಂದೆ ಕಳೆದ ಸೀಸನ್ ಸಂದರ್ಭದಲ್ಲೂ ಇದೇ ರೀತಿಯ ಕಾನೂನು ತೊಡಕುಗಳು ಮತ್ತು ಪರಿಸರ ಉಲ್ಲಂಘನೆಯ ಗೊಂದಲಗಳು ಸೃಷ್ಟಿಯಾಗಿ ಬಿಗ್ ಬಾಸ್ ತಂಡಕ್ಕೆ ಸಂಕಷ್ಟ ತಂದೊಡ್ಡಿದ್ದವು. ಈಗ ಮತ್ತೊಮ್ಮೆ ಅದೇ ಹಳೇ ಸಮಸ್ಯೆ ಮರುಕಳಿಸಿರುವುದರಿಂದ, ಕಲರ್ಸ್ ಕನ್ನಡ ವಾಹಿನಿ ಹಾಗೂ ಜಾಲಿವುಡ್ ನಿರ್ವಹಣಾ ಮಂಡಳಿಯು ತರಾತುರಿಯಲ್ಲಿ ಲೋಪಗಳನ್ನು ಸರಿಪಡಿಸಿ ಅನುಮತಿ ಪಡೆಯಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರದ ಈ ಕಠಿಣ ನಿಲುವಿನಿಂದಾಗಿ ಕಾರ್ಯಕ್ರಮ ನಿಗದಿತ ವೇಳಾಪಟ್ಟಿಯಂತೆ ಪ್ರಸಾರವಾಗುತ್ತದೆಯೇ ಎಂಬ ಬಗ್ಗೆ ವೀಕ್ಷಕರಲ್ಲಿ ತೀವ್ರ ಕುತೂಹಲ ಮೂಡಿದೆ. ಒಂದು ವೇಳೆ ಸರ್ಕಾರ ಹೇಳಿದ್ದನ್ನು ಸರಿಯಾಗಿ ನಿರ್ವಹಿಸದೇ ಹೋದಲ್ಲಿ ಸೀಸನ್ 13 ಆರಂಭಕ್ಕೆ ವಿಘ್ನ ಎದುರಾಗುವುದು ಖಚಿತವಾಗಿದೆ.
ಈ ಬಾರಿಯ ಬಿಗ್ಬಾಸ್ ಶೋ ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಏಕೆಂದರೆ, ಈ ಸಲ ವಿಮಾನದ ಥೀಮ್ನಲ್ಲಿ ಬಿಗ್ಬಾಸ್ ಹೌಸ್ ನಿರ್ಮಾಣವಾಗಿದೆ. ಅಲ್ಲದೆ, ಈ ಬಾರಿ ಸಾಮಾನ್ಯ ಜನರನ್ನು ಅಗ್ನಿಪರೀಕ್ಷೆ ಎಂಬ ವಿಧಾನದ ಮೂಲಕ ಆಯ್ಕೆ ಮಾಡಲಾಗಿದೆ. ಒಟ್ಟು ಮೂವರು ಸಾಮಾನ್ಯರು ಸೆಲೆಬ್ರಿಟಿಯ ಜೊತೆ ಬಿಗ್ಬಾಸ್ ಮನೆಯನ್ನು ಪ್ರವೇಶ ಮಾಡಲಿದ್ದಾರೆ. ಸೆ.6 ರಂದು ಗ್ರ್ಯಾಂಡ್ ಟೇಕಾಫ್ ನಡೆಯಬೇಕಿದೆ. ಒಂದು ವೇಳೆ ಈಗ ಎದ್ದಿರುವ ಸಮಸ್ಯೆಯನ್ನು ಬಗೆಹರಿಸದಿದ್ದಲ್ಲಿ ಕಾರ್ಯಕ್ರಮ ಟೇಕಾಫ್ ಆಗುವುದೇ ಅನುಮಾನವಾಗಿದೆ.