Jodettu - "ಉಪಾಧ್ಯಕ್ಷ' ಯಶಸ್ಸಿನ ಬಳಿಕ "ಲಕ್ಷಿ$್ಮಪುತ್ರ'ದಲ್ಲಿ ನಾಯಕನಾಗಿ ನಟಿಸುತ್ತಿರುವ ಹಾಸ್ಯನಟ ಚಿಕ್ಕಣ್ಣ ಅದರ ನಡುವೆಯೇ "ಜೋಡೆತ್ತು' ಸಿನಿಮಾ ಒಪ್ಪಿಕೊಂಡಿದ್ದರು. ಕೆಲ ದಿನಗಳ ಹಿಂದಷ್ಟೇ ಟೀಸರ್ ಮೂಲಕ ಚಿತ್ರದ ಘೋಷಣೆ ಮಾಡಲಾಗಿತ್ತು. ಸದ್ಯ "ಅಯೋಗ್ಯ 2' ಚಿತ್ರದಲ್ಲಿ ಬಿಜಿಯಾಗಿರುವ "ಮದಗಜ' ನಿರ್ದೇಶಕ ಮಹೇಶ್ ಕುಮಾರ್ "ಜೋಡೆತ್ತು'ಗೆ ಆ್ಯಕ್ಷನ್-ಕಟ್ ಹೇಳಬೇಕಿತ್ತು. ಆದರೆ, "ಜೋಡೆತ್ತು' ತಂಡ ಹೊಸ ವರ್ಷದಿಂದ ಚಿತ್ರೀಕರಣ ಪ್ರಾರಂಭಿಸಲು ಸಿದ್ಧತೆ ನಡೆಸುತ್ತಿರುವ ಬೆನ್ನಲ್ಲೇ ಮಹೇಶ್ ತಂಡದಿಂದ ಹೊರ ನಡೆದಿದ್ದಾರೆ. "ಅಯೋಗ್ಯ 2' ಶೂಟಿಂಗ್ನಲ್ಲಿ ಬಿಜಿಯಿರುವ ಕಾರಣ, ಅವರು "ಜೋಡೆತ್ತು' ಚಿತ್ರ ಕೈಬಿಟ್ಟಿದ್ದಾರೆ.
ಹೀಗಾಗಿ "ಅಧ್ಯಕ್ಷ', "ರಾರ್ಬಟ್', "ಕಾಟೇರ' ಮತ್ತು "ದ ಡೆವಿಲ್' ಖ್ಯಾತಿಯ ಚಿತ್ರದ ಛಾಯಾಗ್ರಾಹಕ ಸುಧಾಕರ್ ಎಸ್. ರಾಜ್ ಇದೀಗ ಡೈರೆಕ್ಟರ್ ಕ್ಯಾಪ್ ಧರಿಸಲು ರೆಡಿಯಾಗಿದ್ದಾರೆ. ಛಾಯಾಗ್ರಹಣದ ಜತೆಗೆ ಚೊಚ್ಚಲ ಬಾರಿಗೆ "ಜೋಡೆತ್ತು'ಗೆ ಆ್ಯಕ್ಷನ್-ಕಟ್ ಹೇಳಲಿದ್ದಾರೆ. ಇದೊಂದು ಗ್ರಾಮೀಣ ಸೊಗಡಿನ ಹಿನ್ನೆಲೆಯಲ್ಲಿ ನಡೆಯುವ ಕಥೆಯಾಗಿದ್ದು, ಅದಕ್ಕಾಗಿ ಚಿಕ್ಕಮಗಳೂರಿನಲ್ಲಿ ಹಳ್ಳಿಯೊಂದರ ಬೃಹತ್ ಸೆಟ್ ನಿರ್ಮಿಸಲಾಗಿದೆ. 2026ರ ಜ.5ರಿಂದ ಶೂಟಿಂಗ್ ಆರಂಭವಾಗಲಿದೆ. ಈ ಹಿಂದೆ "ಫೈಟರ್' ನಿರ್ಮಿಸಿದ್ದ ಸೋಮಶೇಖರ್ (ಕಟ್ಟಿಗೇನಹಳ್ಳಿ) ಈ ಸಿನಿಮಾ ನಿರ್ಮಿಸುತ್ತಿದ್ದಾರೆ. ಚಿಕ್ಕಣ್ಣ ಜತೆ ಬಹುಭಾಷಾ ನಟ ಸುನಿಲ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದು, ಉಳಿದ ಕಲಾವಿದರ ಕುರಿತು ಚಿತ್ರತಂಡ ಇನ್ನಷ್ಟೇ ಮಾಹಿತಿ ನೀಡಬೇಕಿದೆ. ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು ವಿ. ಹರಿಕೃಷ್ಣ ಸಂಗೀತದಲ್ಲಿ ಮೂಡಿಬರಲಿವೆ.
"ಜೋಡೆತ್ತು' ನನ್ನ ಕರಿಯರ್ನಲ್ಲೇ ಅತಿ ದೊಡ್ಡ ಬಜೆಟ್ ಸಿನಿಮಾ. 80ರ ದಶಕದಲ್ಲಿ ನಡೆಯುವ ಕಥೆ. ಹಳ್ಳಿಯಲ್ಲಿ ಪ್ರಾರಂಭವಾಗಿ, ಹಳ್ಳಿಯಲ್ಲೇ ಮುಗಿಯುವ ಸ್ಟೋರಿ. ಫ್ಯಾಮಿಲಿ ಸೆಂಟಿಮೆಂಟ್, ಕಾಮಿಡಿ, ಆ್ಯಕ್ಷನ್ ಎಲ್ಲ ಅಂಶಗಳೂ ಇರುವ ಸಿನಿಮಾ. ಜನವರಿಯಲ್ಲಿ ಪ್ರಾರಂಭವಾಗಿ ಮುಂದಿನ ವರ್ಷವೇ ರಿಲೀಸ್ ಆಗಲಿದೆ. ಎಂದು ಮಾಹಿತಿ ನೀಡುತ್ತಾರೆ ನಾಯಕ ಚಿಕ್ಕಣ್ಣ.