ಸತೀಶ್ ನೀನಾಸಂ, ರಚಿತಾ ರಾಮ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದ, ಮಹೇಶ್ ನಿರ್ದೇಶಿಸಿದ್ದ "ಅಯೋಗ್ಯ 2' ಕಳೆದ ಆ. 7ರಂದು ರಿಲೀಸ್ ಆಗಿತ್ತು. ಇದೀಗ ನಾಲ್ಕು ವಾರಗಳನ್ನು ಪೂರೈಸಿರುವ ಚಿತ್ರ, ಸದ್ಯ 30ಕ್ಕೂ ಹೆಚ್ಚು ಕೇಂದ್ರಗಳಲ್ಲಿ 50ನೇ ದಿನದತ್ತ ದಾಪುಗಾಲಿರಿಸಿದೆ. ಜತೆಗೆ ನಾಯಕ ಸತೀಶ್ ನೀನಾಸಂ ಅವರಿಗೂ ಹೊಸ ದಾರಿ ತೆರೆದುಕೊಂಡಿದೆ. "ದ ರೈಸ್ ಆಫ್ ಅಶೋಕ' ಬೆನ್ನಲ್ಲೇ "ಅಯೋಗ್ಯ 2' ಮೂಲಕ ಒಂದೇ ವರ್ಷ ಭಿನ್ನ, ವಿಭಿನ್ನ ಜಾನರ್ಗಳಲ್ಲಿ ಯಶಸ್ಸು ಕಂಡಿದ್ದಾರೆ. ಇದೇ ಖುಷಿಯಲ್ಲಿ ವಿಜಯವಾಣಿ ಜತೆ ಮಾತಿಗೆ ಸಿಕ್ಕಿದ್ದ ಅವರು, "ಇವತ್ತು ಸಿನಿಮಾಗಳು ಥಿಯೇಟರ್ಗಳಲ್ಲಿ ಎರಡು ವಾರ ಪೂರೈಸುವುದೇ ಕಷ್ಟ. ಮೂರ್ನಾಲ್ಕು ವಾರ ಓಡಿದರೆ ಹಿಟ್ ಎನ್ನುತ್ತೇವೆ. ಇಂತಹ ಪರಿಸ್ಥಿತಿಯಲ್ಲಿ "ಅಯೋಗ್ಯ 2' 42 ದಿನಗಳನ್ನು ಪೂರೈಸಿ 50ನೇ ದಿನದತ್ತ ಮುನ್ನುಗ್ಗುತ್ತಿದೆ. ಸಿಂಗಲ್ ಸ್ಕ್ರೀನ್ ಥಿಯೇಟರ್ಗಳು, ಮಲ್ಟಿಪ್ಲೆಕ್ಸ್ಗಳಲ್ಲಿ ಎರಡೂ ಕಡೆಗಳಲ್ಲಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ನಿರ್ಮಾಪಕರು ಖುಷಿಯಾಗಿದ್ದಾರೆ. ಚಿತ್ರದಲ್ಲಿ ಕೆಲಸ ಮಾಡಿದ ನಾವು ಖುಷಿಯಾಗಿದ್ದೇವೆ. ಸಿನಿಮಾ ನೋಡಿದ ಪ್ರೇಕ್ಷಕರೂ ಖುಷಿಯಾಗಿದ್ದಾರೆ. ಒಂದು ಸಿನಿಮಾ ಹೀಗೆ ಎಲ್ಲರಿಗೂ ಖುಷಿ ನೀಡಿದಾಗ, ಎಲ್ಲ ರೀತಿಯಲ್ಲೂ ಯಶಸ್ಸು ಗಳಿಸಿದೆ ಎನ್ನಬಹುದು. ಸೀಕ್ವೆಲ್ನಲ್ಲಿ "ಅಯೋಗ್ಯ 3'ಕ್ಕೆ ಲಿಂಕ್ ನೀಡಿದ್ದೇವೆ ನಿಜ. ಹಾಗಂತ "ಅಯೋಗ್ಯ' ಮತ್ತು "ಅಯೋಗ್ಯ 2' ನಡುವೆ ಏಳು ವರ್ಷ ಗ್ಯಾಪ್ ಆದಂತೆ "ಅಯೋಗ್ಯ 3'ಗೆ ಹೆಚ್ಚು ಸಮಯ ನೀಡುವುದಿಲ್ಲ. ಕೆಲವೇ ತಿಂಗಳಲ್ಲಿ ಆ ಬಗ್ಗೆ ಅಪ್ಡೇಟ್ ನೀಡಲಿದ್ದೇವೆ' ಎಂದು ಮಾಹಿತಿ ನೀಡುತ್ತಾರೆ.
ಮೂರು ಚಿತ್ರಗಳ ಲೈನಪ್
"ಒಂದು ಸಿನಿಮಾ ಯಶಸ್ಸು, ನಟನಾಗಿ ನನ್ನ ಜವಾಬ್ದಾರಿಯನ್ನೂ ಹೆಚ್ಚಿಸುತ್ತದೆ' ಎನ್ನುವ ಸತೀಶ್, "ಬೇರೆ ಬೇರೆ ರೀತಿಯ ಕಂಟೆಂಟ್ಗಳ, ಉತ್ತಮ ಸಿನಿಮಾ ಮಾಡಬೇಕು. 2027ರ ಅಂತ್ಯದ ಒಳಗೆ ಮೂರು ಚಿತ್ರಗಳನ್ನು ಮಾಡಬೇಕು ಅಂತ ಪ್ಲಾ$್ಯನ್ ಮಾಡಿಕೊಂಡಿದ್ದೇನೆ. ಅದರಲ್ಲಿ ಎರಡು ಕಥೆಗಳು ಓಕೆ ಆಗಿವೆ. ಆದಷ್ಟು ಬೇಗ ಹೊಸ ಸಿನಿಮಾ ಘೋಷಿಸಲಿದ್ದೇನೆ' ಎಂದು ಹೇಳಿಕೊಳ್ಳುತ್ತಾರೆ.
"ಲೂಸಿಯಾ 2' ಯಾವಾಗ?
ಇತ್ತೀಚೆಗಷ್ಟೆ ನಿರ್ದೇಶಕ ಪವನ್ ಕುಮಾರ್ ಹಿಟ್ "ಲೂಸಿಯಾ' (2013) ಚಿತ್ರದ ಸೀಕ್ವೆಲ್ ಮಾಡುವ ಬಗ್ಗೆ ಹೇಳಿಕೊಂಡಿದ್ದರು. ಮೊದಲ ಚಿತ್ರದಲ್ಲಿ ನಟಿಸಿದ್ದ ಸತೀಶ್, "ಹೌದು, "ಲೂಸಿಯಾ 2' ಬಗ್ಗೆ ಪವನ್ ಪ್ಲಾ$್ಯನ್ ಮಾಡುತ್ತಿದ್ದಾರೆ. ಆ ಸಿನಿಮಾದಲ್ಲಿ ನಟಿಸುವ ಆಸೆಯಂತೂ ಇದೆ. ಆದರೆ, ಅವರು ಮೊದಲ ಕಥೆಯ ಮುಂದುವರಿದ ಭಾಗ ಮಾಡುತ್ತಾರಾ? ಅಥವಾ ಹೊಸ ಕಥೆ ಹುಡುಕುತ್ತಾರಾ? ಎಂಬುದನ್ನು ಅದು ಅವಲಂಬಿಸಿದೆ. ಅವರ ಜತೆ ಸಂಪರ್ಕದಲ್ಲಿದ್ದೇನೆ. ನೋಡೋಣ' ಎನ್ನುತ್ತಾರೆ.