Toss Review - ಹೆಡ್ಸ್ ಬಿದ್ದರೂ, ಟೈಲ್ ಬಿದ್ದರೂ ಗೆಲುವೇ!
ತಾರಾಗಣ: ಅರ್ಜುನ್ ದೇವ್, ಸುತೇಜ್ ಶೆಟ್ಟಿ, ದೇವದಾಸ್ ಕಾಪಿಕಾಡ್, ಗರುಡ ರಾಮ್, ಬಾಲಾಜಿ ಮನೋಹರ್, ನವೀನ್ ಡಿ. ಪಡೀಲ್, ಕೃತಿ ಶೆಟ್ಟಿ ಮತ್ತಿತರರು
ಅದು ಕಲಾಸೇವೆಯನ್ನು ನಂಬಿದ ಕುಟುಂಬ. ಅಪ್ಪ (ನವೀನ್), ಅಮ್ಮ (ಕೃತಿ) ಇಬ್ಬರೂ ತಂಡ ಕಟ್ಟಿಕೊಂಡು ರಂಗಭೂಮಿಯನ್ನು ಜೀವಿಸುತ್ತಿರುತ್ತಾರೆ. ಮಗ ಶಿವನಿಗೆ (ಅರ್ಜುನ್) ಅಮ್ಮ ಅಂದರೆ ಪ್ರಾಣ. ಅಮ್ಮನ ಮಾತನ್ನು ಮೀರದ ಹುಡುಗ ಬಾಲ್ಯದಲ್ಲೇ ಆಕೆಯನ್ನು ಕಳೆದುಕೊಳ್ಳುತ್ತಾನೆ. ಆದರೆ, ಅಮ್ಮನ ಆಜ್ಞೆಯಂತೆ ಏನೇ ಕೆಲಸ ಮಾಡಬೇಕಿದ್ದರೂ ಅಥವಾ ಜಗಳ, ಹೊಡೆದಾಟ, ಪ್ರೀತಿ ಯಾವ ವಿಷಯವಾದರೂ "ಟಾಸ್' ಚಿಮ್ಮಿಸಿ ತೀರ್ಮಾನಿಸುತ್ತಿರುತ್ತಾನೆ. ಅದರ ನಡುವೆಯೇ ರಂಗ ತಂಡದ ಇಬ್ಬರು ಸದಸ್ಯರ ಕೊಲೆಗಳಾಗುತ್ತವೆ. ಅಲ್ಲಿಂದ "ಟಾಸ್' ಇನ್ನೊಂದು ಹಾದಿ ಹಿಡಿಯುತ್ತದೆ. ಹಾಗಾದರೆ ಕೊಲೆಗಾರರು ಯಾರು? ಕೊಲೆ ಮಾಡಲು ಏನು ಕಾರಣ? ಅದಕ್ಕೂ ಶಿವನಿಗೂ ಏನು ಸಂಬಂಧ? ತಿಳಿಯಲು "ಟಾಸ್' ನೋಡಿ.
"ಗರುಡ ಗಮನ ವೃಷಭ ವಾಹನ', "ಕಾಂತಾರ', "ಸು ಫ್ರಮ್ ಸೋ' ಅಂತೆಯೇ "ಟಾಸ್' ಕೂಡ ಕರಾವಳಿ ಕಥೆ. ಹೀಗಾಗಿ ಅಲ್ಲಿನ ಕಲಾವಿದರನ್ನು ಸೇರಿಸಿ ಅಲ್ಲಿನ ಲೊಕೇಷನ್ಗಳಲ್ಲೇ ಅವರದೇ ಭಾಷಾ ಸೊಗಡಿನಲ್ಲಿ ಅರ್ಜುನ್ ದೇವ್ ಒಂದೊಳ್ಳೆ ಕಮರ್ಷಿಯಲ್ ಎಂಟರ್ಟೇನ್ಮೆಂಟ್ ರೊಮ್ಯಾಂಟಿಕ್ ಆ್ಯಕ್ಷನ್ ಚಿತ್ರ ಕಟ್ಟಿಕೊಟ್ಟಿದ್ದಾರೆ. ಹಾಗೇ ಅವರು ನಾಲ್ಕು ವರ್ಷಗಳ ಗ್ಯಾಪ್ ಏಕೆ ತೆಗೆದುಕೊಂಡರು ಎಂಬುದು ಚಿತ್ರ ನೋಡಿದವರಿಗೆ ತಿಳಿಯಲಿದೆ. ಆ್ಯಕ್ಷನ್ ಮತ್ತು ಡೈಲಾಗ್ ಡೆಲಿವರಿಯಲ್ಲಿ ಮಾಸ್ ಆಗುವ ಕಾಣುವ ಅರ್ಜುನ್ ನಟನೆ, ನಿರ್ದೇಶನ ಎರಡಲ್ಲೂ ಅಚ್ಚುಕಟ್ಟು. ಅವರ ತಂದೆ ತುಳು ರಂಗಭೂಮಿ, ಚಿತ್ರರಂಗದ ದಿಗ್ಗಜ ಡಾ. ದೇವದಾಸ್ ಕಾಪಿಕಾಡ್ ಅವರೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದು ಕರಾವಳಿ ಕಾಮಿಡಿ ಚಿತ್ರದಲ್ಲಿ ಹೇರಳವಾಗಿದೆ. ಅದರ ಜತೆಗೆ ಆ್ಯಕ್ಷನ್, ಲವ್, ಸೆಂಟಿಮೆಂಟ್, ಸಸ್ಪೆನ್ಸ್ ಅಂಶಗಳೂ ಚಿತ್ರವನ್ನು ನೋಡಿಸಿಕೊಂಡು ಹೋಗುತ್ತದೆ. ಅರ್ಜುನ್ಗೆ ಸರಿಸಮನಾಗಿ ಸಾಥ್ ನೀಡಲು ನಾಯಕಿ ಸುತೇಜ್ ಶೆಟ್ಟಿ ಪ್ರಯತ್ನಿಸಿದ್ದಾರೆ. ನವೀನ್ ಡಿ. ಪಡೀಲ್, ಅರವಿಂದ್ ಬೋಳಾರ್, ಬೋಜರಾಜ ವಾಮಂಜೂರ್, ಪ್ರಕಾಶ್ ತೂಮಿನಾಡ್, ದೀಪಕ್ ರೈ ಪಾಣಾಜೆ ಎಂದಿನಂತೆ ಲೀಲಾಜಾಲವಾಗಿ ನಗಿಸುತ್ತಾರೆ. ಜತೆಗೆ ಗರುಡ ರಾಮ್, ಕೃತಿ ಶೆಟ್ಟಿ, ಬಾಲಾಜಿ ಮನೋಹರ್ ಕೂಡ ಚಿತ್ರವನ್ನು ಪ್ರೇಕ್ಷಕರಿಗೆ ಹತ್ತಿರವಾಗಿಸುತ್ತಾರೆ. ಮಣಿಕಾಂತ್ ಕದ್ರಿ ಸಂಗೀತ ಮತ್ತು ಜೋಯಲ್ ಶಮನ್ ಛಾಯಾಗ್ರಹಣದಲ್ಲಿ ಹಾಡುಗಳು ಶ್ರೀಮಂತವಾಗಿ ಕಾಣುತ್ತವೆ.