ಶೂಟಿಂಗ್ ವೇಳೆ ಗಾಯಗೊಂಡಿದ್ದ ನಟ ಅಜೇಯ್ ರಾವ್
- "ರಾಧೇಯ' ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ಅಜೇಯ್ ರಾವ್ ಮಿಂಚಿದ್ದಾರೆ
- ವೃತ್ತೀಜಿವನದಲ್ಲೇ ಅತ್ಯಂತ ಕ್ರೌರ್ಯವಿರುವ ಚಿತ್ರವಿದು ಎಂದು ಅಜೇಯ್ ಹೇಳಿಕೊಂಡಿದ್ದಾರೆ
- ರಾಧೇಯ' ಸಾಹಸ ಸನ್ನಿವೇಶದ ಚಿತ್ರೀಕರಣದ ಸಮಯದಲ್ಲಿ ಅಜೇಯ್ ಕಾಲಿಗೆ ಪೆಟ್ಟು ಬಿದ್ದಿತ್ತು
- ಜನವರಿಯಲ್ಲಿ ಅಜೇಯ್ ಆ್ಯಕ್ಷನ್-ಕಟ್ ಹೇಳಲಿರುವ ಸಿನಿಮಾ ಘೋಷಣೆಯಾಗುವ ನಿರೀಕ್ಷೆ ಇದೆ.
Ajay Rao: "ಯುದ್ಧಕಾಂಡ' ಚಿತ್ರದ ಮೂಲಕ ಮತ್ತೆ ಸಕ್ಸಸ್ ಟ್ರ್ಯಾಕ್ಗೆ ಮರಳಿರುವ ನಟ ಅಜೇಯ್ ರಾವ್ ಇದೀಗ ಅದೇ ಹಾದಿಯಲ್ಲಿ ಮುಂದುವರಿಯುವ ಆತ್ಮವಿಶ್ವಾಸದಲ್ಲಿದ್ದಾರೆ. ಅದಕ್ಕೆ ತಕ್ಕಂತೆ "ರಾಧೇಯ' ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ಅಜೇಯ್ ಮಿಂಚಿದ್ದಾರೆ. ಇದೊಂದು ಕ್ರೈಮ್ ಡ್ರಾಮಾ ಜಾನರ್ ಚಿತ್ರವಾಗಿದ್ದು, ವೇದಗುರು ಚೊಚ್ಚಲ ಬಾರಿಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಅಜೇಯ್ಗೆ ಸೋನಲ್ ಮೊಂಟೇರೊ ನಾಯಕಿಯಾಗಿದ್ದು, ಜತೆಗೆ ಧನ್ಯಾ ಬಾಲಕೃಷ್ಣ, ಅರವಿಂದ್ ರಾವ್, ಗಿರೀಶ್ ಶಿವಣ್ಣ ತಾರಾಗಣದಲ್ಲಿದ್ದಾರೆ. "ವೃತ್ತೀಜಿವನದಲ್ಲೇ ಅತ್ಯಂತ ಕ್ರೌರ್ಯವಿರುವ ಚಿತ್ರವಿದು' ಎನ್ನುವ ಅಜೇಯ್, ಮಾಸ್ ಅವತಾರದಲ್ಲಿ ಮಿಂಚಿದ್ದಾರೆ.
ಪಾತ್ರದ ಬಗ್ಗೆ, ""ರಾಧೇಯ' ಆ್ಯಕ್ಷನ್ ಚಿತ್ರವಾದರೂ, ಭಾವನಾತ್ಮಕವಾಗಿಯೂ ಜನರನ್ನು ಮುಟ್ಟುವ ಕಥೆಯಿದೆ. "ತಾಯಿಗೆ ತಕ್ಕ ಮಗ' ಚಿತ್ರದಲ್ಲಿ ಹೆಚ್ಚು ಆ್ಯಕ್ಷನ್ ಇದ್ದ ಕಾರಣ "ಎ' ಪ್ರಮಾಣ ಪತ್ರ ದೊರೆತಿತ್ತು. ಆದರೆ, ಈ ಸಿನಿಮಾ ಅದನ್ನೂ ಮೀರಿಸುತ್ತದೆ. ನನ್ನ ಕರಿಯರ್ನ ಅತ್ಯಂತ ಕ್ರೌರ್ಯಯುತ ಚಿತ್ರ' ಎಂದು ಹೇಳಿಕೊಳ್ಳುತ್ತಾರೆ ಅಜೇಯ್ ರಾವ್.
ಆ್ಯಕ್ಷನ್ ವೇಳೆ ಹರಿದ ಎಸಿಎಲ್
"ರಾಧೇಯ' ಚಿತ್ರದ ಸಾಹಸ ಸನ್ನಿವೇಶದ ಚಿತ್ರೀಕರಣದ ಸಮಯದಲ್ಲಿ ಅಜೇಯ್ ರಾವ್ಗೆ ಕಾಲಿಗೆ ಪೆಟ್ಟು ಬಿದ್ದಿತ್ತು. ಆದರೆ, ಚಿತ್ರಕ್ಕೆ ಸಮಸ್ಯೆ ಆಗದಿರಲೆಂದು ಪ್ರಚಾರದಲ್ಲಿ ಭಾಗಿಯಾಗಿ, ಇತ್ತೀಚೆಗಷ್ಟೆ ಸರ್ಜರಿಗೆ ಒಳಗಾಗಿದ್ದಾರೆ. ಈ ಬಗ್ಗೆ, ""ತಾಯಿಗೆ ತಕ್ಕ ಮಗ' ಸಮಯದಲ್ಲೂ ಕಾಲಿಗೆ ಪೆಟ್ಟು ಬಿದ್ದಿತ್ತು. ಬಳಿಕ ಆಗಾಗ ಪೆಟ್ಟು ಬೀಳುತ್ತಿತ್ತು. "ರಾಧೇಯ' ಆ್ಯಕ್ಷನ್ ಸಮಯದಲ್ಲಿ ಮತ್ತೊಮ್ಮೆ ತೀವ್ರವಾಗಿ ಪೆಟ್ಟು ಬಿದ್ದು, ಎಸಿಎಸ್ ಸಂಪೂರ್ಣ ಹರಿದಿತ್ತು. ಹೀಗಾಗಿ ಸರ್ಜರಿಗೆ ಒಳಗಾಗಬೇಕಾಯಿತು. ಇದೀಗ ಗುಣಮುಖನಾಗುತ್ತಿದ್ದೇನೆ' ಎನ್ನುತ್ತಾರೆ ಅಜೇಯ್.
ಆ್ಯಕ್ಟಿಂಗ್ ಜತೆಗೆ ಆ್ಯಕ್ಷನ್-ಕಟ್
"ರಾಧೇಯ' ಶುಕ್ರವಾರ ತೆರೆಗೆ ಬರಲಿದ್ದು, ಅದರ ಬೆನ್ನಲ್ಲೇ "ಸರಳ ಸುಬ್ಬರಾವ್' ಎಂಬ ಮತ್ತೊಂದು ಸಿನಿಮಾ ರಿಲೀಸ್ಗೆ ರೆಡಿಯಿದೆ. ಜತೆಜತೆಗೆ ಇನ್ನೂ ಹೆಸರಿಡದ ಇನ್ನೊಂದು ಚಿತ್ರದ ಶೂಟಿಂಗ್ ಕೂಡ ಪೂರ್ಣಗೊಂಡಿದೆ. ಅದರ ನಡುವೆ ಅಜೇಯ್ ಒಂದು ಕಥೆಗೆ ಓಕೆ ಮಾಡಿದ್ದು, ಅದಕ್ಕೆ ನಿರ್ಮಾಪಕರ ಹುಡುಕಾಟ ನಡೆಯುತ್ತಿದೆಯಂತೆ. ಇದೆಲ್ಲದರ ಮಧ್ಯೆ ಅವರು ನಿರ್ದೇಶನಕ್ಕೂ ಸಿದ್ಧತೆ ನಡೆಸುತ್ತಿದ್ದಾರಂತೆ. ಎಲ್ಲವೂ ಅಂದುಕೊಂಡಂತಾದರೆ ಜನವರಿಯಲ್ಲೇ ಅಜೇಯ್ ಆ್ಯಕ್ಷನ್-ಕಟ್ ಹೇಳಲಿರುವ ಸಿನಿಮಾ ಘೋಷಣೆಯಾಗುವ ನಿರೀಕ್ಷೆ ಇದೆ.