Umashree 
ಸ್ಯಾಂಡಲ್‌ವುಡ್

Umashree - ಹಿರಿಯ ನಟಿ ಉಮಾಶ್ರೀ ಡಬಲ್ ಮೀನಿಂಗ್ ಚಿತ್ರಗಳಿಂದ ಹೊರಬಂದಿದ್ದೇಗೆ ಗೊತ್ತಾ?

Umashree -
ವಿಧಾನ ಪರಿಷತ್​ ಉಪ ಸಭಾಪತಿ, ಹಿರಿಯ ನಟಿ ಉಮಾಶ್ರೀ ನೂರಾರು ಸಿನಿಮಾಗಳಲ್ಲಿ ಭಿನ್ನ, ವಿಭಿನ್ನ ಪಾತ್ರಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಮೂಡಿಸಿದ್ದಾರೆ. ಆದರೆ, ಸಿನಿಮಾ ರಂಗಕ್ಕೆ ಪದಾರ್ಪಣೆ ಮಾಡಿದ ಪ್ರಾರಂಭದಲ್ಲಿ ಹಲವು ವರ್ಷಗಳ ಕಾಲ ಅವರು ದ್ವಂದ್ವಾರ್ಥದ ಸಂಭಾಷಣೆ ಇರುವ ಪಾತ್ರಗಳಲ್ಲೇ ಹೆಚ್ಚು ನಟಿಸಿದ್ದರಂತೆ. ಆ ಡಬಲ್​ ಮೀನಿಂಗ್​ ಸರಪಳಿಯಿಂದ ಹೊರಬಂದ ಬಗ್ಗೆ ಇತ್ತೀಚೆಗಷ್ಟೆ ಮುಕ್ತವಾಗಿ ಹೇಳಿಕೊಂಡಿದ್ದಾರೆ. "ನಾನು ಮತ್ತು ಎನ್​.ಎಸ್​. ರಾವ್​ ಜತೆಯಾಗಿ ಹಲವು ಸಿನಿಮಾಗಳಲ್ಲಿ ನಟಿಸಿದ್ದೆವು. ನಮ್ಮನ್ನು ನಿಜವಾಗಲೂ ಗಂಡ - ಹೆಂಡತಿ ಅಂತ ಪ್ರೇಕ್ಷಕರು ಅಂದುಕೊಂಡುಬಿಟ್ಟಿದ್ದರು. ನಾಯಕ&ನಾಯಕಿ ಸಮಾನವಾಗಿ ಹೆಸರು ಮಾಡಿದ್ದ, ಬಾಕ್ಸಾಫಿಸಿನಲ್ಲಿ ಹಣ ತಂದುಕೊಟ್ಟ ಹಿಟ್​ ಕಾಂಬಿನೇಷನ್​ ನಮ್ಮದು. 1989&90ರ ಆಸುಪಾಸಿನಲ್ಲಿ ಎನ್​.ಎಸ್​. ರಾವ್​ ಅವರು ನಿಧನ ಹೊಂದಿದರು. ಬಳಿಕ, ಅವರಿಲ್ಲದೇ ಉಮಾಶ್ರೀ ಕೂಡ ಇಲ್ಲ ಅಂತ ಚಿತ್ರರಂಗ ತೀರ್ಮಾನಿಸಿಬಿಟ್ಟಿತ್ತು. ನಂತರ ನನಗೆ ಸುಮಾರು ಒಂದು ವರ್ಷ ಅವಕಾಶವೇ ಇಲ್ಲದಂತಾಗಿತ್ತು. ಅಲ್ಲಿಯವರೆಗೆ ಹತ್ತು ವರ್ಷಗಳ ಕಾಲ ಡಬಲ್​ ಮೀನಿಂಗ್​ ಡೈಲಾಗ್​ಗಳನ್ನು ಹೇಳಿ ಹೇಳಿ ಅದಕ್ಕೆ ಸೀಮಿತವಾಗಿಬಿಟ್ಟಿದ್ದೆ. ನನ್ನನ್ನು ರಂಗಭೂಮಿಯಲ್ಲಿ ನೋಡಿದವರು, ಎಷ್ಟು ಒಳ್ಳೆಯ ಕಲಾವಿದೆ, ಸಿನಿಮಾದಲ್ಲಿ ಬರೀ ಈ ರೀತಿಯ ಪಾತ್ರಗಳನ್ನೇ ಮಾಡುತ್ತಿದ್ದಾರೆ ಅಂತ ಹೇಳುತ್ತಿದ್ದರು. ಒಂದು ವರ್ಷದ ಬಳಿಕ ನನಗೆ ಓಂಸಾಯಿಪ್ರಕಾಶ್​ "ಗೋಲ್ಮಾಲ್​ ರಾಧಾಕೃಷ್ಣ'ದಲ್ಲಿ ಮೊದಲ ಅವಕಾಶ ನೀಡಿದರು. ಆಗಲೇ ಅವರಿಗೆ ಡಬಲ್​ ಮೀನಿಂಗ್​ ಮಾಡಲ್ಲ ಅಂತ ಹೇಳಿದ್ದೆ. ಅವರು ನನಗೆ ಒಂದೂ ದ್ವಂದ್ವಾರ್ಥ ಸಂಭಾಷಣೆ ಇಲ್ಲದೇ, ನೀಟ್​ ಕಾಮಿಡಿ ಕೊಟ್ಟರು. ಆ ನಂತರ ನಾನು ಡಬಲ್​ ಮೀನಿಂಗ್​ ಮಾಡಲಿಲ್ಲ' ಎಂದು ನೆನಪಿನ ಬುತ್ತಿ ತೆರೆದಿಟ್ಟರು. ಅಂದಹಾಗೆ, ಅವರ ಈ ಮಾತಿಗೆ ವೇದಿಕೆಯಾಗಿದ್ದು ಹಿರಿಯ ನಿರ್ದೇಶಕ ಓಂಸಾಯಿ ಪ್ರಕಾಶ್​ ಅವರ 106ನೇ ಚಿತ್ರ "ಕಾಮನ್​ಮ್ಯಾನ್​' ಆಡಿಯೋ ಬಿಡುಗಡೆ ಕಾರ್ಯಕ್ರಮ. "ಬೆಟೊನಾ ಬೆಟೊನಾ' ಎಂದು ಸಾಗುವ ಪೆಪ್ಪಿ ಹಾಡನ್ನು ಬಿಡುಗಡೆ ಮಾಡಿದ ಉಮಾಶ್ರೀ ತಂಡಕ್ಕೆ ಶುಭಹಾರೈಸಿದರು. "ಕೆರೆಬೇಟೆ' ಖ್ಯಾತಿಯ ಗೌರಿಶಂಕರ್​, ಶೋನಾ ಲಾದ್ವಾ, ಸಬ್ಬಿ ಸೂರಿ, ಬಲರಾಜವಾಡಿ, ರಮೇಶ್​ ಭಟ್​, ಸತೀಶ್​ ಚಂದ್ರ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಎನ್​. ನರಸಿಂಹಮೂರ್ತಿ ನಿರ್ಮಿಸಿರುವ ಈ ಸಿನಿಮಾ, ವಿನಯ್​ ಚಂದ್ರ ಸಂಗೀತದಲ್ಲಿ ಮೂಡಿಬಂದಿದ್ದು, ಇದೇ 25ರಂದು ರಾಜ್ಯಾದ್ಯಂತ ರಿಲೀಸ್​ ಆಗಲಿದೆ.

ತಾರೆಯರಿಂದ ನಾಲ್ಕು ಹಾಡುಗಳ ರಿಲೀಸ್​

ಒಂದು ಹಾಡನ್ನು ಉಮಾಶ್ರೀ ಬಿಡುಗಡೆ ಮಾಡಿದರೆ, ಪ್ರಿಯಾಂಕಾ ಉಪೇಂದ್ರ, ವಿನೋದ್​ ಪ್ರಭಾಕರ್​ ಮತ್ತು ರಮೇಶ್​ ಭಟ್​ ಉಳಿದ ಮೂರು ಸಾಂಗ್​ಗಳನ್ನು ರಿಲೀಸ್​ ಮಾಡಿದರು. ಡಾ. ವಿ. ನಾಗೇಂದ್ರ ಪ್ರಸಾದ್​ ಮತ್ತು ಸರ್ವೇಶ್​ ತಲಾ ಎರಡು ಹಾಡುಗಳನ್ನು ಬರೆದಿದ್ದು, ನಟಿ ಚೈತ್ರಾ ಜೆ. ಆಚಾರ್​, ಕೈಲಾಶ್​ ಖೇರ್​, ಬಾಬಾ ಸೆಹ್ಗಲ್​, ಜಾವೆದ್​ ಅಲಿ ಧ್ವನಿಯಾಗಿದ್ದಾರೆ. ಒಬ್ಬ ಸಾಮಾನ್ಯ ಪ್ರಜೆ ರಾಜ್ಯದ ಮುಖ್ಯಮಂತ್ರಿಯಾದರೆ, ಏನೆಲ್ಲ ಸುಧಾರಣೆ ಮಾಡಬಹುದು ಎಂಬುದರ ಸುತ್ತ ಈ ಪೊಲಿಟಿಕಲ್​ ಆ್ಯಕ್ಷನ್​ ಕಾಮಿಡಿ ಕಥೆ ಸಾಗುತ್ತದೆ.